ಬೆಂಗಳೂರು: ಮಹತ್ವದ ವಿದ್ಯಮಾನವೊಂದರಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಬಿಜೆಪಿ ನಾಯಕ ಎಸ್.ಎಂ.ಕೃಷ್ಣ ಅಳಿಯ ಸಿದ್ಧಾರ್ಥ ಮಾಲಿಕತ್ವದ ಕಫೆ ಕಾಫಿ ಡೇ ಮೇಲೆ ಕಚೇರಿಗಳ ಮೇಲೆ ಗುರುವಾರ ಬೆಳ್ಳಂಬೆಳಗ್ಗೆ ಏಕಕಾಲದಲ್ಲಿ ದಾಳಿ ನಡೆಸಿ ಶಾಕ್ ನೀಡಿದ್ದಾರೆ.
40 ಕ್ಕೂ ಹೆಚ್ಚು ಅಧಿಕಾರಿಗಳು ಬೆಂಗಳೂರಿನ ಮಲ್ಯ ರಸ್ತೆಯಲ್ಲಿರುವ ಕಾಫಿ ಡೇ ಕಚೇರಿಯ ಮೇಲೆ ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.
ಸದಾಶಿನ ನಗರದಲ್ಲಿರುವ ನಿವಾಸ,ಹಾಸನದಲ್ಲಿರುವ ಕಾಫಿ ಕ್ಯೂರಿಂಗ್ ಕೇಂದ್ರ, ಚಿಕ್ಕಮಗಳೂರಿನಲ್ಲೂ ದಾಳಿ ನಡೆದಿದ್ದು, ಹೊಟೇಲ್ ಸೆರಾಯ್ ಮತ್ತು ಕಾಫಿ ಡೇ ಕಚೇರಿ, ಮೂಡಿಗೆರೆಯಲ್ಲಿರುವ ಕಾಫಿ ಎಸ್ಟೇಟ್‌ನ ಮೇಲೂ ದಾಳಿ ನಡೆದಿದೆ. ಚೇತನಾಹಳ್ಳಿಯಲ್ಲಿರುವ ಎಸ್ಟೇಟ್‌ನಲ್ಲಿ ಬ್ರಿಟೀಷ್ ಕಾಲದ ಬಂಗಲೆಯಲ್ಲಿ ಸಿದ್ಧಾರ್ಥ ತಂದೆ ಗಂಗಯ್ಯ ಹೆಗ್ಡೆ , ತಾಯಿ ವಾಸಂತಿ ವಾಸವಾಗಿದ್ದಾರೆ.
ಸಚಿವ ಡಿ.ಕೆ.ಶಿವಕುಮಾರ್ ಅವರ ಆಪ್ತ ರಜನೀಶ್ ಮೇಲೆ ನಡೆದ ಐಟಿ ದಾಳಿಯ ಮುಂದುವರಿದ ಭಾಗವಾಗಿ ಈ ದಾಳಿ ನಡೆದಿದೆ ಎಂದು ಹೇಳಲಾಗಿದೆ.
1996 ರಲ್ಲಿ ಆರಂಭವಾದ ಕಾಫಿ ಡೇ ದೇಶದ 29 ರಾಜ್ಯಗಳಲ್ಲಿ 1530 ಮಳಿಗೆಗಳನ್ನು ಹೊಂದಿದೆ. ವಿದೇಶದಲ್ಲಿ ಆಸ್ಟ್ರೀಯಾ, ಜೆಕ್ ಗಣರಾಜ್ಯ, ಮಲೇಷ್ಯಾ, ಈಜಿಪ್ತ್ ಮತ್ತು ನೇಪಾಳದಲ್ಲೂ ಹಲವು ಮಳಿಗೆಗಳಿವೆ.
ಹೆಚ್ಚಿನ ವಿವರ ನಿರೀಕ್ಷಿಸಲಾಗುತ್ತಿದೆ.