Advertisement

ಗುತ್ತಿಗೆದಾರರ ಮನೆ, ಕಚೇರಿ, ಹೊಟೇಲ್‌ ಮೇಲೆ ಐಟಿ ದಾಳಿ

08:50 AM May 05, 2018 | Team Udayavani |

ಕಾಪು: ಕಾಪುವಿನ ಇಬ್ಬರು ಗುತ್ತಿಗೆದಾರರ ಮನೆ ಮತ್ತು ಕಚೇರಿಗಳ ಮೇಲೆ ಶುಕ್ರವಾರ ಐಟಿ ದಾಳಿ ನಡೆದಿದ್ದು, ವಿವಿಧ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ. ದೇವಿಪ್ರಸಾದ್‌ ಕನ್‌ ಸ್ಟ್ರಕ್ಷನ್‌ ಪ್ರೈ. ಲಿ.ನ ಆಡಳಿತ ನಿರ್ದೇಶಕ ವಾಸುದೇವ ಶೆಟ್ಟಿ ಅವರ ಕಾಪುವಿನ ಮನೆ, ಮನೆಯ ಬಳಿಯಿರುವ ಕಚೇರಿ, ಕೊಲ್ಲೂರಿನ ಹೊಟೇಲ್‌ ಮತ್ತು ಬೆಂಗಳೂರಿನ ಕಚೇರಿ ಮೇಲೆ ಸುಮಾರು 20 ಮಂದಿ ಅಧಿಕಾರಿಗಳ ತಂಡ ಏಕಕಾಲದಲ್ಲಿ ದಾಳಿ ನಡೆಸಿದೆ. ವಾಸುದೇವ ಶೆಟ್ಟಿ ಶುಕ್ರವಾರ ಬೆಳಗ್ಗೆ ಬೆಂಗಳೂರಿನಿಂದ ಮುಂಬಯಿಗೆ ತೆರಳಿದ್ದರು. ಅವರ ಅನುಪಸ್ಥಿತಿಯಲ್ಲಿ ಪತ್ನಿ ಮತ್ತು ಕಚೇರಿಯ ಸಿಬಂದಿಗಳಿಂದ ಅಧಿಕಾರಿಗಳು ವಿವಿಧ ಮಾಹಿತಿಗಳನ್ನು ಕಲೆ ಹಾಕಿದ್ದಾರೆ.

Advertisement

12 ಮಂದಿಯ ತಂಡ
ಬ್ರಹ್ಮಲಿಂಗೇಶ್ವರ ಕನ್‌ ಸ್ಟ್ರಕ್ಷನ್ಸ್‌ನ ಆಡಳಿತ ನಿರ್ದೇಶಕ ಕಿಶೋರ್‌ ಕುಮಾರ್‌ ಅವರ ಕಳತ್ತೂರಿನಲ್ಲಿರುವ ಮನೆ ಮತ್ತು ಕಾಪುವಿನ ಕಚೇರಿಗೆ 12 ಮಂದಿ ಐಟಿ ಅಧಿಕಾರಿಗಳ ತಂಡ ದಾಳಿ ನಡೆಸಿದೆ.

ಸಂಜೆವರೆಗೂ ಪರಿಶೀಲನೆ
ದಾಳಿ ಮತ್ತು ದಾಖಲೆ ಪರಿಶೀಲನ ಕಾರ್ಯ ಸಂಜೆಯವರೆಗೂ ಮುಂದುವರಿದಿದೆ. ಹೆಚ್ಚಿನ ಮಾಹಿತಿಗಳು ಲಭ್ಯವಾಗಿಲ್ಲ.

ಪೂರ್ಣ ಸಹಕಾರ: ವಾಸುದೇವ ಶೆಟ್ಟಿ
ದಾಳಿಯ ಬಗ್ಗೆ ಸ್ಪಷ್ಟನೆ ನೀಡಿರುವ ವಾಸುದೇವ ಶೆಟ್ಟಿ, ನಾವು ಯಾವುದೇ ರೀತಿಯ ಅಕ್ರಮ ನಡೆಸಿಲ್ಲ. ತೆರಿಗೆ ವಂಚನೆ ಮಾಡಿಲ್ಲ. ಅಧಿಕಾರಿಗಳು ಕೇಳಿರುವ ಎಲ್ಲ ಮಾಹಿತಿಗಳನ್ನೂ ಒದಗಿಸುವಂತೆ ಸಿಬಂದಿಗೆ ಸೂಚನೆ ನೀಡಿದ್ದೇವೆ. ಕಾಪುವಿಗೆ ಮರಳಿ ಅಧಿಕಾರಿಗಳೊಂದಿಗೆ ಸಹಕರಿಸಲಿದ್ದೇನೆ ಎಂದು ಹೇಳಿದ್ದಾರೆ.

ಪಾರದರ್ಶಕ ವ್ಯವಹಾರ: ಕಿಶೋರ್‌
ದಾಳಿಯಿಂದ ಯಾವುದೇ ರೀತಿಯ ತೊಂದರೆಯಾಗಿಲ್ಲ. ಗುತ್ತಿಗೆದಾರನಾಗಿರುವ ನಾನು ಸಂಪೂರ್ಣ ವ್ಯವಹಾರವನ್ನು ಪಾರದರ್ಶಕ ರೀತಿಯಲ್ಲಿ ನಡೆಸಿಕೊಂಡು ಬರುತ್ತಿದ್ದು, ಆಧಿಕಾರಿಗಳಿಗೆ ಎಲ್ಲ ದಾಖಲೆ ಮತ್ತು ಮಾಹಿತಿ ನೀಡಿದ್ದೇನೆ. ಇಂತಹ ದಾಳಿ ಜಿಲ್ಲೆಯ ಹಲವೆಡೆ ನಡೆದಿದ್ದು, ಅಧಿಕಾರಿಗಳೊಂದಿಗೆ ಸಂಪೂರ್ಣ ರೀತಿಯಲ್ಲಿ ಸಹಕರಿಸುವುದಾಗಿ ಕಿಶೋರ್‌ ಕುಮಾರ್‌ ಗುರ್ಮೆ ಸ್ಪಷ್ಟಪಡಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next