ರಾಣಿಬೆನ್ನೂರು/ಹುಬ್ಬಳ್ಳಿ: ಮಾಜಿ ಸಚಿವ ಹಾಗೂ ವಿಧಾನ ಪರಿಷತ್ ಸದಸ್ಯ ಆರ್. ಶಂಕರ್ ಅವರ ರಾಣಿಬೆನ್ನೂರು ನಿವಾಸದ ಮೇಲೆ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ಮಂಗಳವಾರ ತಡರಾತ್ರಿ ದಾಳಿ ನಡೆಸಿದ್ದಾರೆ.
ಈ ಸಂದರ್ಭದಲ್ಲಿ ಮಾಜಿ ಸಚಿವರ ಭಾವಚಿತ್ರ ಹೊಂದಿರುವ ಸೀರೆಗಳ ಬಾಕ್ಸ್, ತಟ್ಟೆ, ಸ್ಕೂಲ್ ಬ್ಯಾಗ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಹಾವೇರಿ ಉಪವಿಭಾಗಾ ಧಿಕಾರಿ ಅವರು ದಾಖಲೆ ಪತ್ರ, ಬಿಲ್ ಮತ್ತು ಸ್ಟಾಕ್ ಚೆಕ್ ತಪಾಸಣೆ ನಡೆಸಿದ್ದಾರೆ. ಅನಂತರ ಸರಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ತಿಳಿಸಿದ್ದಾರೆ.
ದಾಳಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಶಂಕರ್, ರಾಜಕೀಯದಲ್ಲಿ ಒಳ್ಳೆಯವರಿಗೆ ಕಾಲ ಇಲ್ಲ. ನಮ್ಮ ಪಕ್ಷದವರೇ ನನ್ನ ವಿರುದ್ಧ ಪಿತೂರಿ ಮಾಡಿದ್ದಾರೆ ಎಂದು ದೂರಿದ್ದಾರೆ.
ರಾಜಕೀಯವಾಗಿ ನನ್ನನ್ನು ಮುಗಿಸಲು ನನಗೆ ಕೆಲವರು ಯೋಜನೆ ಮಾಡಿಕೊಂಡಿದ್ದಾರೆ. ನಾನು ಎಲ್ಲವನ್ನೂ ಅರಿತು ಸುಮ್ಮನಿದ್ದೇನೆ. ಸರಕಾರ ರಚನೆಗೆ ನೆರವಾಗಿದ್ದೇನೆ ಎಂಬ ಬಗ್ಗೆ ಬಿಜೆಪಿಯವರಿಗೆ ಕರುಣೆಯೇ ಇಲ್ಲ. ಆರು ಮಂತ್ರಿ ಸ್ಥಾನ ಖಾಲಿ ಇದ್ದರೂ ನನಗೆ ಮಂತ್ರಿ ಸ್ಥಾನ ನೀಡಿಲ್ಲ. ಎಲ್ಲ ಹಂತದಲ್ಲಿಯೂ ನನಗೆ ಮೋಸವಾಗಿದೆ. ಯಾವ ಪಕ್ಷ ಟಿಕೆಟ್ ನೀಡಿದರೂ ಸ್ಪರ್ಧಿಸುತ್ತೇನೆ. ಇಲ್ಲದಿದ್ದರೆ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತೇನೆ ಎಂದರು.
Related Articles
ರಾಜಕೀಯ ಪ್ರೇರಿತ ಅಲ್ಲ
ದಾಳಿ ಬಿಜೆಪಿ ಪ್ರೇರಿತ ಎಂದು ಮಾಜಿ ಸಚಿವ ಆರ್. ಶಂಕರ್ ಹೇಳಿರುವುದು ಶುದ್ಧ ಸುಳ್ಳು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು ರಾಜ್ಯ ಸರಕಾರ ತನಿಖಾ ಸಂಸ್ಥೆಗಳಿಗೆ ಸ್ವಾತಂತ್ರ್ಯ ನೀಡಿದೆ ಎನ್ನುವುದಕ್ಕೆ ಸಾಕ್ಷಿ ಇದು. ಯಾರೇ ತಪ್ಪು ಮಾಡಿದರೂ ಅವರನ್ನು ಶಿಕ್ಷಿಸುವ ಕೆಲಸವನ್ನು ಸರಕಾರ ಮಾಡುತ್ತಿದೆ. ಯಾವುದೇ ತಪ್ಪು ಇಲ್ಲ ಎಂದಾದರೆ, ಶಂಕರ್ ವಿವರಣೆಗಳನ್ನು ನೀಡಲಿ ಎಂದು ಸಿಎಂ ಹೇಳಿದ್ದಾರೆ.