Advertisement

ಅಂತರ ನಿಗಮಗಳಿಗೆ ವರ್ಗವಾದರೂ ಸಿಗದ ಬಿಡುಗಡೆ ಭಾಗ್ಯ

12:36 PM Oct 14, 2018 | |

ಬೆಂಗಳೂರು: ರಾಜ್ಯ ರಸ್ತೆ ಸಾರಿಗೆ ನೌಕರರಿಗೆ ಒಂದೇ ಕುಟುಂಬ ಇದ್ದರೂ ಮನೆಗಳು ಎರಡು, ತಿಂಗಳ ಸಂತೆ ಎರಡೆರಡು ಸಲ, ಖರ್ಚು-ವೆಚ್ಚ ಕೂಡ ಡಬಲ್‌! ಇದು ಅಂತರ ನಿಗಮಗಳ ವರ್ಗಾವಣೆ ಕೊಡುಗೆ! ಹೌದು, ವರ್ಷಗಟ್ಟಲೆ ಹೋರಾಟ ಮಾಡಿ ಪಡೆದುಕೊಂಡ ಅಂತರ ನಿಗಮಗಳ “ವರ್ಗಾವಣೆ ವರ’ವೇ ಈಗ ಸಾರಿಗೆ ನಿಗಮಗಳ ನೌಕರರಿಗೆ ಶಾಪವಾಗಿ ಪರಿಣಮಿಸಿದೆ.

Advertisement

ವರ್ಷದ ಹಿಂದೆ ನಿಗಮಗಳು ನೀಡಿದ ವರ್ಗಾವಣೆ ಆದೇಶದ ಪ್ರತಿ ನಂಬಿ ಸಾವಿರಾರು ನೌಕರರು ತಮ್ಮ ಕುಟುಂಬಗಳನ್ನು ವರ್ಗಾವಣೆಗೊಂಡ ಊರಿಗೆ ಸ್ಥಳಾಂತರಿಸಿದ್ದಾರೆ. ಜತೆಗೆ ಮಕ್ಕಳನ್ನೂ ಆ ಭಾಗದ ಶಾಲೆಗಳಿಗೆ ದಾಖಲಿಸಿದ್ದಾರೆ. ಆದರೆ, ವರ್ಷ ಕಳೆದರೂ “ಬಿಡುಗಡೆ ಭಾಗ್ಯ’ವೇ ಸಿಕ್ಕಿಲ್ಲ. ಇದರಿಂದ ಎರಡೆರಡು ಕಡೆ ಮನೆ ಬಾಡಿಗೆ ಕಟ್ಟಬೇಕು. ಎರಡೂ ಕಡೆ ತಿಂಗಳ ಸಂತೆ ಮತ್ತಿತರ ಖರ್ಚು-ವೆಚ್ಚ ನೋಡಿಕೊಳ್ಳಬೇಕಾದ ಸ್ಥಿತಿ ನಿರ್ಮಾಣವಾಗಿದೆ. 

ಬೆಂಗಳೂರಿನಲ್ಲಿ ಜೀವನ ದುಬಾರಿ. ಸಾರಿಗೆ ನಿಗಮಗಳ ಸಂಬಳದಲ್ಲಿ ಜೀವನ ನಿರ್ವಹಣೆ ಕಷ್ಟ. ಹಾಗಾಗಿ, ಸಾವಿರಾರು ನೌಕರರು ತಮ್ಮ ಊರುಗಳ ಕಡೆಗೆ ವರ್ಗಾವಣೆ ಬಯಸಿ ಅರ್ಜಿ ಸಲ್ಲಿಸಿದ್ದರು. ಇದರಲ್ಲಿ ಹತ್ತು ವರ್ಷಕ್ಕೂ ಅಧಿಕ ಕಾಲ ಒಂದೇ ಕಡೆ ಸೇವೆ ಸಲ್ಲಿಸಿದವರಿಗೆ ಸೇವಾ ಜೇಷ್ಠತೆ ಆಧರಿಸಿ ಈ ಸಂಬಂಧ ಆದೇಶವನ್ನೂ ನೀಡಲಾಯಿತು.

ಆದರೆ, ಕೆಎಸ್‌ಆರ್‌ಟಿಸಿ, ಬಿಎಂಟಿಸಿಯಿಂದ ಅತ್ಯಧಿಕ ಅರ್ಜಿಗಳು ಬಂದವು. ಇದಕ್ಕೆ ಪ್ರತಿಯಾಗಿ ವಾಯವ್ಯ ಮತ್ತು ಈಶಾನ್ಯ ರಾಜ್ಯ ರಸ್ತೆ ಸಾರಿಗೆ ನಿಗಮಗಳಿಂದ ವರ್ಗಾವಣೆ ಬಯಸಿದವರ ಸಂಖ್ಯೆ ಅತ್ಯಲ್ಪ. ಇದೇ ಕಾರಣಕ್ಕೆ ನೌಕರರಿಗೆ ಬಿಡುಗಡೆ ಆದೇಶ ನೀಡಲಿಲ್ಲ. 

ಅತ್ತ ಹೆಂಡತಿ-ಮಕ್ಕಳನ್ನೂ ವಾಪಸ್‌ ಕರೆತರಲು ಆಗುತ್ತಿಲ್ಲ; ಇತ್ತ ತಮ್ಮನ್ನೂ ವರ್ಗಾವಣೆ ಮಾಡುತ್ತಿಲ್ಲ. ಬಿಡುಗಡೆ ಭಾಗ್ಯ ಯಾವಾಗ ಎಂಬುದರ ಬಗ್ಗೆ ನಿಗಮದ ಬಳಿಯೂ ಸ್ಪಷ್ಟತೆ ಇಲ್ಲ. ಇದರಿಂದ ಸುಮಾರು ನಾಲ್ಕು ಸಾವಿರ ಸಾರಿಗೆ ನೌಕರರು ಅತಂತ್ರ ಸ್ಥಿತಿಯಲ್ಲಿ ಸಿಲುಕಿದ್ದಾರೆ. ಇದೆಲ್ಲದರ ಮಧ್ಯೆ ಜೀವನ ನಿರ್ವಹಣೆ ವೆಚ್ಚ ಹಿಂದಿಗಿಂತ ದುಪ್ಪಟ್ಟು ಆಗಿದೆ ಎಂದು ನೌಕರರು ಅಲವತ್ತುಕೊಳ್ಳುತ್ತಾರೆ. 

Advertisement

ನೆಮ್ಮದಿ ಕದಡಿದೆ; ಚಾಲಕರ ಅಸಹಾಯಕತೆ: “ಈ ಮೊದಲು ತುಸು ಕಷ್ಟವಾದರೂ ಬೆಂಗಳೂರಿನಲ್ಲೇ ಹೆಂಡತಿ-ಮಕ್ಕಳೊಂದಿಗೆ ತುಸು ನೆಮ್ಮದಿಯಿಂದ ಇದ್ದೆವು. ಆದರೆ, ಅಂತರ ನಿಗಮಗಳ ವರ್ಗಾವಣೆಯು ನಮ್ಮ ನೆಮ್ಮದಿ ಕದಡಿದೆ. ಶೈಕ್ಷಣಿಕ ವರ್ಷ ಆಗಷ್ಟೇ ಆರಂಭವಾದಾಗಲೇ ವರ್ಗಾವಣೆ ಆದೇಶ ಕೈಗೆ ಬಂತು. ಅದನ್ನು ಡಿಪೋದ ಬಳಿಯೇ ಮನೆ ಮಾಡಿ, ಹೆಂಡತಿ-ಮಕ್ಕಳನ್ನು ಶಿಫ್ಟ್ ಮಾಡಿದೆ.

ಆದರೆ, ಇದುವರೆಗೆ ಬಿಡುಗಡೆ ಅದೇಶ ಕೈಸೇರಿಲ್ಲ. ಹತ್ತು ತಿಂಗಳಿಂದ ಡಬಲ್‌ ಬಾಡಿಗೆ ಮತ್ತು ತಿಂಗಳ ಸಂತೆ ಡಬಲ್‌ ಆಗುತ್ತಿದೆ. ವಾರಕ್ಕೊಮ್ಮೆ ಕುಟುಂಬದ ಸದಸ್ಯರ ಮುಖನೋಡುವಂತಾಗಿದೆ’ ಎಂದು ಘಟಕ-96ರಲ್ಲಿ ಸೇವೆ ಸಲ್ಲಿಸುತ್ತಿರುವ ಹೆಸರು ಹೇಳಲಿಚ್ಛಿಸದ ಚಾಲಕರೊಬ್ಬರು ಅಸಹಾಯಕತೆ ತೋಡಿಕೊಂಡರು. 

“ನಾನು ಹಾಸನ ಡಿಪೋದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಕಳೆದ ವರ್ಷ ನವೆಂಬರ್‌ನಲ್ಲೇ ವಿಜಯಪುರಕ್ಕೆ ವರ್ಗಾವಣೆ ಆದೇಶ ಸಿಕ್ಕಿದೆ. ಹಾಗಾಗಿ, ಕುಟುಂಬವನ್ನು ಅಲ್ಲಿಗೆ ಸ್ಥಳಾಂತರಿಸಿದ್ದೇನೆ. ತಂದೆ ತಾಳಿಕೋಟೆಯ ವಡವಡಗಿ ಗ್ರಾಮದಲ್ಲಿರುವ ಅಕ್ಕನ ಮನೆಯಲ್ಲಿದ್ದಾರೆ. ನಾನು ಮಾತ್ರ ಬಿಡುಗಡೆ ಆದೇಶವನ್ನು ಎದುರುನೋಡುತ್ತಾ ಇಲ್ಲಿದ್ದೇನೆ.

15 ದಿನಗಳಿಗೊಮ್ಮೆ ಕುಟುಂಬದ ಮುಖನೋಡಿ ಬರುತ್ತೇನೆ. ಯಾಕಾದರೂ ವರ್ಗಾವಣೆ ಬಯಸಿದೆನೋ ಎನ್ನುವಂತಾಗಿದೆ. ಮೇಲಧಿಕಾರಿಗಳಿಗೆ ಈ ಸಮಸ್ಯೆ ಹೇಳಿಕೊಂಡರೆ, ಉಡಾಫೆ ಉತ್ತರ ನೀಡುತ್ತಾರೆ. ಕೊನೆಪಕ್ಷ ತಮ್ಮ ನಿಲುವಾದರೂ ಸ್ಪಷ್ಟಪಡಿಸಬೇಕು’ ಎಂದು ಹಾಸನ ಕಾರ್ಯಾಗಾರದಲ್ಲಿ ಸೇವೆ ಸಲ್ಲಿಸುತ್ತಿರುವ ನೌಕರರೊಬ್ಬರು ಒತ್ತಾಯಿಸುತ್ತಾರೆ. 

ಕೆರೆಯಿಂದ ಬಾವಿಗೆ ಬಿದ್ದಂತಾಗಿದೆ!: “ಕೆರೆಯಿಂದ ತೆಗೆದು ಬಾವಿಯಲ್ಲಿ ಹಾಕಿದಂತಾಗಿದೆ ನಮ್ಮ ಪರಿಸ್ಥಿತಿ. ಬಯಸಿದ್ದು ಚಿತ್ರದುರ್ಗದ ಚಳ್ಳಕೆರೆ. ವರ್ಗಾವಣೆ ಆದೇಶವಾಗಿದ್ದು ತುಮಕೂರಿನ ಶಿರಾ ಘಟಕಕ್ಕೆ. ಸ್ವಂತ ಊರಿಂದ ಒಂದೂವರೆ ತಾಸಿನ ಪ್ರಯಾಣ ಎಂಬ ಕಾರಣಕ್ಕೆ ಹಾಗೂ ದುಬಾರಿ ಬೆಂಗಳೂರಿನಿಂದ ಮುಕ್ತಿ ಸಿಕ್ಕರೆ ಸಾಕು ಎಂದು ಒಪ್ಪಿಕೊಂಡೆ. ಆದರೆ, ಈಗ ಖರ್ಚು ದುಪ್ಪಟ್ಟಾಗಿದೆ!

ನಾನು ಸೇರಿದಂತೆ ಕುಟುಂಬದ ಸದಸ್ಯರ ಆರೋಗ್ಯದಲ್ಲಿ ಹೆಚ್ಚು-ಕಡಿಮೆಯಾದರೆ ನೋಡಿಕೊಳ್ಳುವವರಿಲ್ಲ. ಮನಸ್ಸುಕೊಟ್ಟು ಕೆಲಸ ಮಾಡಲು ಆಗುತ್ತಿಲ್ಲ’ ಎಂದು ಯಶವಂತಪುರ ಘಟಕದಲ್ಲಿ ನಿರ್ವಾಹಕರೊಬ್ಬರು ಅಲವತ್ತುಕೊಳ್ಳುತ್ತಾರೆ. ಅಂತರ ನಿಗಮ ವರ್ಗಾವಣೆ ಹೊಂದುತ್ತಿರುವವರ ಸಂಖ್ಯೆ 3,700. ಈ ಪೈಕಿ 1,960 ಜನ ತಾಂತ್ರಿಕ ಸಿಬ್ಬಂದಿ ಆಗಿದ್ದಾರೆ. 1,300 ಚಾಲಕ ಮತ್ತು ನಿರ್ವಾಹಕರಿದ್ದಾರೆ.

ಇದರಲ್ಲಿ ಅರ್ಧಕ್ಕರ್ಧ ನೌಕರರು ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮ(ಎನ್‌ಇಕೆಎಸ್‌ಆರ್‌ಟಿಸಿ)ಕ್ಕೆ ಹೋಗುತ್ತಿದ್ದರೆ, ಕೆಎಸ್‌ಆರ್‌ಟಿಸಿಗೆ 1,300 ಸಿಬ್ಬಂದಿ ತೆರಳಲಿದ್ದಾರೆ. ಇದಕ್ಕೆ ಪ್ರತಿಯಾಗಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಮತ್ತು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (ಎನ್‌ಡಬುಕೆಎಸ್‌ಆರ್‌ಟಿಸಿ)ಗೆ ಕ್ರಮವಾಗಿ 120 ಹಾಗೂ 750 ನೌಕರರು ವರ್ಗಾವಣೆಯಾಗಿ ಬರಲಿದ್ದಾರೆ. 

ವರ್ಗಾವಣೆಗೊಂಡ ನೌಕರರಿಗೆ ಬಿಡುಗಡೆ ಮಾಡುವಲ್ಲಿ ವಿಳಂಬವಾಗಿದ್ದು ನಿಜ. ಆದರೆ, ಇದು ಅನಿವಾರ್ಯವಾಗಿತ್ತು. ಯಾಕೆಂದರೆ ಇಲ್ಲಿ ಸಿಬ್ಬಂದಿ ಇಲ್ಲದೆ, ಬಿಡುಗಡೆ ಮಾಡುವುದು ಹೇಗೆ? ಈಗ ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ಸೇರಿ ಸುಮಾರು ನಾಲ್ಕು ಸಾವಿರ ನೌಕರರನ್ನು  ನೇಮಕ ಮಾಡಿಕೊಳ್ಳಲಾಗುತ್ತಿದೆ. ಒಂದೂವರೆ ತಿಂಗಳಲ್ಲಿ ಈ ಎಲ್ಲ ಪ್ರಕ್ರಿಯೆ ಪೂರ್ಣಗೊಳ್ಳಲಿದ್ದು, ಬಿಡುಗಡೆ ಭಾಗ್ಯವೂ ಸಿಗಲಿದೆ.
-ಎಸ್‌.ಆರ್‌. ಉಮಾಶಂಕರ್‌, ವ್ಯವಸ್ಥಾಪಕ ನಿರ್ದೇಶಕರು, ಕೆಎಸ್‌ಆರ್‌ಟಿಸಿ.

* ವಿಜಯಕುಮಾರ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next