Advertisement

ಸಿಎಎ ಬೇಡ ಎನ್ನುವಂತಿಲ್ಲ ; ರಾಜ್ಯಗಳಿಗೆ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌ ತಾಕೀತು

09:49 AM Jan 21, 2020 | Team Udayavani |

ಚೆನ್ನೈ: ಪೌರತ್ವ ತಿದ್ದುಪಡಿ ಕಾಯ್ದೆಯನ್ನು (ಸಿಎಎ) ಜಾರಿಗೊಳಿಸುವುದಿಲ್ಲ ಎಂದು ಕೆಲವು ರಾಜ್ಯ ಸರಕಾರಗಳು ಪಟ್ಟು ಹಿಡಿದಿರುವುದು ಕಾನೂನುಬಾಹಿರ ಹಾಗೂ ಸಂವಿಧಾನಕ್ಕೆ ವಿರುದ್ಧವಾದದ್ದು ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ.

Advertisement

ಪೌರತ್ವ ಕಾಯ್ದೆ ಜಾಗೃತಿ ವಿಚಾರವಾಗಿ ಚೆನ್ನೈನಲ್ಲಿ ಆಯೋಜಿಸಲಾಗಿದ್ದ ಸಂವಾದ ಕಾರ್ಯಕ್ರಮದಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ‘ಸಂಸತ್ತಿನಲ್ಲಿ ಅಂಗೀಕಾರ ಪಡೆದಿರುವ ಪೌರತ್ವ ತಿದ್ದುಪಡಿ ಕಾಯ್ದೆಗೆ ಕೆಲವು ರಾಜ್ಯ ಸರಕಾರಗಳು ವಿರೋಧ ವ್ಯಕ್ತಪಡಿಸುತ್ತಿವೆ. ಅವು ರಾಜಕೀಯ ಪ್ರೇರಿತ ಹೇಳಿಕೆಗಳು ಎಂಬುದು ನಮಗೆ ಅರ್ಥವಾಗುತ್ತದೆ” ಎಂದರು.

‘ಆರು ವರ್ಷಗಳಲ್ಲಿ ಪಾಕಿಸ್ಥಾನದ 2828, ಅಫ್ಘಾನಿಸ್ಥಾನದ 914, ಬಾಂಗ್ಲಾದೇಶದ 172 ನಿರಾಶ್ರಿತರಿಗೆ ಭಾರತದ ಪೌರತ್ವ ನೀಡಲಾಗಿದೆ. 2016-18ರಲ್ಲಿ ಅಫ್ಘಾನಿಸ್ಥಾನದ 391, ಪಾಕಿಸ್ಥಾನದ 1,591 ನಿರಾಶ್ರಿತರಿಗೆ ಭಾರತದ ಪೌರತ್ವ ನೀಡಲಾಗಿದೆ. ಇವರಲ್ಲಿ ಮುಸ್ಲಿಮರೂ ಇದ್ದು, ಪಾಕಿಸ್ಥಾನದ ಗಾಯಕ ಅದ್ನಾನ್‌ ಸಾಮಿ ಕೂಡ ಸೇರಿದ್ದಾರೆ. 1964ರಿಂದ 2008ರ ವರೆಗೆ ಶ್ರೀಲಂಕಾದ 4 ಲಕ್ಷ ತಮಿಳರಿಗೆ ಭಾರತೀಯ ಪೌರತ್ವ ನೀಡಲಾಗಿದೆ’ ಎಂದು ಅವರು ತಿಳಿಸಿದ್ದಾರೆ.

ಇದಕ್ಕೂ ಮುನ್ನ, ವಿತ್ತ ಸಚಿವೆ ಚೆನ್ನೈನ ಏರ್‌ಪೋರ್ಟ್‌ಗೆ ಆಗಮಿಸುವ ಸ್ವಲ್ಪ ಹೊತ್ತಿಗೆ ಮುನ್ನ ಅಲ್ಲಿದ್ದ ಯುವಕನೊಬ್ಬ ‘ಡೌನ್‌ ಡೌನ್‌ ಎನ್‌ಪಿಎ’ ಎಂದು ಘೋಷಣೆ ಕೂಗಿದ್ದು, ಆತನನ್ನು ಕೂಡಲೇ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಮನೆ ಮನೆ ಭೇಟಿ: ಸಿಎಎ ಪರ ಬಿಜೆಪಿ ಮನೆ ಮನೆ ಭೇಟಿ ಕಾರ್ಯಕ್ರಮ ಕೈಗೊಂಡಿರುವಂತೆಯೇ ಸಿಎಎ-ಎನ್‌ಆರ್‌ಸಿ – ಎನ್‌ಪಿಆರ್‌ ವಿರುದ್ಧ ತಾವೂ ಮನೆ – ಮನೆಗೆ ಭೇಟಿ ನೀಡಿ ಜನಜಾಗೃತಿ ಮೂಡಿಸುವುದಾಗಿ ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಘೋಷಿಸಿದ್ದಾರೆ.

Advertisement

ಬಂದ್‌ ಕರೆ: ಪೌರತ್ವ ಕಾಯ್ದೆ, ಎನ್‌ಆರ್‌ಸಿ ಹಾಗೂ ಕೇಂದ್ರ ಸರಕಾರದ ತಪ್ಪು ಆರ್ಥಿಕ ನೀತಿಗಳನ್ನು ವಿರೋಧಿಸಿ ಇದೇ 24ರಂದು ಮಹಾರಾಷ್ಟ್ರ ಬಂದ್‌ಗೆ ವಂಚಿತ್‌ ಬಹುಜನ್‌ ಅಘಾಡಿ ಕರೆ ನೀಡಿದೆ. ಈ ಬಂದ್‌ನಲ್ಲಿ ಕೈಜೋಡಿಸುವಂತೆ ಅಘಾಡಿ ನಾಯಕ ಪ್ರಕಾಶ್‌ ಅಂಬೇಡ್ಕರ್‌ ರಾಜ್ಯದ ರಾಜಕೀಯ ಪಕ್ಷಗಳಿಗೆ ಕರೆ ನೀಡಿದ್ದಾರೆ.

ವರದಿ ಕೇಳಿದ ರಾಜ್ಯಪಾಲ: ತಮಗೆ ಮಾಹಿತಿ ನೀಡದ ಪೌರತ್ವ ಕಾಯ್ದೆ ವಿರುದ್ದ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ ಕೇರಳ ಸರಕಾರದಿಂದ ರಾಜ್ಯಪಾಲ ಆರಿಫ್ ಮೊಹಮ್ಮದ್‌ ಖಾನ್‌ ವರದಿ ಕೇಳಿದ್ದಾರೆ.

ಹೊದಿಕೆಗಳನ್ನೇ ಹೊತ್ತೂಯ್ದ ಪೊಲೀಸರು!
ಪೌರತ್ವ ಕಾಯ್ದೆ ವಿರುದ್ಧ ಉತ್ತರಪ್ರದೇಶದ ಘಂಟಾಘರ್‌ ಪಾರ್ಕ್‌ನಲ್ಲಿ ಮಹಿಳೆಯರು ಪ್ರತಿಭಟನೆ ಮುಂದುವರಿಸಿದ್ದು, ರವಿವಾರ ಏಕಾಏಕಿ ಅಲ್ಲಿಗೆ ಆಗಮಿಸಿದ ಪೊಲೀಸರು ಮಹಿಳೆಯರ ಬಳಿಯಿದ್ದ ಹೊದಿಕೆಗಳು ಹಾಗೂ ಆಹಾರದ ಪ್ಯಾಕೇಟ್‌ಗಳನ್ನು ಹೊತ್ತೂಯ್ದಿದ್ದಾರೆ ಎಂದು ಆರೋಪಿಸಲಾಗಿದೆ.

ಆದರೆ, ಆರೋಪ ಅಲ್ಲಗಳೆದಿರುವ ಪೊಲೀಸರು, ‘ಇಲ್ಲಿ ಅಕ್ರಮವಾಗಿ ಪ್ರತಿಭಟನೆ ನಡೆಯುತ್ತಿದೆ. ಅಲ್ಲಿಗೆ ಆಗಮಿಸಿದ ಕೆಲ ಸಂಘ ಸಂಸ್ಥೆಗಳ ಸದಸ್ಯರು ಹೊದಿಕೆಗಳನ್ನು ಹಂಚುತ್ತಿದ್ದರು. ಆಗ ಹೊರಗಿನವರೂ ಹೊದಿಕೆಗಾಗಿ ಅಲ್ಲಿ ಜಮಾಯಿಸತೊಡಗಿದರು. ಅವರನ್ನು ಚದುರಿಸಲು ನಾವು ಯತ್ನಿಸಿದೆವು’ ಎಂದು ಸ್ಪಷ್ಟನೆ ನೀಡಿದ್ದಾರೆ.

ಸಿಎಎ, ಎನ್‌ಆರ್‌ಸಿ ಭಾರತದ ಆಂತರಿಕ ವಿಚಾರ: ಹಸೀನಾ
ಪೌರತ್ವ ಕಾಯ್ದೆ, ಎನ್‌.ಆರ್‌.ಸಿ.ಗಳು ಭಾರತದ ಆಂತರಿಕ ವಿಚಾರಗಳಾಗಿವೆ ಎಂದು ಬಾಂಗ್ಲಾ ಪ್ರಧಾನಿ ಶೇಖ್‌ ಹಸೀನಾ ಹೇಳಿದ್ದಾರೆ. ಗಲ್ಫ್ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ‘ಭಾರತ ಸರಕಾರ ಇದನ್ನೆಲ್ಲ ಏಕೆ ಜಾರಿ ಮಾಡುತ್ತಿದೆ ಎಂಬುದು ನಮಗಂತೂ ಅರ್ಥವಾಗುತ್ತಿಲ್ಲ. ಇವುಗಳ ಅನುಷ್ಠಾನ ಅನಗತ್ಯ. ಅದೇನೇ ಇದ್ದರೂ ಇದು ಭಾರತದ ಆಂತರಿಕ ವಿಚಾರವಷ್ಟೆ’ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next