Advertisement

ನಾಡು-ನುಡಿ, ಭಾಷೆ, ಸಂಸ್ಕೃತಿ ಬೆಳೆಸುವುದು ಕನ್ನಡಿಗರ ಕರ್ತವ್ಯ

01:23 PM Dec 27, 2017 | Team Udayavani |

ನೆಲಮಂಗಲ: ನಾಡು-ನುಡಿ, ಭಾಷೆ ಹಾಗೂ ಸಂಸ್ಕೃತಿ ಬೆಳೆಸುವ ನಿಟ್ಟಿನಲ್ಲಿ ಕನ್ನಡಿಗರಾದ ನಮ್ಮೆಲ್ಲರ ಕರ್ತವ್ಯವಾಗಿದೆ ಎಂಬುದನ್ನು ಪ್ರತಿಯೊಬ್ಬರು ಮನದಾಳದಲ್ಲಿ ಅರಿಯಬೇಕು ಎಂದು ಹಾಸ್ಯಚಿತ್ರ ನಟ ಚಿಕ್ಕಣ್ಣ ಅಭಿಪ್ರಾಯಿಸಿದರು. 

Advertisement

ತಾಲೂಕಿನ ಸೋಂಪುರ ಹೋಬಳಿಯ ನಿಡವಂದ ಗ್ರಾಮದ ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ನ್ಯಾಚುರಲ್‌ ಸ್ಟಾರ್‌ ಚಿಕ್ಕಣ್ಣ ಅಭಿಮಾನಿ ಬಳಗದ ವತಿಯಿಂದ ಕನ್ನಡ ರಾಜ್ಯೋತ್ಸವ ಹಾಗೂ ನೂತನ ವರ್ಷದ ಕ್ಯಾಲೆಂಡರ್‌ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.

ಕನ್ನಡ ನಿತ್ಯ ಬಳಸಿದರೆ ತನು, ಮನ ಕನ್ನಡ: ಕನ್ನಡ ನಾಡು ಎಲ್ಲಾ ಕ್ಷೇತ್ರದಲ್ಲಿಯೂ ಶ್ರೀಮಂತವಾಗಿದೆ. ಕನ್ನಡ ಭಾಷೆ ನವೆಂಬರ್‌ಗೆ ಮಾತ್ರ ಸೀಮಿತವಾಗಿರದೇ ವರ್ಷದ ಎಲ್ಲಾ ದಿನಗಳು ಕನ್ನಡ ದಿನವಾಗಿರಬೇಕು. ನಾವು ಕನ್ನಡ ಭಾಷೆಯನ್ನು ನಿತ್ಯ ಜೀವನದಲ್ಲಿ ಬಳಕೆಯಲ್ಲಿ ಬಂದರೆ ತನು, ಮನ ಕನ್ನಡವಾಗಿರುತ್ತದೆ ಎಂದು ಹೇಳಿದರು.

ಪರಭಾಷಿಕರ ಸಂಖ್ಯೆ ಹೆಚ್ಚಳ: ಶಾಸಕ ಡಾ.ಕೆ.ಶ್ರೀನಿವಾಸಮೂರ್ತಿ ಮಾತನಾಡಿ, ನಾಡು, ನುಡಿಗಾಗಿ ನಮ್ಮ ಹಿರಿಯರು, ಕವಿಗಳು ಹೋರಾಟಗಾರರ ಶ್ರಮ ಅವಿಸ್ಮರಣೀಯ. ಅವರ ಹೋರಾಟದ ಫ‌ಲವಾಗಿ ರಾಜ್ಯದಲ್ಲಿ ಕನ್ನಡ ಭಾಷೆಗೆ ಮನ್ನಣೆ ಸಿಗುತ್ತಿದೆ. ಮುಂದೆ ಭಾಷೆ ಉಳಿವಿಗೆ ಮತ್ತು ಬೆಳವಣಿಗೆಗೆ ಯುವ ಪೀಳಿಗೆ ಹೆಚ್ಚಿನ ಶ್ರಮ ವಹಿಸಬೇಕು. ಈಗಾಗಲೇ ಕನ್ನಡ ಸಾರಸ್ವತ ಲೋಕಕ್ಕೆ ಎಂಟು ಜಾnನಪೀಠ ಪ್ರಶಸ್ತಿ ಲಭಿಸಿದೆ. ರಾಜಧಾನಿ ಬೆಂಗಳೂರಿನಲ್ಲಿ ಕನ್ನಡಿಗರ ಸಂಖ್ಯೆ 30ರಷ್ಟು ಮತ್ತು ಪರಭಾಷಿಕರ ಸಂಖ್ಯೆ 70ರಷ್ಟು ಆಗಿರುವುದು ವಿಪರ್ಯಾಸ ಎಂದು ನುಡಿದರು. 

ವನಕಲ್ಲು ಮಠದ ಬಸವ ರಮಾನಂದ ಸ್ವಾಮೀಜಿ ಮಾತನಾಡಿ, ಜಗತ್ತಿನ ಉತ್ಕೃಷ್ಠ ಹಾಗೂ ಶ್ರೇಷ್ಠ ಭಾಷೆ ಕನ್ನಡ. ಆದರೆ ಅಂಥ ಭಾಷೆಯನ್ನು ಹೋರಾಟ ಮಾಡಿ ಉಳಿಸಿಕೊಳ್ಳುವ ಸನ್ನಿವೇಶವನ್ನು ನಾವೇ ತಂದುಕೊಂಡಿರುವುದು ವಿಷಾದನೀಯವೆಂದರು. ಮಾತೃಭಾಷೆ ಉಳಿಸಿ, ಬೆಳೆಸುವ ಜವಾಬ್ದಾರಿ ಪ್ರತಿಯೊಬ್ಬರಲ್ಲೂ ಇರಬೇಕೆಂದರು.

Advertisement

ಕನ್ನಡ ಶಾಲೆಗಳನ್ನು ಉಳಿಸಬೇಕು. ಸಾಮ್ರಾಟ್‌ ಅಶೋಕನ ಕಾಲದಿಂದಲೂ ರಾಜ್ಯದಲ್ಲಿ ಸುಭೀಕ್ಷತೆಯೊಂದಿಗೆ ಪರಿಸರ ಪ್ರಜ್ಞೆ ಉಳಿಸಿ ಬೆಳೆಸುವುದನ್ನು ಅನುಸರಿಸುತ್ತಿರುವ ಹಾಗೂ ಇದೇ ಹಾದಿಯಲ್ಲಿ ಕನ್ನಡಾಭಿಮಾನವನ್ನು ಕೇವಲ ಮಾತಿನಲ್ಲಿ ಹೇಳುವದಕ್ಕಿಂತ, ದಿನನಿತ್ಯದ ಮನೆ-ಮನ ಕನ್ನಡವಾಗಬೇಕು. ರಾಜಧಾನಿ ಬೆಂಗಳೂರಿನಲ್ಲೆ ಕನ್ನಡಿಗರ ಸಂಖ್ಯೆ ಕುಗ್ಗುತ್ತಿರುವುದು ಆತಂಕಕಾರಿ. ದೇಶದಲ್ಲಿ ಕೇಂದ್ರಡಾಳಿತ ಪ್ರದೇಶಗಳಂತೆ ರಾಜ್ಯದಲ್ಲೂ ಜಿಲ್ಲಾವಾರು ವಿಶೇಷ ಪ್ರಾತಿನಿಧ್ಯ ನೀಡಬೇಕು ಎಂದರು.

ಗಣ್ಯರಿಗೆ, ರೈತ ದಿನಾಚರಣೆ ನಿಮಿತ್ತ ರೈತರಿಗೆ ಹಾಗೂ ಮಾಜಿ ಸೈನಿಕ ಗೋವಿಂದಪ್ಪ ಅವರಿಗೆ ವಿಶೇಷ ಸನ್ಮಾನ ಮಾಡಲಾಯಿತು. ಈ ವೇಳೆ ಸೋಂಪುರ ಗ್ರಾಪಂ ಉಪಾಧ್ಯಕ್ಷೆ ಇಂದ್ರಮ್ಮ, ನಿಡವಂದ ಶಿವರುದ್ರಪ್ಪ, ಗ್ರಾಪಂ ಸದಸ್ಯ ತೀರ್ಥ ಪ್ರಸಾದ್‌, ಕರವೇ ಅಧ್ಯಕ್ಷ ಯುವರಾಜ್‌, ಎನ್‌.ಭೋಜರಾಜ್‌, ವಿನಯ್‌, ದಾಮೇಗೌಡ, ಸಿದ್ದು, ಭಾರತೀಪುರ ಶ್ರೀನಿವಾಸ್‌, ವಿಎಸ್‌ಎಸ್‌ಎನ್‌ಅಧ್ಯಕ್ಷ ವೆಂಕಟೇಶ್‌, ಅರ್ಚಕ ಕುಮಾರಸ್ವಾಮಿ, ನಿಡವಂದ ಗ್ರಾಪಂ ಸದಸ್ಯರಾದ ಪುರುಷೋತ್ತಮ್‌, ಜಗದೀಶ್‌, ಆನಂದಕುಮಾರ್‌, ಕುಮಾರ್‌ ಗ್ರಾಮಸ್ಥರಾದ ಎಂ.ರವಿ, ಶಿವಕುಮಾರ್‌, ಬಿ. ಪ್ರಕಾಶ್‌, ಹರೀಶ್‌ ಕುಮಾರ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next