ಕಲಬುರಗಿ: ನಾನು ನಾಪತ್ತೆಯಾಗಿದ್ದೇನೋ, ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದೇನೋ ಎಂದು ತಿಳಿಯುವ ಹಕ್ಕು ನನ್ನ ಕ್ಷೇತ್ರದ ನನ್ನ ಮತದಾರರಿಗಿದೆ. ಅದನ್ನು ಕೇಳುವ ನೈತಿಕತೆ ಬಿಜೆಪಿ ಉಳಿಸಿಕೊಂಡಿಲ್ಲ, ಪೋಸ್ಟರ್ ಅಂಟಿಸಿ ನಾಪತ್ತೆ ಎಂದು ಅಪಪ್ರಚಾರ ಮಾಡಿರುವುದು ಬಿಜೆಪಿಯ ಉದ್ಧಟತನ ಎಂದು ಮಾಜಿ ಸಚಿವ ಹಾಗೂ ಚಿತ್ತಾಪುರ ಶಾಸಕ ಪ್ರಿಯಾಂಕ ಖರ್ಗೆ ಆಕ್ರೋಶ ವ್ಯಕ್ತಪಡಿಸಿದರು.
ಕಲ್ಬುರ್ಗಿಯ ತಮ್ಮ ಮನೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇಂತಹ ಕಳ್ಳಾಟಗಳಿಗೆ, ಸಣ್ಣಾಟಗಳಿಗೆ, ಕುತಂತ್ರಗಳಿಗೆ ಜಗ್ಗುವ ಮತ್ತು ಕುಗ್ಗುವ ಮನುಷ್ಯ ನಾನಲ್ಲ.”ನಿಜ, ನಾನು ಕಳೆದ 50 ದಿನದಿಂದ ಕ್ಷೇತ್ರಕ್ಕೆ ಬಂದಿಲ್ಲ. ರಾಹುಲ್ ಗಾಂಧಿ ಅವರ ಭಾರತ ಜೋಡೋ ಯಾತ್ರೆಯಲ್ಲಿ ಭಾಗವಹಿಸಿ 511 ಕಿ.ಮಿ. ನಡೆದಿದ್ದೇನೆ. ಆ ನಂತರ ಖರ್ಗೆ ಸಾಹೇಬರ ಎಐಸಿಸಿ ಅಧ್ಯಕ್ಷ ಚುನಾವಣೆಯಲ್ಲಿದ್ದೆ. ಅದಾದ ನಂತರ ಕೋಲಿ ಕಬ್ಬಲಿಗ ಹಾಗೂ ಕುರುಬ ಜನಾಂಗದವರನ್ನು ಎಸ್ ಟಿ ಸೇರಿಸುವಂತೆ ಒತ್ತಾಯಿಸಲು ಕೇಂದ್ರ ಸಚಿವರನ್ನು ಭೇಟಿ ಮಾಡಲು ಮೂರು ದಿನ ದಿಲ್ಲಿಯಲ್ಲಿದ್ದೆ. ಇದು ಕ್ಷೇತ್ರದ ಜನರಿಗೆ ಗೊತ್ತಿದೆ. ನಾನು ಎಲ್ಲಿದ್ದೆ ಎಂದು ಬಿಜೆಪಿಗೆ ಉತ್ತರಿಸುವ ಅಗತ್ಯವಿಲ್ಲ” ಎಂದ ಪ್ರಿಯಾಂಕ್ ಖರ್ಗೆ ಅವರು, ತಮ್ಮ ವಿರುದ್ಧ ಚಿತ್ತಾಪುರದಲ್ಲಿ ಬಿಜೆಪಿ ನಡೆಸಿದ ಪೋಸ್ಟರ್ ಅಭಿಯಾನಕ್ಕೆ ತಿರುಗೇಟು ನೀಡಿದರು.
“ಕೊರೋನಾ ಸಂದರ್ಭದಲ್ಲಿ ಬಿಜೆಪಿಗರು ಎಲ್ಲಿ ಹೋಗಿದ್ದರು ? ನಾನು ಬಿಟ್ ಕಾಯಿನ್ ನಿಂದ ಹಿಡಿದು ಪಿಎಸ್ ಐ ಹಗರಣದವರೆಗೆ, ಈ ಸರ್ಕಾರದ 40% ಕಮಿಷನ್ ಹೊಡೆದಿರುವುದರ ಬಗ್ಗೆ ಹೋರಾಟ ಮಾಡಿದ್ದೇನೆ. ಜೊತೆಗೆ ಪೇ ಸಿಎಂ ಅಭಿಯಾನ ಮಾಡಿದ್ದೇನೆ. ಹಾಗಾಗಿ ಅದಕ್ಕೆ ಪ್ರತಿಯಾಗಿ ಬಿಜೆಪಿಗರು ನನ್ನ ವಿರುದ್ದ ಪೋಸ್ಟರ್ ಅಭಿಯಾನ ಮಾಡಿದ್ದಾರೆ. ಮಾಡಲಿ ಬಿಡಿ ಎಂದು ಉದಾಸೀನ ತೋರಿದರು.
ಬಿಜೆಪಿಗರಿಗೆ ನೀವು ಯಾಕೆ ಟಾರ್ಗೆಟ್ ಆಗುತ್ತಿದ್ದೀರಾ ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಸರ್ಕಾರದ ಹಗರಣವನ್ನು ಹೊರಗೆಳೆದಿದ್ದೇವೆ. ಭಾರತ್ ಜೋಡೋ ಯಾತ್ರೆಯಲ್ಲಿ ಸರ್ಕಾರದ ಭ್ರಷ್ಟಾಚಾರ ಬಗ್ಗೆ, 40% ಕಮಿಷನ್ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಟ್ಟಿದ್ದೇವೆ. ಇದರಿಂದಾಗಿ ಬಿಜೆಪಿಗರಿಗೆ ಕನಸಲ್ಲೂ ಬೆಚ್ಚಿ ಬೀಳುವಂತಾಗಿದೆ. ಸಹಜವಾಗಿ ನನ್ನನ್ನು ಟಾರ್ಗೇಟ್ ಮಾಡುತ್ತಿದ್ದಾರೆ. ಈ ಮೊದಲು ನಾನು ಟಾಪ್ ಒಂದರಲ್ಲಿದ್ದೆ ಬಹುಶಃ ಈಗ ಮೂರನೇ ಸ್ಥಾನದಲ್ಲಿರುಬಹುದು ಎಂದರು.
Related Articles
ಹಿಂದೂ ಹೇಳಿಕೆ ಮುಗಿದ ಅಧ್ಯಾಯ
ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೋಳಿ ಅವರ ‘ ಹಿಂದೂ’ ಪದದ ವಿವಾದದ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಖರ್ಗೆ ಅವರು, ಬಿಡಿ.. ಈಗದು ಮುಗಿದ ಅಧ್ಯಾಯ. ಹಿಂದೂ ಎಂಬ ಪದ ಪರ್ಶಿಯನ್ ಭಾಷೆಯಿಂದ ಬಂದಿರುವುದಾಗಿ ಅದನ್ನು ತಾವು ಅಧ್ಯಯನ ಮಾಡಿದ್ದಾಗಿ ಮಾನವ ಬಂಧುತ್ವ ವೇದಿಕೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಹೇಳಿರುವುದಾಗಿ ಅವರೇ ಹೇಳಿದ್ದಾರೆ. ಆ ಬಗ್ಗೆ ಚರ್ಚೆಗೆ ಬರುವಂತೆ ಬಿಜೆಪಿಗರಿಗೆ ಆಹ್ವಾನವನ್ನೂ ನೀಡಿದ್ದಾರೆ. ನಿಮ್ಮ ನಿಲುವು ಸ್ಪಷ್ಟವಾಗಿ ಇದ್ದರೆ ಚರ್ಚೆಗೇಕೆ ಬಿಜೆಪಿಗರು ಹೋಗಿಲ್ಲ? ಈ ಬಗ್ಗೆ ಜಾರಕಿಹೊಳಿ ಅವರು ಎಲ್ಲ ಟಿವಿ ಮಾಧ್ಯಮದವರೊಂದಿಗೆ ಲೈವ್ ಬಂದು ಸ್ಪಷ್ಟನೆ ನೀಡಿದ್ದಾರೆ ಎಂದರು.
ಪ್ರಧಾನಿ ಮೋದಿ ಅವರು ನಮ್ಮ ಕಾಲದಲ್ಲಿ ಅನುಮೋದನೆಗೊಂಡ ಯೋಜನೆಗಳ ಉದ್ಘಾಟನೆ ಮಾಡುತ್ತಿದ್ದಾರೆ ಅಷ್ಟೇ. ಅವರಿಗೆ ಅಭಿವೃದ್ದಿ ಬೇಕಿಲ್ಲ ಆದರೆ ಚುನಾವಣೆ ಬೇಕು. ಗುಜರಾತ್ ಜೊತೆಗೆ ಹಿಮಾಚಲ ಚುನಾವಣೆ ನಡೆಸಬೇಕಿತ್ತು. ಆದರೆ ಕೇವಲ ಹಿಮಾಚಲದಲ್ಲಿ ಮಾತ್ರ ಚುನಾವಣೆ ನಡೆಸುವುದಾಗಿ ಹೇಳಿ ಈಗ ಗುಜರಾತ್ ನಲ್ಲೂ ಚುನಾವಣೆ ನಡೆಸುತ್ತಿದ್ದಾರೆ. ಈಗ ರಾಜ್ಯದಲ್ಲಿಯೂ ಚುನಾವಣೆ ಸಮೀಪಿಸುತ್ತಿದೆ. ಹಾಗಾಗಿ ಪದೇ ಪದೇ ರಾಜ್ಯಕ್ಕೆ ಬರುತ್ತಿದ್ದಾರೆ ಎಂದು ಟೀಕಿಸಿದರು.
ಈ ವೇಳೆಯಲ್ಲಿ ಮಾಜಿ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಸೇರಿದಂತೆ ಕ್ಷೇತ್ರದ ಅನೇಕ ಮುಖಂಡರು ಹಾಜರಿದ್ದರು.