ದಾವಣಗೆರೆ: ಮಾನ, ಮರ್ಯಾದೆ ಇಲ್ಲದ ನಾಚಿಕೆಗೆಟ್ಟ ಮೊದಲ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ. ಕುತ್ತಿಗೆ ಹಿಡಿದು ಹೊರ ಹಾಕಿದರೂ ಅಧಿಕಾರದಿಂದ ಅವರು ಕೆಳಗಿಳಿಯಲ್ಲ ಎಂದು ಮಾಜಿ ಡಿಸಿಎಂ, ಶಾಸಕ ಕೆ.ಎಸ್. ಈಶ್ವರಪ್ಪ ಲೇವಡಿ ಮಾಡಿದರು.
ನಗರದ ಪ್ರವಾಸಿ ಮಂದಿರದಲ್ಲಿ ಭಾನುವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸಿಎಂ ಕುಮಾರಸ್ವಾಮಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಹೇಳಿಕೆ ಬರೀ ಬೂಟಾಟಿಕೆ. ನಾವು ಯಾವುದೇ ಪಕ್ಷದ ಶಾಸಕರನ್ನು ನಮ್ಮ ಪಕ್ಷಕ್ಕೆ ಬರುವಂತೆ ಆಹ್ವಾನಿಸಿಲ್ಲ. ಆಪರೇಷನ್ ಕಮಲ ಮಾಡುವುದಿಲ್ಲ. ಅದನ್ನು ಅವರೇ ಮಾಡಿಕೊಳ್ಳುತ್ತಿದ್ದಾರೆ. ತಾಕತ್ತಿದ್ದರೆ ಶಾಸಕರನ್ನು ಹಿಡಿತದಲ್ಲಿಟ್ಟುಕೊಳ್ಳಿ ಇಲ್ಲವೇ ರಾಜೀನಾಮೆ ನೀಡಿ. ನಾವು ಸನ್ಯಾಸಿಗಳಲ್ಲ. ಅವಕಾಶ ಸಿಕ್ಕರೆ ಆಡಳಿತ ನಡೆಸುತ್ತೇವೆ ಎಂದರು.
ವಿಧಾನಸಭೆ ಚುನಾವಣೆ ನಂತರ ಅಧಿಕಾರ ಕಳೆದುಕೊಂಡ ಕಾಂಗ್ರೆಸ್ ಪಕ್ಷ ದಿಕ್ಕೆಟ್ಟು ಹೋಗಿದೆ. ತಮ್ಮ ಶಾಸಕರ ಮೇಲಿನ ನಿಯಂತ್ರಣ ಕಳೆದುಕೊಂಡಿದೆ. ಆಂತರಿಕ ಕಚ್ಚಾಟ ಕೊಲೆ ಮಾಡುವ ಹಂತಕ್ಕೆ ತಲುಪಿದೆ. ಸಿದ್ದರಾಮಯ್ಯ, ಮಲ್ಲಿಕಾರ್ಜುನ್ ಖರ್ಗೆ, ಡಿಸಿಎಂ ಪರಮೇಶ್ವರ್ ಗುಂಪುಗಳ ಕಚ್ಚಾಟ ಸರ್ಕಾರ ಉರುಳಿಸುತ್ತದೆ. ಸೋಮಶೇಖರ್ ಹೇಳಿಕೆಗೆ ನೋಟಿಸ್ ಕೊಟ್ಟು, ಗೊಂದಲದ ಹೇಳಿಕೆ ನೀಡುತ್ತಾರೆ. ರೆಸಾರ್ಟ್‌ನಲ್ಲಿ ಶಾಸಕನ ಕೊಲೆಗೆ ಯತ್ನಿಸಿದ ಶಾಸಕ ಗಣೇಶ್ ಬಂಧಿಸುವಲ್ಲಿ ವಿಫಲರಾಗಿದ್ದಾರೆ. ಸಿಎಂ ಕುಮಾರಸ್ವಾಮಿ ಅವರು ಸುಭಾಷ್ ಗುತ್ತೇದಾರ್‌ಗೆ ಹಣ, ಸಚಿವ ಸ್ಥಾನದ ಆಮಿಷ ನೀಡಿದ್ದಾರೆ. ನಾವು ಯಾವುದೇ ಶಾಸಕರಿಗೆ ಹಣ ನೀಡಿದ್ದರೆ ಹೆಸರು ಬಹಿರಂಗ ಪಡಿಸಲಿ ಎಂದು ಸವಾಲು ಹಾಕಿದರು.
ಎಚ್.ಡಿ. ಕುಮಾರಸ್ವಾಮಿ ಸಿಎಂ ಆಗಿದ್ದರೂ ಕಾಂಗ್ರೆಸ್‌ನ ಕೆಲವು ಶಾಸಕರು ಸಿದ್ದರಾಮಯ್ಯ ಮುಖ್ಯಮಂತ್ರಿ ಎಂದು ಹೇಳಿಕೆ ನೀಡುತ್ತಾರೆ. ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಮೈಮೇಲೆ ಜ್ಞಾನವಿಲ್ಲದೇ ಮಾತನಾಡುತ್ತಾರೆ. ಮಕ್ಕಳ ಕಳ್ಳರಿಂದ ನಮ್ಮ ಮಕ್ಕಳ ರಕ್ಷಣೆ ಮಾಡಿಕೊಂಡಿದ್ದೇವೆ. ಸುಮಲತಾ ಅಂಬರೀಶ್ ಬಿಜೆಪಿಗೆ ಬಂದರೆ ಸ್ವಾಗತ. ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಪೇಪರ್ ಟೈಗರ್. ಅವರ ಹೇಳಿಕೆಗೆ ಪ್ರತಿಕ್ರಿಯಿಸುವುದಿಲ್ಲ. ಬರಗಾಲದ ಕುರಿತ ವರದಿ ಈವರೆಗೆ ಕೇಂದ್ರಕ್ಕೆ ಸಲ್ಲಿಕೆಯಾಗಿಲ್ಲ. ರಾಜ್ಯದಲ್ಲಿ ಅಭಿವೃದ್ಧಿ ಸ್ಥಗಿತಗೊಂಡಿದೆ. ಮತದಾರರು ಬೇಸತ್ತಿದ್ದಾರೆ. ಉತ್ತಮ ಆಡಳಿತ ನೀಡಿ. ಇಲ್ಲ ರಾಜೀನಾಮೆ ಕೊಡಿ ಎಂದು ಆಗ್ರಹಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಯಶವಂತರಾವ್ ಜಾಧವ್, ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ ಡಾ| ಎ.ಎಚ್. ಶಿವಯೋಗಿಸ್ವಾಮಿ, ರಾಜನಹಳ್ಳಿ ಶಿವಕುಮಾರ್, ಮುಖಂಡರಾದ ಬಿ.ಎಂ. ಸತೀಶ್, ಹೇಮಂತ್‌ಕುಮಾರ್, ಶಿವರಾಜ್ ಪಾಟೀಲ್, ಮನು ಇತರರಿದ್ದರು.