Advertisement

ನ್ಯಾಯಾಧೀಶರ ಘನತೆ, ಗೌರವಕ್ಕೆ ಧಕ್ಕೆ ಸರಿಯಲ್ಲ

11:29 PM May 31, 2023 | Team Udayavani |

ಪ್ರಜಾಪ್ರಭುತ್ವದಲ್ಲಿ ನ್ಯಾಯಾಲಯ, ನ್ಯಾಯಾಧೀಶರಿಗೆ ವಿಶೇಷ ಘನತೆ, ಗೌರವವಿದೆ. ಭಾರತದಲ್ಲಂತೂ ನ್ಯಾಯಾಂಗಕ್ಕೆ ವಿಶೇಷವಾದ ಸ್ಥಾನಮಾನ ವನ್ನು ಸಂವಿಧಾನದಲ್ಲಿ ಕಲ್ಪಿಸಿಕೊಡಲಾಗಿದೆ. ನ್ಯಾಯಾಧೀಶರನ್ನು ಸಮಾಜದ ಇತರ ವ್ಯಕ್ತಿಗಳಂತೆ ಪರಿಗಣಿಸುವುದಾಗಲಿ, ಅವರನ್ನು ಬಹಿರಂಗವಾಗಿ ಟೀಕಿಸುವುದಾಗಲಿ ಸರಿಯಲ್ಲ. ಇತ್ತೀಚಿನ ವರ್ಷಗಳಲ್ಲಿ ನ್ಯಾಯಾಲಯಗಳು ನೀಡುವ ತೀರ್ಪುಗಳಿಗೆ ಆಕ್ಷೇಪ ಮತ್ತು ನ್ಯಾಯಾ ಧೀಶರ ವಿರುದ್ಧ ಬಹಿರಂಗ ಅಸಮಾಧಾನ ಹೊರಹಾಕುವ ಹಾಗೂ ಅವರ ವಿರುದ್ಧ ವಾಗ್ಧಾಳಿ ನಡೆಸುವ ಪ್ರವೃತ್ತಿ ಸಮಾಜದಲ್ಲಿ ಹೆಚ್ಚುತ್ತಿರುವುದು ನಿಜಕ್ಕೂ ಆತಂಕಕಾರಿ ಸಂಗತಿ. ಈ ಹಿಂದಿನಿಂದಲೂ ಇಂತಹ ಕೆಲವೊಂದು ಘಟನೆ ನಡೆಯುತ್ತಿತ್ತಾದರೂ ಈಗ ಅದು ಒಂದಿಷ್ಟು ಅತಿರೇಕಕ್ಕೆ ತಲುಪಿದೆ. ಕೆಲವೊಂದು ಸಂದರ್ಭದಲ್ಲಿ ನ್ಯಾಯಾಲಯ ಇಂಥವರ ವಿರುದ್ಧ ಕಠಿನ ನಿಲುವು ತಳೆದು ಶಿಕ್ಷೆ ವಿಧಿಸಿದ ಉದಾಹರಣೆಯೂ ಇದೆ. ಆದರೆ ಇವು ನ್ಯಾಯಾಲಯ ಮತ್ತು ನ್ಯಾಯಾಧೀಶರ ವಿರುದ್ಧ ಬಹಿರಂಗ ವಾಗ್ಧಾಳಿ ನಡೆಸುವವರ ಬಾಯಿ ಮುಚ್ಚಿಸುವಲ್ಲಿ ಯಶ ಕಂಡಿಲ್ಲ.

Advertisement

ಬುಧವಾರದಂದು ಇಂತಹುದೇ ಒಂದು ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌, ಮಧ್ಯಪ್ರದೇಶ ಹೈಕೋರ್ಟ್‌ ನೀಡಿದ್ದ ತೀರ್ಪನ್ನು ಎತ್ತಿ ಹಿಡಿದು, ನ್ಯಾಯಾಧೀಶರ ಬಹಿರಂಗ ದೂಷಣೆ ಅಥವಾ ಅವರ ವಿರುದ್ಧ ಆರೋಪ ಹೊರಿಸುವುದು ಸರಿಯಲ್ಲ ಎಂದು ಕಟು ಮಾತುಗಳಲ್ಲಿ ಹೇಳಿದೆ. ಜಿಲ್ಲಾ ನ್ಯಾಯಾಧೀಶರದ ವಿರುದ್ಧ ವ್ಯಕ್ತಿಯೋರ್ವರು ಭ್ರಷ್ಟಾಚಾರ ಆರೋಪ ಹೊರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಧ್ಯಪ್ರದೇಶ ಹೈಕೋರ್ಟ್‌ ಆ ವ್ಯಕ್ತಿಗೆ 10 ದಿನಗಳ ಜೈಲು ಶಿಕ್ಷೆಯನ್ನು ವಿಧಿಸಿತ್ತು. ಇದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ನ ರಜಾಕಾಲದ ನ್ಯಾಯಪೀಠ, ನ್ಯಾಯಾಧೀಶರ ವಿರುದ್ಧ ಆರೋಪ ಹೊರಿ ಸಲು ಅಥವಾ ದೂಷಣೆ ಮಾಡಲು ಸಾಮಾಜಿಕ ಮಾಧ್ಯಮಗಳನ್ನು ಬಳಸ ಲಾಗುತ್ತಿರುವ ಬಗೆಗೆ ತೀವ್ರ ಅಸಮಾಧಾನ ಹೊರಹಾಕಿತು. ನ್ಯಾಯಾಂಗ ಕೇವಲ ಕಾರ್ಯಾಂಗದಿಂದ ಮಾತ್ರ ಸ್ವತಂತ್ರವಲ್ಲ. ಇದು ಎಲ್ಲರಿಗೂ ಅನ್ವ ಯಿಸುತ್ತದೆ. ಮಧ್ಯಪ್ರದೇಶ ಹೈಕೋರ್ಟ್‌ ನೀಡಿರುವ ತೀರ್ಪು ಎಲ್ಲರಿಗೂ ಪಾಠವಾಗಬೇಕು ಎಂದು ಹೇಳುವ ಮೂಲಕ ನ್ಯಾಯಾಂಗದ ಮೇಲೆ ಸವಾರಿ ಮಾಡಲೆತ್ನಿಸುತ್ತಿರುವವರಿಗೆ ಪರೋಕ್ಷವಾಗಿ ಚಾಟಿ ಬೀಸಿದೆ.

ಸುಪ್ರೀಂ ಕೋರ್ಟ್‌ನ ಈ ತೀರ್ಪು ದೇಶದಲ್ಲಿ ನ್ಯಾಯಾಂಗ ವ್ಯವಸ್ಥೆಯ ಸ್ವಾತಂತ್ರ್ಯದ ಕಾರ್ಯವ್ಯಾಪ್ತಿಯೇನು ಎಂಬುದನ್ನು ಮತ್ತೂಮ್ಮೆ ದೇಶದ ಜನತೆಗೆ ಜ್ಞಾಪಿಸಿದೆ. ಅಷ್ಟು ಮಾತ್ರವಲ್ಲದೆ ಸಾಮಾಜಿಕ ಮಾಧ್ಯಮಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವವರಿಗೂ ಪರೋಕ್ಷ ಎಚ್ಚರಿಕೆ ನೀಡಿದೆ. ಅಭಿವ್ಯಕ್ತಿ ಸ್ವಾತಂತ್ರ್ಯದ ನೆಪದಲ್ಲಿ ಬೇಕಾಬಿಟ್ಟಿಯಾಗಿ ತಮ್ಮ ನಾಲಗೆಯನ್ನು ಹರಿಯಬಿಡುವವರಿಗೆ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಮನಸ್ಸಿಗೆ ತೋಚಿದ್ದನ್ನು ಗೀಚುವ ಅಥವಾ ಹೇಳಿಕೆ ನೀಡುವವರಿಗೂ ಸುಪ್ರೀಂ ಕೋರ್ಟ್‌ನ ಈ ತೀರ್ಪು ಒಂದು ಕರೆಗಂಟೆಯಾಗಿದೆ. ನ್ಯಾಯಾಲಯ ಮತ್ತು ನ್ಯಾಯಾಧೀಶರನ್ನು ಸೀಮಿತಗೊಳಿಸಿ ನೀಡಿದ ತೀರ್ಪು ಇದಾಗಿ ದ್ದರೂ ಒಂದಿಷ್ಟು ಸೂಕ್ಷ್ಮವಾಗಿ ಅವಲೋಕಿಸಿದಲ್ಲಿ ಪ್ರತಿಯೋರ್ವರಿಗೂ ಇದು ಅನ್ವಯವಾಗುತ್ತದೆ. ನ್ಯಾಯಾಂಗ ಮತ್ತು ನ್ಯಾಯಾಧೀಶರಿಗೆ ಸಂವಿಧಾನ ನೀಡಿರುವ ಗೌರವವನ್ನು ಪ್ರತಿಯೋರ್ವರೂ ಎತ್ತಿ ಹಿಡಿಯುವ ಕಾರ್ಯ ಮಾಡಬೇಕೇ ವಿನಾ ಅದಕ್ಕೆ ಧಕ್ಕೆ ತರಬಾರದು. ದೇಶದ ಪ್ರತೀ ಪ್ರಜೆಯೂ ತನ್ನ ಕರ್ತವ್ಯವನ್ನು ಕಾನೂನು ವ್ಯಾಪ್ತಿಯಲ್ಲಿ ನಿರ್ವಹಿಸಿದ್ದೇ ಆದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಇನ್ನಷ್ಟು ಸದೃಢವಾಗಲು ಸಾಧ್ಯ.

Advertisement

Udayavani is now on Telegram. Click here to join our channel and stay updated with the latest news.

Next