ಮೈಸೂರು: ನಾವು ಮನುಷ್ಯರು, ಮನುಷ್ಯ ಮನುಷ್ಯರ ನಡುವೆ ದ್ವೇಷ ಭಾವನೆ ಸರಿಯಲ್ಲ.ಕೆಲ ಪಟ್ಟಭದ್ರ ಹಿತಾಸಕ್ತಿಗಳು ಜಾತಿಯ ವಿಷ ಬೀಜ ಬಿತ್ತಿ ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ. ಸರ್ವಜನಾಂಗದ ಶಾಂತಿಯ ತೋಟದಂತೆ ಸಮಾಜ ಇರಬೇಕು ಎಂದು ಕುವೆಂಪು ಹೇಳಿದರು, ಅವರ ನುಡಿ ಸಾಕಾರ ಆಗಬೇಕಾದರೆ ಎಲ್ಲರೂ ಮನುಷ್ಯರಾಗಬೇಕು” ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಬುಧವಾರ ಸಂಜೆ ಸುತ್ತೂರು ಜಾತ್ರಾ ಮಹೋತ್ಸವದ ಸಮಾರಂಭದಲ್ಲಿ ಭಾಗಿಯಾಗಿ ಮಾತನಾಡಿದ ಸಿಎಂ, ”ಇಂದು ಇಡೀ ಸರ್ಕಾರ, ಎಲ್ಲಾ ಮಂತ್ರಿಗಳು, ಉಭಯ ಸದನಗಳ ಶಾಸಕರು, ಲೋಕಸಭೆ, ರಾಜ್ಯ ಸಭೆ ಸದಸ್ಯರು ಪ್ರತಿಭಟನೆ ಮಾಡಲು ದೆಹಲಿಗೆ ಹೋಗಿದ್ದೆವು. ಸುತ್ತೂರು ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಳ್ಳುವ ಸಲುವಾಗಿ ದೆಹಲಿಯಿಂದ ನೇರವಾಗಿ ಇಲ್ಲಿಗೆ ಬಂದಿದ್ದೇವೆ. ಜಾತ್ರೆಗೆ ಬರುವುದಾಗಿ ಶ್ರೀಗಳಿಗೆ ಮಾತು ಕೊಟ್ಟಿದ್ದೆ.ಬೆಳಗ್ಗೆ ಉದ್ಘಾಟನೆಗೆ ಬರಲಾಗಲಿಲ್ಲ.ಮೊದಲೇ ಹೇಳಿದಂತೆ ಸಂಜೆ ಆರು ಗಂಟೆಗೆ ಸರಿಯಾಗಿ ಬಂದಿದ್ದೇನೆ. ಸುತ್ತೂರು ಜಾತ್ರೆಯಲ್ಲಿ ಪ್ರತಿವರ್ಷ ತಪ್ಪದೇ ಭಾಗಿಯಾಗುತ್ತಾ ಬಂದಿದ್ದೇನೆ.ಇಂದು ಕೂಡ ಆಗಮಿಸಿ ಅತ್ಯಂತ ಸಂತೋಷದಿಂದ ಕಾರ್ಯಕ್ರಮಗಳಿಗೆ ಚಾಲನೆ ನೀಡಿದ್ದೇನೆ. ಬೇರೆಡೆಯೂ ಜಾತ್ರೆಗಳು ನಡೆಯುತ್ತವೆ.ಆದರೆ ಸುತ್ತೂರು ಜಾತ್ರಾ ಮಹೋತ್ಸವಕ್ಕೆ ವಿಶೇಷ ಮಹತ್ವವಿದೆ ಎಂದರು.
ಬಸವಾದಿ ಶರಣರು 12ನೇ ಶತಮಾನದಲ್ಲೇ ಸಮ ಸಮಾಜ ನಿರ್ಮಾಣದ ಪ್ರತಿಪಾದನೆ ಮಾಡಿದರು.ಎಲ್ಲರೂ ಹುಟ್ಟುವಾಗ ವಿಶ್ವಮಾನವರು, ಬೆಳೆಯುತ್ತಾ ಅಲ್ಪ ಮಾನವರಾಗುತ್ತಾರೆ.ಜ್ಞಾನ ವಿಕಾಸ ಆಗಬೇಕು, ಜ್ಞಾನ ಯಾರದೇ ಸ್ವತ್ತಲ್ಲ.ಜ್ಞಾನ ಒಬ್ಬರ ಸ್ವತ್ತಾಗಿದ್ದರೆ ಅಂಬೇಡ್ಕರ್ ಸಂವಿಧಾನ ರಚಿಸಲು ಸಾಧ್ಯ ಆಗುತ್ತಿರಲಿಲ್ಲ.ವಾಲ್ಮೀಕಿ ರಾಮಾಯಣ ಬರೆಯಲು, ವ್ಯಾಸರು ಮಹಾಭಾರತವನ್ನು ಬರೆಯಲು ಸಾಧ್ಯವಾಗುತ್ತಿರಲಿಲ್ಲ.ಸಮಾಜದಲ್ಲಿ ಇನ್ನೂ ಸಮಾನತೆ ಬಂದಿಲ್ಲ. ಮೇಲು ಕೀಳು ಭಾವನೆ ಹೋಗಿಲ್ಲ ಎಂದರು.
ಬರೀ ಓಟು ಹಾಕುವ ಸ್ವಾತಂತ್ರ್ಯ ಬಂದರೆ ಸಾಲದು. ಪ್ರತಿಯೊಬ್ಬರಿಗೂ ಆರ್ಥಿಕ ಸಾಮಾಜಿಕ ಶಕ್ತಿ ಬಂದಾಗ ಸ್ವಾತಂತ್ರ್ಯ ಬಂದಿರುವುದು ಸಾರ್ಥಕವಾಗಲಿದೆ. ಸಂಪತ್ತು ಅಧಿಕಾರ ಒಬ್ಬರ ಕೈಲಿ ಕೇಂದ್ರೀಕೃತವಾಗಬಾರದು. ಸಮಾಜದಲ್ಲಿ ಎಲ್ಲರಿಗೂ ಸಮಾನತೆ ಸಿಗುವಂತಾಗಬೇಕು. ಸಮಾರಂಭದ ವೇದಿಕೆಯಲ್ಲಿ ಒಕ್ಕಲಿಗರು, ಲಿಂಗಾಯತರು, ಕುರುಬನಾದ ನಾನು, ಹಿಂದುಳಿದ ವರ್ಗದವರು ಕುಳಿತಿದ್ದೇವೆ. ಇದಕ್ಕೆ ಸಂವಿಧಾನ ಕಾರಣವಾಗಿದೆ. ಸಂವಿಧಾನ ನಮ್ಮೆಲ್ಲರನ್ನು ರಕ್ಷಣೆ ಮಾಡುತ್ತಿದೆ ಎಂದರು.
ಕೆಲ ಪಟ್ಟಭದ್ರರು ಸಂವಿಧಾನವನ್ನು ಬದಲಿಸಲು ಪ್ರಯತ್ನಿಸುತ್ತಿದ್ದಾರೆ. ಬಸವಾದಿ ಶರಣರ ಆದರ್ಶಗಳು ಎಲ್ಲಾ ಕಾಲಕ್ಕೂ ಪ್ರಸ್ತುತವಾಗಿದೆ. ವೇದಿಕೆ ಮೇಲೆ ಇವನಾರಾವ ಇವನಾರವ ಇವ ನಮ್ಮವ ಎಂದು ಹೇಳಿ ವೇದಿಕೆಯಿಂದ ಕೆಳಗಿಳಿದ ನಂತರ ನೀನು ಯಾವ ಜಾತಿ ಎಂದು ಕೇಳುವ ಪರಿಪಾಠ ಸರಿಯಲ್ಲ ಪ್ರತಿಪಾದಿಸಿದರು.
ಚೌಕಬಾರ, ಹಾವು ಏಣಿ ಆಟವಾಡಿದ ಕಾರ್ಯಕ್ರಮವನ್ನು ಸಿಎಂ ಹಾಗೂ ಸಚಿವ ಸಂಪುಟ ಸಹೋದ್ಯೋಗಿಗಳು ಉದ್ಘಾಟನೆ ಮಾಡಿದ್ದು ವಿಶೇಷವಾಗಿತ್ತು. ವೇದಿಕೆಯ ಮೇಲೆ ಸುತ್ತೂರು ಶ್ರೀಗಳ ಜತೆ ಅತ್ಯಂತ ಆತ್ಮೀಯವಾಗಿ ಮಾತುಕತೆಯಲ್ಲಿ ಸಿಎಂ ಸಿದ್ದರಾಮಯ್ಯ ತಲ್ಲೀನರಾದುದು ಕಂಡು ಬಂತು.
ಸುತ್ತೂರು ಮಠಾಧಿಪತಿ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿಯವರ ದಿವ್ಯ ಸಾನಿಧ್ಯದಲ್ಲಿ ನಡೆದ ಸಮಾರಂಭದಲ್ಲಿ ಸಚಿವರಾದ ಡಾ.ಜಿ. ಪರಮೇಶ್ವರ್, ಕೆ. ವೆಂಕಟೇಶ್, ಕೆ.ಜೆ. ಜಾರ್ಜ್, ಡಾ.ಹೆಚ್ .ಸಿ. ಮಹದೇವಪ್ಪ, ಡಾ.ಎಂ.ಸಿ. ಸುಧಾಕರ್, ಮಾಜಿ ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.