ಈಗ ಎಲ್ಲಿ ಕೇಳಿದರೂ ಹೊಸ ಪ್ರಯೋಗಗಳ ಮಾತೇ. ಚುನಾವಣೆಯಲ್ಲೂ ಅಷ್ಟೇ. ಓಡಿದ ಅನುಭವ ಇದ್ದರೆ ಸಾಲದು, ಈಗಲೂ ಓಡೋ ಹುಮ್ಮಸ್ಸು ಇದೆಯಾ ಅಂತಾ ನೋಡ್ತಾರೆ. ಎಲ್ಲಾದರೂ ಚೂರು ಕುಂಟ್ಕೊಂಡು ನಡೆದ್ರೂ ಅಂದ್ಕೊಳ್ಳಿ ಅಥವಾ ಓಡಿ ಚೂರು ಉಸಿರು ಬಿಟ್ಟರೆಂದುಕೊಳ್ಳಿ, ಫೌಲ್ ಅಂತಾ ಕೆಂಪು ಬಾವುಟ ತೋರಿಸಿ ಬಿಡ್ತಾರೆ. ಒಟ್ಟೂ ಮುಖದಲ್ಲೂ ಯಂಗ್, ಮನಸ್ಸಿನಲ್ಲೂ ಯಂಗ್, ಕ್ಷೇತ್ರದಲ್ಲೂ ಯಂಗ್!
ಮೊನ್ನೆ ಹೀಗೇ ಆಯಿತು. ಒಂದು ಪಕ್ಷದ ಟಿಕೆಟ್ ಆಕಾಂಕ್ಷಿ (ಪಕ್ಷ ಯಾವುದು ಎಂದು ನೀವು ಕೇಳುವಂತಿಲ್ಲ, ನಾವು ಹೇಳುವಂತಿಲ್ಲ, ಯಾಕಂದ್ರೆ ಚುನಾವಣ ನೀತಿ ಸಂಹಿತೆ ಜಾರಿಯಲ್ಲಿದೆ) ಕ್ಷೇತ್ರದಲ್ಲಿ ಚುನಾವಣ ಪೂರ್ವ ಪ್ರಚಾರ ಮಾಡುತ್ತಿದ್ದರು. ಪಕ್ಷದವರು ಈ ಬಾರಿ “ಯಂಗ್ ಫೇಸ್’ಗೆ ಅವಕಾಶ ಕೊಡ್ತಾರೆ ಅಂತಾ ಅಂದಿದ್ದಕ್ಕೆ, ಈತ ಸಣ್ಣ ಉದ್ಯೋಗ ಬಿಟ್ಟು ಟಿಕೆಟ್ ರೇಸ್‌ಗೆ ಬಿದ್ದ.
ಇವನ ಹುಮ್ಮಸ್ಸು ನೋಡಿ ಹಾಲಿಗಳು, ಕೆಲವು ಮಾಜಿ ಹಿರಿಯರು “ಇನ್ನೂ ಪೀಚು, ಎರಡು ಬಿಸಿಲು ಜೋರಾದರೆ ಉದುರಿ ಹೋಗುತ್ತೆ, ಇರಲಿ ನಾಲ್ಕು ದಿನ’ ಎಂದು ಗೇಲಿ ಮಾಡುತ್ತಾ ತಿರುಗತೊಡಗಿದರು. ಒಂದು ದಿನ ಪಕ್ಷದ ವರಿಷ್ಠರು ಎಲ್ಲರನ್ನೂ ಕರೆದು, “ನೋಡ್ರಪ್ಪಾ, ಈ ಬಾರಿ ಆ ಯಂಗ್ ಫೇಸ್‌ಗೆ ಟಿಕೆಟ್ ಕೊಡೋಣ’ ಎಂದರಂತೆ.
ಈ ಹಾಲಿಗಳು, ಮಾಜಿ ಹಿರಿಯರೆಲ್ಲ ಮುಖ ಮುಖ ನೋಡ್ಕೊಳ್ಳೋಕೆ ಶುರು ಮಾಡಿದರು. ಅಲ್ಲಯ್ಯ ಇದನ್ನು ಕಪ್ಪು ಕುದುರೆ (ಡಾರ್ಕ್ ಹಾರ್ಸ್) ಎಂದುಕೊಂಡಿದ್ದವಲ್ಲಪ್ಪ? ನಮ್ಮ ಬಿಳಿ ಕುದುರೆ ಇರುವಾಗ ಈ ಕಪ್ಪಿಗೇಕಪ್ಪಾ ಮಣೆ ಎಂದು ಕೇಳಿಕೊಳ್ಳ ತೊಡಗಿದರು. ಸಭೆಯಲ್ಲಿದ್ದ ಚುನಾವಣೆ ರಾಜಕೀಯದಿಂದ ನಿವೃತ್ತಿ ಯಾಗಿದ್ದ ಹಿರಿಯರೊಬ್ಬರು ಹತ್ತಿರದಲ್ಲಿದ್ದವನ ಕಿವಿ ಯಲ್ಲಿ-“ನಮಗೆ ಬೇಕಿರೋದು ಕತ್ತೇನೋ, ಕುದುರೇನೋ, ಕಪ್ಪೋ, ಬಿಳುಪೋ ಅಲ್ಲ. ಅದಕ್ಕೆ ಕಾಲಿರಬೇಕು, ಬಾಲ ಇರಬೇಕು, ಅಲ್ಲಾಡಿಸುತ್ತಿರಬೇಕು, ಗೆಲ್ತಿನಿ ಅಂತ ಹಾರ ಹಾಕ್ಕೊಂಡು ಓಡ್ತಾನೇ ಇರಬೇಕು!’ ಅಷ್ಟೇ.