ಸಕಲೇಶಪುರ: ಕಾಫಿಯ ಕುರಿತು ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಹಾಸನ ಜಿಲ್ಲಾ ಬೆಳೆಗಾರರ ಸಂಘ ಹಲವು ಕಾರ್ಯಕ್ರಮಗಳನ್ನು ಮಾಡಲು ಯೋಜಿಸಿದೆ ಎಂದರು.
ಸಂಘದ ಅಧ್ಯಕ್ಷ ತೊ.ಚ. ಅನಂತಸುಬ್ಬರಾಯ ಹೇಳಿದರು. ಪಟ್ಟಣದ ರಾಘವೇಂದ್ರ ನಗರ ಬಡಾವಣೆಯಲ್ಲಿರುವ ಹಾಸನ ಜಿಲ್ಲಾ ಬೆಳೆಗಾರರ ಸಂಘದಲ್ಲಿ ಪಿಯುಸಿ ವಿದ್ಯಾರ್ಥಿಗಳಿಗಾಗಿ ಕಾಫಿ ಬೆಳೆ ನಿಮಗೆಷ್ಟು ಗೊತ್ತು? ಎಂಬ ವಿಷಯವಾಗಿ ಆಯೋಜಿಸಲಾಗಿದ್ದ ಪ್ರಬಂಧ ಸ್ಪರ್ಧೆಯ ಅಂಗವಾಗಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.
ಹಾಸನ ಜಿಲ್ಲಾ ಬೆಳೆಗಾರರ ಸಂಘ ಕಳೆದ 40 ವರ್ಷಗಳಿಂದ ಬೆಳೆಗಾರರ ಏಳಿಗೆಗಾಗಿ ಶ್ರಮಿಸುತ್ತಿದೆ. ಅ.1ರಂದು ಬೇಲೂರಿನಲ್ಲಿ ನಡೆ ಯಲಿರುವ ಅಂತಾರಾಷ್ಟ್ರೀಯ ಕಾಫಿ ದಿನಾಚರಣೆ ಅಂಗವಾಗಿ ಮಹಿಳೆಯರಿಗಾಗಿ ಕಾಫಿ ಕುರಿತು ರಂಗೋಲಿ ಸ್ಪರ್ಧೆ ಆಯೋಜಿಸಲಾಗಿದ್ದು, ಆಸಕ್ತರು ಇದರಲ್ಲಿ ಭಾಗವಹಿಸ ಬಹುದಾಗಿದೆ. ಮುಂದಿನ ದಿನಗಳಲ್ಲಿ ಕಾಫಿ ಬೆಳೆಗಾರರ ಮಕ್ಕಳು ಹಾಗೂ ವಿದ್ಯಾರ್ಥಿಗಳಿ ಗಾಗಿ ಮತ್ತಷ್ಟು ಯೋಜನೆಗಳನ್ನು ರೂಪಿಸಲಾಗುವುದು ಎಂದರು.
ಕಾಫಿ ಮಲೆನಾಡಿಗರ ಬದುಕಾಗಿದೆ: ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಟಿ.ಪಿ ಪ್ರಸನ್ನ ಕುಮಾರ್ ಮಾತನಾಡಿ, ಕಾಫಿ ಮಲೆನಾಡಿಗರ ಬದುಕಾಗಿದೆ. ಕಾಫಿ ಇಲ್ಲದೆ ದಿನಚರಿ ಆರಂಭವಾಗುವುದಿಲ್ಲ. ಒಂದಲ್ಲಾ ಒಂದು ರೀತಿಯಲ್ಲಿ ಮಲೆನಾಡಿಗರ ಜೀವನ ಕಾಫಿ ಜೊತೆಯಲ್ಲಿ ಸಂಬಂಧ ಹೊಂದಿದೆ. ಕಾಫಿ ಬೆಳೆಗಾರರು ಸಹ ಒಂದು ರೀತಿಯಲ್ಲಿ ವಿದ್ಯಾರ್ಥಿಗಳು, ತೋಟದ ನಿರ್ವಹಣೆ ಬಗ್ಗೆ ಅವರು ಆಗಾಗ ಹೊಸತನ್ನು ಕಲಿಯಬೇಕಾಗುತ್ತದೆ ಎಂದರು.
ವರಮಾನ ತರುವ ಬೆಳೆ: ದೇಶದ ಆರ್ಥಿಕ ವ್ಯವಸ್ಥೆಯಲ್ಲಿ ಕಾಫಿ ಸಹ ವರಮಾನ ತರುತ್ತದೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಕೇವಲ ಕಾಫಿ ಮಾತ್ರವಲ್ಲದೇ, ಕಾಫಿ ಬೆಳೆಯ ನಿರ್ವಹಣೆ, ಕಾಫಿ ಮಾರುಕಟ್ಟೆ, ಬೆಳೆಗಾರರ ಶ್ರಮದ ಬಗ್ಗೆ ಅರಿವು ಅಗತ್ಯ ಹೊಂದಬೇಕು ಎಂದರು.
ಸುಮಾರು 20ಕ್ಕೂ ಹೆಚ್ಚು ಪಿಯುಸಿ ವಿದ್ಯಾರ್ಥಿಗಳು ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿದ್ದು, ತಾಲೂಕಿನ ಹೆತ್ತೂರು, ಹಾನುಬಾಳ್ ಪಿಯು ಕಾಲೇಜು ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿ ಎಸ್.ಎಲ್. ಸುಧೀರ್, ಬೆಳೆಗಾರ ಪತ್ರಿಕೆಯ ಸಂಪಾದಕ ಸುರೇಂದ್ರ, ನಿವೃತ್ತ ಪ್ರಾಂಶುಪಾಲ ಮಹಮದ್ ಆಲಿ ರಜ್ವಿ, ಎಚ್‌ಡಿಪಿಎ ವ್ಯವಸ್ಥಾಪಕ ಜಯಪ್ರಕಾಶ್ ಹಾಜರಿದ್ದರು.