Advertisement

Kalaburagi; ಖಾಸಗಿ ಆಸ್ಪತ್ರೆಗಳು ಚಿಕಿತ್ಸೆ ವೆಚ್ಚ ಬೋರ್ಡ್ ಹಾಕುವುದು ಕಡ್ಡಾಯ: ಶರಣ ಪ್ರಕಾಶ

02:33 PM Feb 10, 2024 | Team Udayavani |

ಕಲಬುರಗಿ: ರಾಜ್ಯದಲ್ಲಿ ಖಾಸಗಿ ಆಸ್ಪತ್ರೆಗಳು ನೀಡುವ ಚಿಕಿತ್ಸೆಯ ವೆಚ್ಚದ ಬೋರ್ಡ್ ಗಳನ್ನು ಕಡ್ಡಾಯವಾಗಿ ಆಸ್ಪತ್ರೆಗಳಲ್ಲಿ ಹಾಕುವ ಮೂಲಕ ಕೆಲವು ಕಡೆಯಲ್ಲಿ ನಡೆಯುತ್ತಿರುವ ಚಿಕಿತ್ಸಾ ಸುಲಿಗೆಯನ್ನು ತಪ್ಪಿಸಬೇಕು ಎಂದು ರಾಜ್ಯದ ವೈದ್ಯಕೀಯ ಶಿಕ್ಷಣ ಸಚಿವ ಶರಣ್ ಪ್ರಕಾಶ್ ಪಾಟೀಲ್ ಕರೆ ನೀಡಿದರು.

Advertisement

ನಗರದಲ್ಲಿ ಶನಿವಾರ ಟ್ರಾಮಾಕೇರ್ ಸೆಂಟರ್ ಉದ್ಘಾಟನೆಗೊಳಿಸಿ ಮಾತನಾಡಿದ ಅವರು, ಸರಕಾರಿ ಆರೋಗ್ಯ ಸೇವೆ ಬಡವರಿಗೆ ಮತ್ತು ಅಶಕ್ತರಿಗೆ ತಲುಪುವ ನಿಟ್ಟಿನಲ್ಲಿ ನಮ್ಮ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಈ ಆರೋಗ್ಯ ಸೇವೆಯ ಉತ್ತಮ ಸೌಲಭ್ಯ ಜನರಿಗೆ ಸಿಗಬೇಕಾದರೆ, ಖಾಸಗಿ ಆಸ್ಪತ್ರೆಗಳು ಚಿಕಿತ್ಸೆಗೆ ನೀಡುವ ವೆಚ್ಚದ ಕುರಿತು ಸರಿಯಾದ ಮಾಹಿತಿಯನ್ನು ರೋಗಿಗಳಿಗೆ ಮತ್ತು ರೋಗಿಯ ಸಂಬಂಧಿಗಳಿಗೆ ತಿಳುವಳಿಕೆ ನೀಡಿ, ತದನಂತರ ಚಿಕಿತ್ಸೆ ಆರಂಭಿಸಬೇಕು. ಇಂತಹದೇ ಕ್ರಮವನ್ನು ರಾಜ್ಯದ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲೂ ಕೂಡ ಆರೋಗ್ಯ ಸೇವೆಯಲ್ಲಿರುವ ಸಿಬ್ಬಂದಿ ಮತ್ತು ವೈದ್ಯರು ಮಾಡಬೇಕು ಎಂದರು.

ನಾನು ಖಾಸಗಿ ದವಾಖಾನೆಗಳ ವಿರುದ್ಧವಾಗಿಲ್ಲ. ನನ್ನ ಪತ್ನಿ ಕೂಡ ಒಂದು ದವಾಖಾನೆಯನ್ನು ನಡೆಸುತ್ತಾರೆ. ಆದರೆ ಚಿಕಿತ್ಸೆಯ ಹೆಸರಿನಲ್ಲಿ ಬಡವರಿಗೆ ಹಾಗೂ ತೊಂದರೆಯಲ್ಲಿರುವವರಿಗೆ ಇನ್ನಷ್ಟು ತೊಂದರೆ ಕೊಡಬಾರದು, ಸುಲಿಗೆ ಆಗಬಾರದು ಎನ್ನುವುದು ನಮ್ಮ ಸರ್ಕಾರದ ಹಾಗೂ ಮಲ್ಲಿಕಾರ್ಜುನ ಖರ್ಗೆ ಆಶಯವು ಆಗಿದೆ. ಆ ನಿಟ್ಟಿನಲ್ಲಿ  ಚಿಕಿತ್ಸೆಗೆ ತೆಗೆದುಕೊಳ್ಳುವ ವೆಚ್ಚದ ಕುರಿತು ಖಾಸಗಿ ಆಸ್ಪತ್ರೆಗಳು ಹೆಚ್ಚು ನಿಗಾ ವಹಿಸಬೇಕು ಎಂದರು.

ಅಪಘಾತಗಳು ಸಂಭವಿಸಿದಾಗ ತುರ್ತು ಆರೋಗ್ಯ ಸೇವೆ ನೀಡಲು  ರಾಜ್ಯದಲ್ಲಿ ಈಗಾಗಲೇ ಬೆಂಗಳೂರಿನಲ್ಲಿ ಎರಡು ಮತ್ತು ಮೈಸೂರಿನಲ್ಲಿ ಒಂದು ಟ್ರಾಮಾ ಸೆಂಟರ್ ಕಾರ್ಯ ನಿರ್ವಹಿಸುತ್ತಿದೆ. ಅದರೊಂದಿಗೆ ಕಲ್ಯಾಣ ಕರ್ನಾಟಕ ಭಾಗದ ಜನರಿಗೆ ಈ ನಿಟ್ಟಿನಲ್ಲಿ ಉತ್ತಮ ಮತ್ತು ತುರ್ತು ಚಿಕಿತ್ಸೆ ನೀಡುವಂತಹ ಕೇಂದ್ರದ ಅವಶ್ಯಕತೆಯಿತ್ತು. ಆದ್ದರಿಂದ ಕಲಬುರಗಿಯಲ್ಲಿ ನಾಲ್ಕನೆಯ ಟ್ರಾಮಾ ಕೇರ್ ಸೆಂಟರ್  ಉದ್ದಾಟನೆ ಇಂದು ಮಾಡಿದ್ದೇವೆ. ಇದು ಕಲ್ಯಾಣದ ಜನತೆಯ  ಹೆಮ್ಮೆಯ ಸಂಗತಿಯಾಗಿದೆ ಎಂದರು.

ಈ ಹಿಂದೆ 2017 ರಲ್ಲಿ ಈ ಟ್ರಾಮಾ ಸೆಂಟರ್ ಅನ್ನು ಆರಂಭಿಸಲು ಸಿದ್ದರಾಮಯ್ಯ ನೇತೃತ್ವದ ನಮ್ಮ ಸರ್ಕಾರ ಎಲ್ಲ ರೀತಿಯ ಸೌಲಭ್ಯಗಳನ್ನ ಮಾಡಿಟ್ಟಿತ್ತು. ಅಲ್ಲದೆ ಮಲ್ಲಿಕಾರ್ಜುನ ಖರ್ಗೆ ಅವರು ಕಟ್ಟಡಕ್ಕೆ ಅಡಿಗಲ್ಲು ಹಾಕಿ ಕಟ್ಟಡವನ್ನು ಉದ್ಘಾಟಿಸಿದ್ದರು ಕೂಡ. ಆದರೆ, ಬಿಜೆಪಿ ಸರ್ಕಾರ ಕಳೆದ ಐದು ವರ್ಷದಲ್ಲಿ ಈ ಕೇಂದ್ರವನ್ನು ಆರಂಭಿಸುವ ಮತ್ತು ಜನರಿಗೆ ಉತ್ತಮ ಆರೋಗ್ಯ ಸೇವೆಯನ್ನು ನೀಡುವ ನಿಟ್ಟಿನಲ್ಲಿ ಕಾಳಜಿ ವಹಿಸಲಿಲ್ಲ. ಇವರ  ನಿರ್ಲಕ್ಷದಿಂದಾಗಿ ಸಾಕಷ್ಟು ಹಾನಿಯೂ ಆಗಿದೆ ಎಂದರು.

Advertisement

ಶೀಘ್ರವೇ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆ

ಈಗಾಗಲೇ ಜಯದೇವ ಆಸ್ಪತ್ರೆಯೆಂದು ವಿಸ್ತರಿಸಲಾಗುತ್ತಿದೆ. ಅದರೊಂದಿಗೆ ಶೀಘ್ರದಲ್ಲಿಯೇ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆಯನ್ನು ಕೂಡ ನಾವು ಆರಂಭಿಸಲು ಈಗಾಗಲೇ ಹಣಕಾಸು ಇಲಾಖೆಯ ಅನುಮೋದನೆ ಪಡೆಯಲಾಗಿದೆ. ಇನ್ನಷ್ಟೇ ಕೆಲಸ ಆರಂಭಿಸಬೇಕಾಗಿದೆ. ಅಂದುಕೊಂಡಂತೆ ಎಲ್ಲವೂ ಆದರೆ ಜೂನ್ ಒಳಗಾಗಿ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ ಕಾರ್ಯರಂಭ ಮಾಡಲಿದೆ ಎಂದರು.

ಅದಲ್ಲದೆ, ಕಲ್ಯಾಣ ಕರ್ನಾಟಕದ ಹೆಬ್ಬಾಗಿಲಾದ ಕಲಬುರಗಿಗೆ ಇಂದಿರಾ ಗಾಂಧಿ ಮಕ್ಕಳ ಆಸ್ಪತ್ರೆ ಹಾಗೂ ನಿಮ್ಹಾನ್ಸ್ ಘಟಕವನ್ನು ಕೂಡ ನಾವು ಆರಂಭಿಸಲು ಯೋಜಿಸಿದ್ದೇವೆ. ಅದಲ್ಲದೆ ಈಗಾಗಲೇ ಬರ್ನ್ ಯುನಿಟ್ಗಾಗಿ 15 ಕೋಟಿ ವೆಚ್ಚದಲ್ಲಿ ಕ್ಯಾಬಿನೆಟ್ ಅನುಮತಿಯನ್ನು ಪಡೆಯಲಾಗಿದೆ ಎಂದರು.

ನಾನು ಹಿಂದಿನ ಅವಧಿಯಲ್ಲಿ ವೈದ್ಯಕೀಯ ಶಿಕ್ಷಣ ಸಚಿವನಾಗಿದ್ದೆ ಮಧ್ಯದಲ್ಲಿ ಐದು ವರ್ಷಗಳ ಕಾಲ ಬಿಜೆಪಿ ಸರ್ಕಾರ ಬಂದಿತ್ತು. ಈಗ ಪುನಃ ನನಗೆ ವೈದ್ಯಕೀಯ ಶಿಕ್ಷಣ ಸಚಿವ ಸ್ಥಾನವೇ ಸಿಕ್ಕಿದೆ ಇದರಿಂದಾಗಿ ನನಗೆ ಕಲ್ಯಾಣ ಭಾಗದಲ್ಲಿ ಆರೋಗ್ಯ ಸೇವೆಗಳ ಕುರಿತು ಹೆಚ್ಚು ಆಸಕ್ತಿ ಮತ್ತು ತುರಿಸಿನಿಂದ ಕೆಲಸಗಳನ್ನು ಮಾಡಲು ಅನುಕೂಲವಾಗುತ್ತಿದೆ. ಅಂದುಕೊಂಡಂತೆ ಅಲ್ಪ‌ಕಾಲಾವಧಿಯಲ್ಲಿ ಜಯದೇವ ವಿಸ್ತರಣೆ, ಟ್ರಾಮಾ ಸೆಂಟರ್, ಕಿದ್ವಾಯಿ ಹಾಗೂ ಒತರೆ ಕೆಲಸ ಪೂರ್ಣಗೊಳಿಸಲು‌ ಕೆಲಸ ಮಾಡಿದ ಡಾಕ್ಟರ್ ಬಾಲಾಜಿ ರೈ ಹಾಗೂ ಡಾಕ್ಟರ್ ಸಂದೀಪ್ ಸೇರಿದಂತೆ ಕಲ್ಬುರ್ಗಿ ಜಿಮ್ಸ್ ನಿರ್ದೇಶಕರಾದ ಉಮೇಶ್  ಹಾಗೂ ಜಿಮ್ಸ ಅಧೀಕ್ಷಕ ಶಿವಕುಮಾರ್ ಕಾರ್ಯವನ್ನು ಅಭಿನಂದಿಸುತ್ತೇನೆ ಎಂದರು.

ಇದಲ್ಲದೆ 50 ಕೋಟಿ ವೆಚ್ಚದಲ್ಲಿ ಕ್ರಿಟಿಕಲ್ ಕೇರ್ ಸೆಂಟರ್ ಹಾಗೂ ಎರಡು ನೂರು ಹಾಸಿಗೆಯ ತಾಯಿ ಮಕ್ಕಳ ಪ್ರತ್ಯೇಕ ಆಸ್ಪತ್ರೆಯನ್ನು ಕೂಡ ಶೀಘ್ರದಲ್ಲಿಯೇ ಕಾರ್ಯಾರಂಭ ಮಾಡಿಸಲಾಗುವುದು. ಶ್ರೀಮಂತರು ಎಲ್ಲೂ ಬೇಕಾದರೂ ಅಲ್ಲಿ ತಮಗೆ ಇಷ್ಟವಾದ ರೀತಿಯಲ್ಲಿ ಚಿಕಿತ್ಸೆ ಪಡೆಯಬಹುದು. ಆದರೆ ಬಡವರು ಹಾಗೂ ಅಶಕ್ತರು ಮಾತ್ರ ಸರ್ಕಾರಿ ವ್ಯವಸ್ಥೆಯನ್ನೇ ನಂಬಿದ್ದಾರೆ. ಆದ್ದರಿಂದ ಅವರ ನಂಬಿಕೆ ಹಾಗೂ ಅವರ ಜೀವ ಉಳಿಸುವುದು. ಸರ್ಕಾರದ ಭಾಗವಾಗಿ ನನ್ನ ಆದ್ಯ ಕರ್ತವ್ಯವೆಂದು ನಾನು ಕಲ್ಬುರ್ಗಿ ಭಾಗದಲ್ಲಿ ಆರೋಗ್ಯ ಸೇವೆಗಳನ್ನು ಉತ್ತಮ ಪಡಿಸುವಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಈ ಕಾರ್ಯದಲ್ಲಿ ನನಗೆ ಸಹಕಾರ ನೀಡಿದ ಎಲ್ಲರನ್ನೂ ನಾನು ಸ್ಮರಿಸುತ್ತೇನೆ ಎಂದರು.

ಈ ವೇಳೆಯಲ್ಲಿ ಸಚಿವ ಪ್ರಿಯಾಂಕ ಖರ್ಗೆ, ಶಾಸಕರಾದ ಅಲ್ಲಮಪ್ರಭು ಪಾಟೀಲ್, ಕನಿಜ್ ಫಾತಿಮಾ, ತಿಪ್ಪಣ್ಣಪ್ಪ ಕಮಕ್ನೂರ್, ಚಂದ್ರಶೇಖರ್ ಜಿಲ್ಲಾಧಿಕಾರಿ ಪೌಜಿಯಾ ತರನ್ನುಮ್, ಕಮಿಷನರ್ ಚೇತನ್ ಆರ್, ಎಸ್ ಪಿ ಶ್ರೀನಿವಾಸಲು ಅಡೂರ್ ಹಾಗೂ ಜಿಮ್ಸ್ ಸಿಬ್ಬಂದಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next