Advertisement

ಗ್ರಾಪಂ ಸದಸ್ಯರ ವಿಚಾರಣೆಗೆ ಡಿಎಸ್‌ ಹಾಜರಿ ಕಡ್ಡಾಯ

03:09 PM Aug 19, 2022 | Team Udayavani |

ದಾವಣಗೆರೆ: ಗ್ರಾಪಂ ಅಧ್ಯಕ್ಷ, ಸದಸ್ಯರ ಮೇಲಿನ ಆರೋಪಗಳ ವಿಚಾರಣೆ ನಡೆಸುವ ಅರೆ ನ್ಯಾಯಿಕ ನ್ಯಾಯಾಲಯಕ್ಕೆ ಜಿಪಂ ಪರವಾಗಿ ಅಧಿಕಾರಿಗಳು ಗೈರಾಗುವುದನ್ನು ಗಂಭೀರವಾಗಿ ಪರಿಗಣಿಸಿರುವ ಸರ್ಕಾರ, ವಿಚಾರಣೆ ಕಾಲಕ್ಕೆ ಜಿಪಂ ಹಿರಿಯ ಅಧಿಕಾರಿಗಳು (ಉಪಕಾರ್ಯದರ್ಶಿಗಳು) ಕಡ್ಡಾಯವಾಗಿ ಹಾಜರಿರಲು ಆದೇಶಿಸಿದೆ.

Advertisement

ಕರ್ನಾಟಕ ಗ್ರಾಮ ಸ್ವರಾಜ್‌ ಮತ್ತು ಪಂಚಾಯತ್‌ರಾಜ್‌ ಅಧಿನಿಯಮ-1993ರ ಪ್ರಕರಣ 43(ಎ), 48(4) ಹಾಗೂ 48(5)ರಡಿ ಗ್ರಾಪಂ ಅಧ್ಯಕ್ಷರು, ಸದಸ್ಯರು ಅಧಿಕಾರ ಮತ್ತು ಹಣ ದುರುಪಯೋಗ ಪಡಿಸಿಕೊಂಡ ಪ್ರಕರಣ, ಇಲ್ಲವೇ ನಿರಂತರವಾಗಿ ಸಭೆಗಳಿಗೆ ಗೈರಾಗುವ ಮತ್ತು ಸುಳ್ಳು ಜಾತಿ ಪ್ರಮಾಣಪತ್ರ ಪಡೆದು ಸದಸ್ಯತ್ವ ಹೊಂದುವ ಪ್ರಕರಣಗಳನ್ನು ಅಪರ ಮುಖ್ಯ ಕಾರ್ಯದರ್ಶಿಯವರ ಅರೆನ್ಯಾಯಿಕ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಿ, ಸೂಕ್ತ ತೀರ್ಮಾನ ಕೈಗೊಳ್ಳಲಾಗುತ್ತದೆ. ಆದರೆ ಇಂಥ ಪ್ರಕರಣಗಳ ವಿಚಾರಣೆ ವೇಳೆ ಜಿಪಂ ಸಿಇಒ ಪರವಾಗಿ ಹಿರಿಯ ಅಧಿಕಾರಿಗಳು ಹಾಜರಾಗುತ್ತಿಲ್ಲ. ಹೀಗಾಗಿ ಈ ಪ್ರಕರಣಗಳ ವಿಚಾರಣೆ ಹಾಗೂ ತೀರ್ಮಾನಕ್ಕೆ ಭಾರೀ ವಿಳಂಬವಾಗುತ್ತಿದೆ. ಆದ್ದರಿಂದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಉಮಾ ಮಹಾದೇವನ್‌, ವಿಚಾರಣೆಗೆ ಜಿಪಂ ಕಡೆಯಿಂದ ಹಿರಿಯ ಅಧಿಕಾರಿಗಳು ಕಡ್ಡಾಯವಾಗಿ ಹಾಜರಿದ್ದು ವರದಿ ನೀಡಲು ಆ.17ರಂದು ಸುತ್ತೋಲೆ ಮೂಲಕ ಸೂಚನೆ ನೀಡಿದ್ದಾರೆ.

ಸಾಮಾನ್ಯವಾಗಿ ಇಂಥ ಪ್ರಕರಣಗಳ ಸಂದರ್ಭದಲ್ಲಿ ಸಂಬಂಧಪಟ್ಟವರು ನ್ಯಾಯವಾದಿಗಳನ್ನು ಹಿಡಿದು ಪ್ರಕರಣ ಗೆಲ್ಲಿಸಲು ಪ್ರಯತ್ನ ನಡೆಸುತ್ತಾರೆ. ಆದರೆ, ಪ್ರತಿವಾದಿ ಸ್ಥಾನದಲ್ಲಿ ಸರ್ಕಾರದ ಪರವಾಗಿ ಇರಬೇಕಾದ ಅಧಿಕಾರಿಗಳು ಇರದೇ ವಿಚಾರಣೆ ಸಮರ್ಪಕವಾಗಿ ನಡೆಯುವುದಿಲ್ಲ.

ಹೆಚ್ಚಿನ ಸಂದರ್ಭದಲ್ಲಿ ಕಿರಿಯ ಅಧಿಕಾರಿಗಳು ಹಾಜರಾದರೂ ಪ್ರಕರಣದ ಬಗ್ಗೆ ಸರಿಯಾದ ವರದಿ, ಮಾಹಿತಿ ಸಲ್ಲಿಕೆ ಸಾಧ್ಯವಾಗುವುದಿಲ್ಲ. ಹೀಗಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆ ಹಿರಿಯ ಅಧಿಕಾರಿ ಜಿಪಂ ಉಪಕಾರ್ಯದರ್ಶಿಗಳೇ ವಿಚಾರಣೆಗೆ ಹಾಜರಿದ್ದು ಸಮರ್ಪಕ ಮಾಹಿತಿ, ದಾಖಲೆ ಒದಗಿಸುವ ಕಾರ್ಯ ಮಾಡಬೇಕು ಎಂದು ಸೂಚಿಸಲಾಗಿದೆ.

ಅಧಿಕಾರಿಗಳಿಗೆ ಸೂಚನೆ: ವಿಚಾರಣೆ ವಿಳಂಬವಾಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆ, ಅಧಿಕಾರಿಗಳಿಗೆ ಅನೇಕ ನಿರ್ದೇಶನ ನೀಡಿದೆ. ಪ್ರಕರಣದ ವಿಚಾರಣೆಗೆ ಸಂಬಂಧಿಸಿ ಹೊರಡಿಸಲಾಗುವ ನೋಟಿಸ್‌ ಅನ್ನು ಸಂಬಂಧಪಟ್ಟವರಿಗೆ ಜಾರಿಗೊಳಿಸಿ ಅದರ ಸೀÌಕೃತಿಯನ್ನು ದಿನಾಂಕದೊಂದಿಗೆ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಪಡೆದು, ಜಿಪಂ ಸಿಇಒ ಮೂಲಕ ಸರ್ಕಾರಕ್ಕೆ ಸಲ್ಲಿಸಬೇಕು. ಜಿಪಂ ಉಪಕಾರ್ಯದರ್ಶಿಗಳು ಪ್ರಕರಣಕ್ಕೆ ಸಂಬಂಧಿಸಿದ ಪೂರಕ ಮಾಹಿತಿ, ದಾಖಲೆ ಹಾಗೂ ಅದರ ಸಂಕ್ಷಿಪ್ತ ಟಿಪ್ಪಣಿಯೊಂದಿಗೆ ವಿಚಾರಣೆಗೆ ಕಡ್ಡಾಯವಾಗಿ ಹಾಜರಾಗಬೇಕು.

Advertisement

ತಾಪಂನಲ್ಲಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಕಾರ್ಯ ನಿರ್ವಾಹಕ ಅಧಿಕಾರಿ ಹಾಗೂ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಪ್ರಕರಣದ ಪೂರ್ಣ ಮಾಹಿತಿಯೊಂದಿಗೆ ಹಾಜರಾಗಬೇಕು. ಅರೆನ್ಯಾಯಿಕ ನ್ಯಾಯಾಲಯದ ವಿಚಾರಣೆ ಸಮಯದಲ್ಲಿ ಸರ್ಕಾರದ ಅಪರ ಮುಖ್ಯಕಾರ್ಯದರ್ಶಿಗಳು ನೀಡುವ ನಿರ್ದೇಶನಗಳನ್ನು ಜಿಪಂ ಸಿಇಒ ವೈಯಕ್ತಿಕ ಗಮನಹರಿಸಿ ಅನುಷ್ಠಾನಗೊಳಿಸಲು ಕ್ರಮ ಕೈಗೊಂಡು ಸರ್ಕಾರಕ್ಕೆ ವರದಿ ಸಲ್ಲಿಸಬೇಕು ಎಂದು ತಿಳಿಸಲಾಗಿದೆ.

ರಾಜಕೀಯ ಒತ್ತಡ ಕಾರಣ?

ಅರೆನ್ಯಾಯಿಕ ನ್ಯಾಯಾಲಯದ ವಿಚಾರಣೆ ಕಾಲಕ್ಕೆ ಅಧಿಕಾರಿಗಳು ಗೈರಾಗಲು ರಾಜಕೀಯ ಒತ್ತಡವೇ ಕಾರಣ ಎನ್ನಲಾಗುತ್ತಿದೆ. ನಿಯಮಗಳ ಪ್ರಕಾರ ಗ್ರಾಪಂಗಳಿಗೆ ಪಕ್ಷರಹಿತವಾಗಿ ಚುನಾವಣೆ ನಡೆಯಬೇಕು. ಆದರೆ, ಬಹುತೇಕ ಸದಸ್ಯರು ಯಾವುದಾದರೊಂದು ರಾಜಕೀಯ ಪಕ್ಷದ ಬಲ-ಬೆಂಬಲದೊಂದಿಗೆ ಅಧಿಕೃತವಾಗಿ ಆಯ್ಕೆಯಾಗುವುದು ಮಾಮೂಲು. ಹೀಗಾಗಿ ಆಯ್ಕೆಯಾಗಿರುವ ಸದಸ್ಯರು ರಾಜಕೀಯ ಪಕ್ಷಗಳ ಮುಖಂಡರ ಅಣತಿಯಂತೆ ನಡೆಯುತ್ತಾರೆ. ಸದಸ್ಯರಿಂದ ಏನೇ ಲೋಪಗಳಾದರೂ ರಾಜಕೀಯ ಮುಖಂಡರು ಅವರಿಗೆ ಶ್ರೀರಕ್ಷೆಯಾಗಿರುತ್ತಾರೆ. ರಾಜಕೀಯ ಒತ್ತಡದ ಕಾರಣಕ್ಕಾಗಿಯೇ ಅನೇಕ ಅಧಿಕಾರಿಗಳು ಇಂಥ ಪ್ರಕರಣಗಳ ವಿಚಾರಣೆ ಬಂದಾಗ ಗೈರಾಗಿ ಇಲ್ಲವೇ ಕಿರಿಯ ಅಧಿಕಾರಿಗಳನ್ನು ಕಳುಹಿಸಿ ಕೈತೊಳೆದುಕೊಳ್ಳಲು ಪ್ರಯತ್ನಿಸುತ್ತಾರೆ. ಇದರಿಂದ ಸದಸ್ಯರ ಮೇಲಿನ ಪ್ರಕರಣಗಳ ವಿಚಾರಣೆ ಸದಸ್ಯರ ಆಡಳಿತಾವಧಿ ಮುಗಿದರೂ ಮುಗಿಯುವುದಿಲ್ಲ. ಮುಗಿದರೂ ಅದು ಸಾಬೀತುಪಡಿಸುವಲ್ಲಿ ವಿಫಲವಾಗುತ್ತದೆ ಎಂಬುದು ಪಂಚಾಯಿತಿ ರಾಜಕಾರಣ ಬಲ್ಲವರ ಅಭಿಪ್ರಾಯ.

ಗ್ರಾಪಂ ಅಧ್ಯಕ್ಷ, ಸದಸ್ಯರ ಮೇಲಿನ ಆರೋಪಗಳ ಅರೆನ್ಯಾಯಿಕ ನ್ಯಾಯಾಲಯದ ವಿಚಾರಣೆ ವೇಳೆ ಜಿಪಂನಿಂದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದು ಪೂರಕ ಮಾಹಿತಿ, ದಾಖಲೆ ನೀಡಬೇಕು ಎಂಬ ನಿಯಮ ಹಿಂದಿನಿಂದಲೂ ಇದೆ. ಈಗ ಹಿರಿಯ ಅಧಿಕಾರಿಗಳು ಕಡ್ಡಾಯವಾಗಿ ಹಾಜರಿರಲು ಸೂಚಿಸಲಾಗಿದೆ. ●ಡಾ| ಎ.ಚನ್ನಪ್ಪ, ದಾವಣಗೆರೆ ಜಿಪಂ ಸಿಇಒ

-ಎಚ್‌.ಕೆ. ನಟರಾಜ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next