ಶಿವಮೊಗ್ಗ: ಭದ್ರಾ ಜಲಾಶಯಶದಿಂದ ಗದಗ ಜಿಲ್ಲೆಯ ಗ್ರಾಮಗಳಿಗೆ ಕುಡಿಯುವ ನೀರು ಒದಗಿಸಲು ಸದ್ಯಕ್ಕೆ ಸಾಧ್ಯವಿಲ್ಲ ಎಂಬ ಒಮ್ಮತದ ತೀರ್ಮಾನವನ್ನು ಸೋಮವಾರ ನಡೆದ ಭದ್ರಾ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಕೈಗೊಳ್ಳಲಾಯಿತು.
ಗದಗ ಜಿಲ್ಲೆಯ ಬಹುಗ್ರಾಮ ಕುಡಿಯುವ ನೀರು ಪೂರೈಸುವ ಸಿಂಗಟಾಲೂರು ಏತ ನೀರಾವರಿ ಯೋಜನೆ-2 ರ ಉದ್ಘಾಟನೆ ಮಾ. 14 ರಂದು ನಡೆಯಲಿರುವ ಹಿನ್ನೆಲೆಯಲ್ಲಿ ಭದ್ರಾ ಜಲಾಶಯದಿಂದ ನದಿ ಪಾತ್ರಕ್ಕೆ 2 ಟಿಎಂಸಿ ಅಡಿ ನೀರು ಹರಿಸುವಂತೆ ಭದ್ರಾ ಜಲಾಶಯ ಯೋಜನೆ ಕುಡಿಯುವ ನೀರಿನ ಸಮಿತಿ ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತರ ಆದೇಶ ತಿರಸ್ಕರಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.
ಈ ಸಂದರ್ಭದಲ್ಲಿ ಭದ್ರಾ ಕಾಡಾ ಅಧ್ಯಕ್ಷ ಎಚ್.ಎಸ್. ಸುಂದರೇಶ್ ಮಾತನಾಡಿ, ಸಿಂಗಟಾಲೂರು ಕುಡಿಯುವ ನೀರಿನ ಯೋಜನೆಯನ್ನು ಮಾ. 14ರಂದು ಉದ್ಘಾಟಿಸಲು ಮುಖ್ಯಮಂತ್ರಿಗಳು ಗದಗ ಜಿಲ್ಲೆಗೆ ಆಗಮಿಸಲಿದ್ದು, ಅಲ್ಲಿನ ಕುಡಿಯುವ ನೀರಿನ ಅಗತ್ಯತೆಯನ್ನು ಮನಗಂಡು ಹಾಗೂ ಸಾರ್ವಜನಿಕ ಹಿತದೃಷ್ಟಿಯಿಂದ ಮಾ. 11ರ 10 ಗಂಟೆಯಿಂದ ಭದ್ರಾ ಜಲಾಶಯದ ನದಿಪಾತ್ರಕ್ಕೆ 2 ಟಿಎಂಸಿ ಅಡಿ ನೀರನ್ನು ಬಿಡುವಂತೆ ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತರು ಆದೇಶ ಮಾಡಿದ್ದಾರೆ. ಈ ಕುರಿತು ನಿರ್ಣಯ ಕೈಗೊಳ್ಳಲು ಸಭೆ ಕರೆಯಲಾಗಿದೆ ಎಂದು ತಿಳಿಸಿದರು.
2017ನೇ ಸಾಲಿನಲ್ಲಿ ಜೂನ್ 1 ರಿಂದ 2018ರ ಮಾರ್ಚ್ 11 ರವರೆಗೆ ಈಗಾಗಲೇ ಗದಗ ಭಾಗಕ್ಕೆ 2.325 ಟಿಎಂಸಿ ಅಡಿ ನೀರನ್ನು ಹರಿಸಲಾಗಿದೆ. ಇನ್ನೂ 1.1 ಟಿಎಂಸಿ ಅಡಿ ನೀರು ಹರಿಸಬೇಕಾಗಿದೆ. ಈ ನೀರನ್ನು ಹರಿಸಲು ಮೇ ಕೊನೆಯವರೆಗೆ
ಸಮಯವಕಾಶವಿದೆ. ಆದರೆ 1.1 ಟಿಎಂಸಿ ಅಡಿ ಬದಲು 2 ಟಿಎಂಸಿ ಅಡಿ ನೀರನ್ನು ಒಮ್ಮೆಲೆ ಈಗಲೇ ನದಿಗೆ ಹರಿಸುವಂತೆ
ಆದೇಶಿಸಿದ್ದು, ಸದ್ಯದ ಪರಿಸ್ಥಿತಿಯಲ್ಲಿ ಬಿಡಲು ಸಾಧ್ಯವಿಲ್ಲ. ಸರ್ಕಾರದ ಆದೇಶದ ಸಾಧಕ ಬಾಧಕಗಳನ್ನು ಪರಿಶೀಲಿಸಿ
ಮುಂದಿನ ಕ್ರಮ ಕೈಗೊಳ್ಳಬಹುದಾಗಿದೆ ಎಂದು ತಿಳಿಸಿದರು. ಇದಕ್ಕೆ ಹರಿಹರ ಶಾಸಕ ಶಿವಶಂಕರ್, ಭದ್ರಾವತಿ ಶಾಸಕ
ಅಪ್ಪಾಜಿಗೌಡ, ರೈತ ಮುಖಂಡರಾದ ಕೆ.ಟಿ. ಗಂಗಾಧರ್, ಶಾಂತಕುಮಾರ್ ಮತ್ತಿತರರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ಯಾವುದೇ ಕಾರಣಕ್ಕೂ ನೀರು ಬಿಡುವುದು ಬೇಡ. ಸಾಧಕ ಬಾಧಕ ಪರಿಶೀಲಿಸುವುದು ಬೇಡ. ನೀರು ಬಿಡುವುದಿಲ್ಲ ಎಂದು ತೀರ್ಮಾನ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ತರೀಕೆರೆ ಭಾಗದ 100ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಕುಡಿಯುವ ನೀರಿಗೆ ತಾತ್ವಾರ ಉಂಟಾಗಿದೆ. ಜನ, ಜಾನುವಾರುಗಳಿಗೆ ಕುಡಿಯಲು, ತೋಟ ಉಳಿವಿಗಾಗಿ ಒಂದು ಟ್ಯಾಂಕರ್ ನೀರಿಗೆ 6 ರಿಂದ 7 ಸಾವಿರ ರೂ. ಖರ್ಚು ಮಾಡುತ್ತಿದ್ದಾರೆ. ಆ ಭಾಗದಲ್ಲಿ ಬೆಳೆ ಬೆಳಯಲು ಜನರು ನೀರು ಬಳಸುತ್ತಿಲ್ಲ. ಇರುವ ತೋಟಗಳನ್ನು ಉಳಿಸಲು ನಾಲೆಗಳಲ್ಲಿ ನೀರು ಹರಿಯುವ ಸಂದರ್ಭದಲ್ಲಿ ಮೋಟಾರ್ ಅಳವಡಿಸಿದರೆ ಅವರ ಮೇಲೆ ಕೇಸ್ ಹಾಕಲಾಗುತ್ತಿದೆ. ಅಧಿಕಾರಿಗಳು ಅವರಿಗೆ ತೊಂದರೆ ಕೊಡಬಾರದು. ಈ ಬಗ್ಗೆ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡುವಂತೆ ತರೀಕೆರೆ ಶಾಸಕರು ಕಾಡಾ ಅಧ್ಯಕ್ಷರಿಗೆ ಮನವಿ ಮಾಡಿದರು.
ಚುನಾವಣೆ ಹತ್ತಿರ ಬರುತ್ತಿದೆ ಎಂಬ ಕಾರಣಕ್ಕೆ ಆ ಭಾಗದಲ್ಲಿ ಕುಡಿಯುವ ನೀರು ಯೋಜನೆ ಉದ್ಘಾಟನೆಗಾಗಿ ನೀರು ಬಿಡುಗಡೆ ಮಾಡುವಂತೆ ಸರ್ಕಾರ ಆದೇಶ ಹೊರಡಿಸಿರುವುದು ಸರಿಯಲ್ಲ. ಆ ಭಾಗದ ಜನರನ್ನು ತೃಪ್ತಿ ಪಡಿಸಲು ಈ ಭಾಗದ ಜನರನ್ನು ಬಲಿ ಕೊಟ್ಟರೆ, ಬೀದಿಗಿಳಿದು ರೈತರು ಪ್ರತಿಭಟಿಸಲಿದ್ದಾರೆ ಎಂದು ಹರಿಹರ ಶಾಸಕ ಎಚ್.ಎಸ್. ಶಿವಶಂಕರ್, ಭದ್ರಾವತಿ ಶಾಸಕ ಎಂ.ಜೆ. ಅಪ್ಪಾಜಿಗೌಡ ಎಚ್ಚರಿಸಿದರು. ಮುಖ್ಯ ಇಂಜಿನಿಯರ್ ಆರ್.ಪಿ. ಕುಲಕರ್ಣಿ ಮಾತನಾಡಿ, ಸಮಿತಿ ತೀರ್ಮಾನವನ್ನು ಸರ್ಕಾರಕ್ಕೆ ಕಳುಹಿಸಲಾಗುವುದು. ಗದಗ ಭಾಗಕ್ಕೆ ಕುಡಿಯುವ ನೀರು ಬಿಡುಗಡೆ ಮಾಡಲು ಸಾಧ್ಯವಿಲ್ಲ ಎಂದು ಮನವರಿಕೆ ಮಾಡಿಕೊಡಲಾಗುವುದು ಎಂದರು. ಸಲಹಾ ಸಮಿತಿ ಸದಸ್ಯ ತೇಜಸ್ವಿ ಪಟೇಲ್ ಇತರರು ಇದ್ದರು.