ಉಳಿಕೆ ಮತ್ತು ಹೂಡಿಕೆ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಹಣವನ್ನು ಉಳಿಸುವುದು ಎಷ್ಟು ಮುಖ್ಯವೋ ಅದನ್ನು ಹೆಚ್ಚಿಸಿಕೊಳ್ಳುವುದೂ ಅಷ್ಟೇ ಮುಖ್ಯ.
ಉಳಿಸಲೇ ಬೇಕು ಎಂದು ಇಷ್ಟೆಲ್ಲ ಒತ್ತುಕೊಟ್ಟು ಹೇಳುವುದಕ್ಕೆ ಕಾರಣವೂ ಇದೆ. ಈಗ ನಮ್ಮ ದೇಶದಲ್ಲಿ ಚಿಕ್ಕ ವಯಸ್ಸಿನಲ್ಲಿಯೇ ದುಡಿಮೆ ಆರಂಭಿಸುತ್ತಿರುವವರ ಸಂಖ್ಯೆ
ಅಧಿಕವಾಗಿದೆ. ಮಹಿಳೆಯರೂ ಅತಿ ಹೆಚ್ಚಿನ ಪ್ರಮಾಣದಲ್ಲಿ ಆರ್ಥಿಕ ಸ್ವಾವಲಂಬಿಗಳಾಗುತ್ತಿದ್ದಾರೆ. ಅಂದರೆ ಹಣದ ಸಂಪಾದನೆ ಹಲವು ಬಗೆಯಲ್ಲಿ ಆಗುತ್ತಿದೆ. ಈ ಸಂಪಾದನೆ ಎಲ್ಲಿಗೆ ಹೋಗುತ್ತಿದೆ? ಈ ಸಂಪಾದನೆ ಉಳಿತಾಯವಾಗಿ ಬ್ಯಾಂಕ್ ಗಳಿಗೆ ಹೋಗುತ್ತಿಲ್ಲ. ಪರಿಣಾಮ ಅಂದರೆ ಬ್ಯಾಂಕಿನಲ್ಲಿ ಉಳಿತಾಯದ ಪ್ರಮಾಣದಲ್ಲಿ ಗಣನೀಯ ಇಳಿಕೆ ವರ್ಷದಿಂದ ವರ್ಷಕ್ಕೆ ಆಗುತ್ತಿದೆ. ಇಷ್ಟೇ ಅಲ್ಲ ಹೊರಗೆ ನೋಡಿದರೆ ಪ್ರತಿ ಬೀದಿಯಲ್ಲಿ, ಸಣ್ಣ ಪುಟ್ಟನಗರಗಳಲ್ಲೂ ದೊಡ್ಡ ದೊಡ್ಡ ಅಂಗಡಿಗಳು ರಾರಾಜಿಸುತ್ತಿದೆ. ಇದರ ಅರ್ಥ ಏನು? ಕೊಳ್ಳುವವರು ಜಾಸ್ತಿ ಇರದಿದ್ದರೆ ಇವರೇಕೆ ಅಂಗಡಿ ತೆರೆಯುತ್ತಿದ್ದರು. ನಮ್ಮ ದುಡಿಯುವ ಹಣ ತರಹೇವಾರಿ ವಸ್ತುಗಳನ್ನು ಕೊಳ್ಳುವುದಕ್ಕೆ ಹೋಗುತ್ತಿದೆ!
ನಿಜ, ಉಳಿಸಬೇಕು ಎಂದು ಯೋಚಿಸಿರುತ್ತೇವೆ. ಎಷ್ಟೋ ಸಾರಿ ಹಾಗಂತ ಬಾಯಿಬಿಟ್ಟು ಹೇಳಿರುತ್ತೇವೆ. ಆದರೆ ಅಂದುಕೊಂಡಿದ್ದನ್ನು ಆಚರಣೆಗೆ ತರುವುದಕ್ಕೆ ಎಡವುತ್ತೇವೆ. ಸುಮ್ಮ ಸುಮ್ಮನೇ ಖರ್ಚು ಮಾಡುತ್ತೇವೆ. ಇನ್ನು ಸಾಕು, ಇಂತಹ ಖರ್ಚುಗಳು ಬೇಡ ಎಂದು ನಿರ್ಧರಿಸಿರುತ್ತೇವೆ. ಆದರೆ ಅಭ್ಯಾಸ ಬಲ. ಅಂಗಡಿಗೆ ಹೋದ ತಕ್ಷಣ, ಜಾಹೀರಾತು ನೋಡಿದ ತಕ್ಷಣ ಸುಮ್ಮನೇ ನೋಡೋಣ, ಕೊಳ್ಳುವುದಕ್ಕೆ ಅಲ್ಲ, ಬೇಜಾರಾಗಿದೆ ಟೈಂಪಾಸ್ ಆಗತ್ತೆ ಎಂದೆಲ್ಲಾ ಹೇಳಿಕೊಳ್ಳುತ್ತ ಶಾಪಿಂಗ್ ಹೋದವರು ಖರೀದಿಸದೇ ಬರಲಾಗದೇ ಏನೋ ಒಂದನ್ನು ಕೊಳ್ಳುತ್ತಾರೆ. ಖರೀದಿಸುವುದೂ ಒಂದು ಚಟದ ಹಾಗೇ. ಅಂದರೆ ಇದು ಅಭ್ಯಾಸವಾಗಿ ಹೋಗಿದೆ.
ಮನೆಯಲ್ಲಿ ಗಂಡ-ಹೆಂಡತಿ ಜೊತೆಗೆ ಕುಳಿತು ಎಷ್ಟು ಬೇಕು, ಏನು ಬೇಕು ಎನ್ನುವಂತಹ ಲೆಕ್ಕಾಚಾರ ಹಾಕುವ ಕ್ರಮ ರೂಢಿಸಿಕೊಂಡರೆ ಅನಗತ್ಯ ಖರ್ಚು ಕಡಿಮೆ ಆಗುತ್ತದೆ. ಇಬ್ಬರೂ ಒಟ್ಟಿಗೆ ಕುಳಿತು ಸಂಸಾರದ ಆರ್ಥಿಕ ವಿಷಯಗಳ ಬಗೆಗೆ ಮಾತನಾಡಿದಾಗ ಪರಸ್ಪರರ ನಡುವೆ ಒಂದು ಅನನ್ಯ ಬಾಂಧವ್ಯ, ಮನೆ, ಸಂಸಾರದ ಕುರಿತಾದ ಕನಸುಗಳೂ ಜೊತೆಯಾಗುತ್ತದೆ. ಇದೆಲ್ಲ ನಮ್ಮ ಜೀವನದಲ್ಲಿ ಬಹುದೊಡ್ಡ ಸುಧಾರಣೆಯನ್ನು ಖಂಡಿತ ತರಬಲ್ಲದು. ಪ್ರತಿ ದಿನ ಆಗದಿದ್ದರೆ ವಾರಕ್ಕೊಮ್ಮೆ ನಿಯಮಿತವಾಗಿ ಹೀಗೆ ಕುಳಿತುಕೊಂಡು ಚರ್ಚಿಸುವುದು ಅತೀ ಅಗತ್ಯ. ಪರಸ್ಪರರ ಅಭಿಪ್ರಾಯ ಹಂಚಿಕೊಳ್ಳುವುದಕ್ಕೆ ಇದು ಸಹಕಾರಿ. ಮನೆಯಲ್ಲಿ ಹಿರಿಯರಿದ್ದರಂತೂ ಅವರ ಅನುಭವ ಕಿರಿಯರಿಗೆ ಬಹುದೊಡ್ಡ ಪಾಠ.
ರೈತ ತಾನು ಬೆಳೆದ ಬೆಳೆಯಲ್ಲಿ ಸ್ವಲ್ಪವನ್ನು ಹಾಗೇ ಇಟ್ಟುಕೊಳ್ಳುತ್ತಾನೆ; ಅದನ್ನು ಮತ್ತೆ ಬಿತ್ತನೆ ಮಾಡುವುದಕ್ಕೆ ಮುಂದೆ ಅದರಿಂದ ಮತ್ತೂ ಹೆಚ್ಚು ಫಸಲು ತೆಗೆಯುತ್ತಾನೆ. ಉಳಿತಾಯವೂ ಹಾಗೇ. ಉಳಿಸುವುದು ಏಕೆಂದರೆ ಅದರಿಂದ ಮತ್ತೆ ಇನ್ನಷ್ಟು ಹಣವನ್ನು ಗಳಿಸುವುದಕ್ಕೆ. ಉಳಿಸುವುದು ಬೆಳೆಸುವುದರ ಮೂಲ. ಉಳಿಸುವುದು ಎಷ್ಟು ಮುಖ್ಯವೋ ಅದನ್ನು ಬೆಳೆಸುವುದು ಇನ್ನೂ ಮುಖ್ಯ. ಉಳಿಕೆ ಮತ್ತು ಹೂಡಿಕೆ ಒಂದು ನಾಣ್ಯದ ಎರಡು ಮುಖಗಳಂತೆ.
– ಸುಧಾಶರ್ಮ ಚವತ್ತಿ