ಸವಣೂರು: ಜಗತ್ತಿನ ಪ್ರತಿಯೊಂದು ಮಸೀದಿಯೂ ಪವಿತ್ರ ಕಾಬಾಗೆ ಮುಖ ಮಾಡಿಕೊಂಡಿರುತ್ತದೆ. ಕಾಬಾ ಪವಿತ್ರವಾಗಿ ನಿರ್ಮಾಣವಾಗಿದೆ. ಜಗತ್ತಿನಲ್ಲಿ ನಿರ್ಮಾಣವಾಗುವ ಪ್ರತಿಯೊಂದು ಮಸೀದಿಯೂ ಪಾವಿ ತ್ರತೆಯಿಂದ ಕೂಡಿರಬೇಕು, ಮಸೀದಿ ನಿರ್ಮಾಣ ಮಾಡುವಾತನ ಸಂಪತ್ತೂ ಪವಿತ್ರವಾಗಿರಬೇಕು ಎಂದು ಸಮಸ್ತ ಕೇಂದ್ರ ಮುಶಾವರದ ಅಧ್ಯಕ್ಷ ಸಯ್ಯದುಲ್ ಉಲಮಾ ಮುಹಮ್ಮದ್ ಜಿಫ್ರಿ ಮುತ್ತುಕೋಯಾ ತಂಙಳ್ ಹೇಳಿದರು.
ಸರ್ವೆ ಗ್ರಾಮದ ಕೂಡುರಸ್ತೆಯಲ್ಲಿ ನವೀಕೃತ ಅಲ್ರಿಫಾ ಯಿಯ್ಯ ಜುಮಾ ಮಸೀದಿಯನ್ನು ಉದ್ಘಾಟಿಸಿ ವಕ್ಫ್ ನಿರ್ವಹಣೆ ಮಾಡಿ ಮಾತನಾಡಿದರು.
ಸೌಹಾರ್ದದ ತಾಣ
ಮಸೀದಿಗಳು ಊರಿನ ಸೌಹಾರ್ದದ ತಾಣಗಳಾಗಿವೆ. ಮಸೀದಿ ನಿರ್ಮಾಣವಾಗುವ ವೇಳೆ ಆ ಊರಿನ ಪ್ರತಿಯೊಬ್ಬರಿಗೂ ಸಂತೋಷ ವಾಗುವಂತಾಗಬೇಕು. ಜಾತಿ ಮತ ಧರ್ಮ ಭೇದವಿಲ್ಲದೆ ಎಲ್ಲರೂ ಗ್ರಾಮದಲ್ಲಿ ಸೌಹಾರ್ದದಿಂದ ಬಾಳ್ವೆ ನಡೆಸುವಂತೆ ಮಸೀದಿಗಳು ಪ್ರೇರೇಪಿಸುತ್ತವೆ. ಮಸೀದಿ ನಿರ್ಮಾಣ ಮಾಡುವ ಸಂಪತ್ತಿನ ಮೂಲ ಯಾವುದು ಎಂದು ತಿಳಿದುಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯ. ಮಸೀದಿ ನಿರ್ಮಾಣ ಮಾಡಿದರೆ ಸಾಲದು. ಅದರಲ್ಲಿ ಪ್ರಾರ್ಥನೆ ಹಾಗೂ ಸತ್ಕಾರ್ಯಗಳನ್ನು ಮಾಡುವ ಮೂಲಕ ಗ್ರಾಮದ ಜನತೆಯ ಆಶಾ ಕೇಂದ್ರವಾಗಿ ರೂಪುಗೊಳ್ಳಬೇಕು ಎಂದು ಹೇಳಿದರು. ಕೂಡುರಸ್ತೆ ಮಸೀದಿ ನಿರ್ಮಾಣ ಮಾಡಿದ ಉದ್ಯಮಿಗೆ ತಂಙಳ್ ಅವರು ಪ್ರಾರ್ಥನೆ ನಡೆಸಿದರು.
ಪುತ್ತೂರು ಕೇಂದ್ರ ಜುಮಾ ಮಸೀದಿಯ ಮುದರ್ರಿಸ್ ಸಯ್ಯದ್ ಅಹ್ಮದ್ ಪೂಕೋಯಾ ತಂಙಳ್ ಮಾತನಾಡಿ, ಮಸೀದಿಯ ಘನತೆ ಹಾಗೂ ಗೌರವವನ್ನು ಕಾಪಾಡಿಕೊಂಡು ಬರಬೇಕಾದ್ದು ಜಮಾತಿನವರ ಕರ್ತವ್ಯ. ಮಸೀದಿಯನ್ನು ಪ್ರಾರ್ಥನೆ ನಡೆಸುವ ಮೂಲಕ ಅಂದಗೊಳಿಸಬೇಕು ಎಂದು ಹೇಳಿದರು.
ಪಣೆಮಜಲು ಜುಮಾ ಮಸೀದಿ ಅಧ್ಯಕ್ಷ ಮೂಸಾ, ಮಸೀದಿ ನಿರ್ಮಾಣ ಮಾಡಿರುವ ಉದ್ಯಮಿ ಯೂಸುಫ್ ಶಾರ್ಜಾ, ಮಾಡನ್ನೂರು ನೂರುಲ್ಹುದಾ ಪ್ರಿನ್ಸಿಪಾಲ್ ಅಡ್ವೊಕೇಟ್ ಹನೀಫ್ ಹುದವಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಕ್ವೆ ಖತೀಬ್ ಸಯ್ಯದ್ ಅಬೂಬುರ್ರಹ್ಮಾನ್ ಅಲ್ಬುಖಾರಿ ಫೈಝಿ, ಇರ್ಷಾದ್ ದಾರಿಮಿ ಮಿತ್ತಬೈಲು, ಮಹ್‌ಮೂದುಲ್ ಫೈಝಿ ಓಲೆಮುಂಡೋವು, ಮಸೀದಿ ಗೌರವಾಧ್ಯಕ್ಷ ಮಾಹಿನ್ ಬಾಳಾಯ, ಎಂಜಿನಿಯರ್ ಜಲೀಲ್, ಕರ್ನಾಟಕ ಮುಸ್ಲಿಂ ಜಮಾಅತ್ ಜಿಲ್ಲಾ ಉಪಾಧ್ಯಕ್ಷ ಪಿ.ಎಂ. ಅಬ್ದುಲ್ ರಹಿಮಾನ್ ಅರಿಯಡ್ಕ, ಅಬ್ಟಾಸ್ ಮದನಿ ಪಣೆಜಮಲು, ಕೆ.ಆರ್. ಹುಸೈನ್ ದಾರಿಮಿ ರೆಂಜಲಾಡಿ, ಅನೀಸ್ ಕೌಸರಿ ಕೆಐಸಿ, ಕೂಡುರಸ್ತೆ ಜುಮಾ ಮಸೀದಿ ಅಧ್ಯಕ್ಷ ಪಿ.ಕೆ. ಮಹಮ್ಮದ್, ಮಾಜಿ ಅಧ್ಯಕ್ಷ ಅಬ್ದುಲ್ ಹಮೀದ್ ಕೂಡುರಸ್ತೆ ಉಪಸ್ಥಿತರಿದ್ದರು.
ರಿಫಾಯಿಯ್ಯ ಯೂತ್‌ಫೆಡರೇಶನ್ ಮತ್ತು ಹಳೆ ವಿದ್ಯಾರ್ಥಿ ಸಂಘದ ಕಾರ್ಯಕರ್ತರು ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಕೂಡುರಸ್ತೆ ಖತೀಬ್ ಯಾಕೂಬ್ ದಾರಿಮಿ ಕೂಡುರಸ್ತೆ ಸ್ವಾಗತಿಸಿ ವಂದಿಸಿದರು.