ಅದೊಂದು ಹಲವು ದಾರಿಗಳು ಸೇರುವ ಮಾರ್ಗ. ಅಲ್ಲಿ ಒಂದು ಬೆಕ್ಕು ಇನ್ನೊಂದು ಬೆಕ್ಕನ್ನು ಭೇಟಿ ಆಗುತ್ತದೆ. ದೊಡ್ಡ ಬೆಕ್ಕನ್ನು ನೋಡಿ ಚಿಕ್ಕ ಬೆಕ್ಕು ಎದುರಿರುವ ದಾರಿ ತೋರಿಸಿ, ಈ ದಾರಿ ಎಲ್ಲಿಗೆ ಹೋಗುತ್ತದೆ? ನಾನು ಈ ದಾರಿಯಲ್ಲಿ ಹೋಗಬಹುದಾ? ಎಂದು ಕೇಳುತ್ತದೆ. ಅದಕ್ಕೆ ಆ ಬೆಕ್ಕು, ನೀನು ಎಲ್ಲಿಗೆ ಹೋಗಬೇಕು? ಎಂದು ಕೇಳುತ್ತದೆ. ಆಗ ಚಿಕ್ಕ ಬೆಕ್ಕು, ನನಗೆ ಎಲ್ಲಿಗೆ ಹೊಗಬೇಕೆಂದು ಗೊತ್ತಿಲ್ಲ ಎನ್ನುತ್ತದೆ. ಆಗ ದೊಡ್ಡ ಬೆಕ್ಕು, ನಿನಗೆ ಎಲ್ಲಿಗೆ ಹೋಗಬೇಕೆಂದು ಗೊತ್ತಿರದಿದ್ದರೆ, ನೀನು ಯಾವ ಹಾದಿಯಲ್ಲಿ ಬೇಕಾದರೂ ಹೋಗಬಹುದು. ಆಗ ನಿನಗೆ ಯಾವ ದಾರಿ ಅದರೂ ಆಗಬಹುದು. ರಸ್ತೆ ಹೋದಲ್ಲಿ ಹೋಗಬಹುದು ಎಂದು ಉತ್ತರಿಸುತ್ತದೆ.
ಇದು ಕೇವಲ ಚಿಕ್ಕ ಬೆಕ್ಕಿಗೆ ಅನ್ವಯಿಸುವ ಮಾತಲ್ಲ. ನಮಗೆಲ್ಲರಿಗೂ ಅನ್ವಯಿಸುವ ಮಾತು ಇದು. ನಾವು ಮಾಡುವ ಹೂಡಿಕೆಯ ಬಗೆಗೆ ಸರಿಯಾದ ಅರಿವು ಇರದಿದ್ದರೆ ಯಾವ ಹೂಡಿಕೆ ಮಾಡಿದರೇನು? ಬಿಟ್ಟರೇನು? ಬಹುತೇಕರು ಹೀಗೇ ಇರುತ್ತಾರೆ. ದುಡ್ಡು ಮಾಡಬೇಕು ಎಂದು ಬಾಯಿಯಲ್ಲಿ ಹೇಳುತ್ತಾರೆ. ಆದರೆ ಅವರು ಕಡೆಗೂ ದುಡ್ಡು ಮಾಡುವುದೇ ಇಲ್ಲ. ಬದಲಿಗೆ ದುಡ್ಡು ಕಳೆದುಕೊಳ್ಳುತ್ತಾರೆ. ಲಾಭ ಮಾಡುವ ಆಸೆ ಎಲ್ಲರಿಗೂ ಇರುತ್ತದೆ. ಆದರೆ ಹೆಚ್ಚಿನವರು ನಷ್ಟ ಹೊಂದುತ್ತಾರೆ. ಯಾಕೆ ಹೀಗೆ?
ಯಾಕೆ ನಷ್ಠ ಆಗುತ್ತಿದೆ ಎನ್ನುವುದು ಗೊತ್ತಾದ ತಕ್ಷಣವೇ ಲಾಭದ ಹಾದಿ ಸಿಗುತ್ತದೆ. ಯಾಕೆ ಸೋತೆ ಎನ್ನುವುದು ಅರಿವಾದರೆ, ಗೆಲ್ಲುವುದು ಬಹಳ ಸುಲಭ. ಸೋತಾಗ ನಾವು ಸಮರ್ಥನೆ ಮಾಡಿಕೊಳ್ಳುತ್ತೇವೆ. ನಷ್ಟ ಆದಾಗಲೂ ಅದೃಷ್ಟವನ್ನು ಹಳಿಯುತ್ತೇವೆ. ನಾವು ಮಾಡುತ್ತಿರುವ ಕೆಲಸ ಹಾಗೂ ಹೂಡಿಕೆಯ ಕುರಿತು ನಮಗೇ ಸ್ಪಷ್ಟತೆ ಇರದಿದ್ದರೆ ನಷ್ಟ ಎನ್ನುವುದು ಹೊಸತಲ್ಲ. ಲಾಭ ಒಂದು ಮ್ಯಾಜಿಕ್ ಅಲ್ಲವೇ ಅಲ್ಲ.
ಎಷ್ಟೋ ಮಂದಿಗೆ, ಯಾವುದು ಹೂಡಿಕೆ, ಯಾವುದು ಹೂಡಿಕೆ ಅಲ್ಲ ಎನ್ನುವುದೂ ಗೊತ್ತಿರುವುದಿಲ್ಲ. ಒಬ್ಬರ ಮನೆಗೆ ಹೋದಾಗ ಅವರು ಮೂರು ವರ್ಷದ ಮಗುವಿನ ಹೆಸರಿನಲ್ಲಿ ಇನ್ಶೂರೆನ್ಸ್ ಮಾಡಿಸಿದೀವಿ ಅಂದರು. ಅಷ್ಟು ಚಿಕ್ಕ ಮಗುವಿಗೆ ಜೀವ ವಿಮೆಯ ಅಗತ್ಯ ಇಲ್ಲ. ವಿಮೆ ಹೂಡಿಕೆ ಅಲ್ಲ. ಈಗ ಬೇರೆ ಬೇರೆ ಯೋಜನೆಗಳನ್ನು ಒಟ್ಟಿಗೆ ಸೇರಿಸಿಕೊಡಲಾಗುತ್ತಿದೆ. ಯಾವುದು ಹೂಡಿಕೆ, ಯಾವುದು ಭದ್ರತೆ ಎನ್ನುವುದು ನಮಗೆ ಗೊತ್ತಿರದಿದ್ದರೆ ನಾವು ಮುಂದೆ ಹೀಗೆಲ್ಲ ಆಗಬಹುದೇನೋ, ಮುಂದೊಂದು ದಿನ ಇಷ್ಟು ಹಣ ಸಿಗಬಹುದೇನೋ ಎಂದು ಭಾವಿಸಿರುತ್ತೇವೆ. ಊಹಿಸಿರುತ್ತೇವೆ.
ದುಡಿಯುವ ವಯಸಿನಲ್ಲಿ ಭದ್ರತೆಗಾಗಿ ಜೀವ ವಿಮೆ ಬೇಕು. ಬೆಳೆಯುವ ವಯಸಿನಲ್ಲಿ ಉಳಿಸಿದ ಹಣ ಅಧಿಕವಾಗಲು ಹೂಡಿಕೆ ಬೇಕು. ಇಳಿ ವಯಸಿನಲ್ಲಿ ವೈದ್ಯಕೀಯ ವೆಚ್ಚ ಭರಿಸಲು ಆರೋಗ್ಯ ವಿಮೆ ಬೇಕು. ಹೀಗೆ ಬೇರೆ ಬೇರೆ ವಯೋಮಾನದ ಅಗತ್ಯಗಳಿಗೆ ಅನುಗುಣವಾದ ಹೂಡಿಕೆಯ ಆಯ್ಕೆಗೆ ಅವಕಾಶ ಇದೆ. ಸಂದೇಹಗಳನ್ನು ಕೇಳಿದರೆ ನಮಗೆ ತಿಳುವಳಿಕೆ ಮೂಡುತ್ತದೆ. ಕೇಳದಿದ್ದರೆ ಅರಿಯದೇ ಉಳಿದುಬಿಡುತ್ತೇವೆ.
– ಆರ್ಕಿಟೆಕ್ಟ್ ಕೆ. ಜಯರಾಮ್