Advertisement

ಪ್ರವಾಹ ನಿಂತ ಮೇಲೆ ಸಂತ್ರಸ್ತರ ಬದುಕೇ ಕಷ್ಟ

10:15 AM Aug 14, 2019 | Team Udayavani |

ಮಹಾಲಿಂಗಪುರ: ಕಳೆದ 15 ದಿನಗಳಿಂದ ನಿರಂತರವಾಗಿ ಏರಿಕೆ ಕಂಡಿದ್ದ ಘಟಪ್ರಭಾ ನದಿ ಪ್ರವಾಹ ಕಳೆದ ಎರಡು ದಿನಗಳಿಂದ ಇಳಿಮುಖವಾಗುತ್ತಿದೆ. ಆದರೆ, ಪ್ರವಾಹದಿಂದ ಸಂತ್ರಸ್ತರಾದವರಿಗೆ ಬದುಕು ಕಟ್ಟಿಕೊಳ್ಳಲು ಸಂಕಷ್ಟಗಳ ಸರಮಾಲೆ ಎದುರಾಗಲಿದೆ.

Advertisement

ಪರಿಹಾರ ಕೇಂದ್ರದಲ್ಲಿ ಸಂತ್ರಸ್ತರು: ನದಿಯ ಇಕ್ಕೆಲಗಳಲ್ಲಿನ ಸುಮಾರು 1ರಿಂದ 3 ಕಿ.ಮೀ.ಅಂತರದಲ್ಲಿನ ನೂರಾರು ಹಳ್ಳಿಗಳು ಜಲಾವೃತವಾಗಿವೆ. ಸಂತ್ರಸ್ತ ಹಳ್ಳಿಗಳ ಜನತೆ ಪರಿಹಾರ ಕೇಂದ್ರದಲ್ಲಿ ವಾಸವಾಗಿದ್ದಾರೆ.

ಮಣ್ಣಿನ ಮನೆಗಳು ಧರೆಗೆ: ಜಲಾವೃತವಾಗಿರುವ ನಂದಗಾಂವ, ಢವಳೇಶ್ವರ, ಮಿರ್ಜಿ, ಮಳಲಿ, ಚನ್ನಾಳ ಗ್ರಾಮಗಳಲ್ಲಿನ ಮಣ್ಣಿನ ಮನೆ ಮನೆಗಳು ಬಹುತೇಕ ಬಿದ್ದಿವೆ. ಇದರಿಂದಾಗಿ ಆ ಮನೆಯ ಸಂತ್ರಸ್ತರ ಪರಿಸ್ಥಿತಿ ಅಯೋಮಯವಾಗಿದೆ.

ಜಾನುವಾರುಗಳಿಗೆ ಮೇವಿನ ಸಮಸ್ಯೆ: ಸಂತ್ರಸ್ತರಿಗಾಗಿ ಸರಕಾರ ಮತ್ತು ದಾನಿಗಳಿಂದ ಮೇವು ವಿತರಿಸುತ್ತಿದ್ದರೂ ಜಾನುವಾರುಗಳಿಗೆ ಬೇಕಾದಷ್ಟು ಮೇವು ಸಿಗದೇ ಜನರು ಪರದಾಡುತ್ತಿದ್ದಾರೆ. ಹೈನುಗಾರಿಕೆ ಮೇಲೆ ಅವಲಂಬಿತರಾದ ಕುಟುಂಬಗಳು ಮೇವಿನ ಕೊರತೆಯಿಂದಾಗಿ ಹಾಲಿನ ಉತ್ಪಾದನೆ ಕಡಿಮೆಯಾಗಿ ಆರ್ಥಿಕ ಮುಂಗ್ಗಟ್ಟು ಅನುಭವಿಸುವಂತಾಗಿದೆ.

ವಾರದ ಸಾಲದ ಸಮಸ್ಯೆ: ಬಹುತೇಕ ಗ್ರಾಮೀಣ ಭಾಗದ ಮಹಿಳೆಯರು ಹೈನುಗಾರಿಕೆ, ಕೂಲಿ ಕೆಲಸ ನಂಬಿ, ಧರ್ಮಸ್ಥಳ ಸ್ವಸಹಾಯ ಸಂಘ, ರಬಕವಿ-ಬನಹಟ್ಟಿ, ಮಹಾಲಿಂಗಪುರ, ಮುಧೋಳ ಸೇರಿದಂತೆ ವಿವಿಧ ಬ್ಯಾಂಕ್‌ಗಳಲ್ಲಿ ಮಾಡಿದ ಸಾಲವನ್ನು ಕಂತುಗಳಲ್ಲಿ ಪಾವತಿಸುತ್ತಾರೆ. ಆದರೆ ಪ್ರವಾಹ ಬಂದು ಸಂತ್ರಸ್ತರಾಗಿರುವುದರಿಂದ ವಾರದ ಸಾಲ ತುಂಬುವುದು ಕಷ್ಟವಾಗಿ ಮತ್ತೇ ಸಾಲ ಮಾಡುವಂತಹ ಪರಿಸ್ಥಿತಿ ಎದುರಾಗಿದೆ.

Advertisement

ರೋಗ-ರುಜಿನಗಳ ಭಯ: ಪ್ರವಾಹ ಇಳಿಮುಖವಾಗಿ ಮನೆ ಖಾಲಿಯಾಗಿದೆ ಎಂದು ತಿಳಿದು ಹಳೆಯ ಮನೆಗೆ ಹೋಗಿ ವಾಸಿಸಲು ಸಾಧ್ಯವಿಲ್ಲ. ಮನೆಗೆ ಶೇಖರಣೆಗೊಂಡ ರಾಡಿ, ಗಲೀಜು ವಸ್ತುಗಳಿಂದ ಮುಚ್ಚಿರುವುದರಿಂದ, ಸ್ವಚ್ಛತೆ, ಸಂಸಾರದ ಸಾಮಾನು- ಸರಂಜಾಮು ಸುವ್ಯವಸ್ಥಿತವಾಗಿ ಹೊಂದಿಸಲು ವಾರಗಳ ಸಮಯವೇ ಬೇಕು. ಗ್ರಾಮಗಳೆಲ್ಲ ಗಬ್ಬೆದ್ದು ನಾರುತ್ತಿರುವುದರಿಂದಾಗಿ ಜ್ವರ, ಕೆಮ್ಮು, ಕಾಲರಾ, ಡೆಂಘೀಯಂತಹ ರೋಗಗಳು ದಾಂಗುಡಿಯಿಡುವ ಭಯ ಸಂತ್ರಸ್ತರಿಗೆ ಕಾಡುತ್ತಿದೆ.

ನಿತ್ಯ ನಾಲ್ಕಾರು ಜನರಿಗೆ ಅನ್ನ ಹಾಕುವ ಸಾಮರ್ಥ್ಯ ಹೊಂದಿದ್ದ ಗ್ರಾಮಸ್ಥರು, ಇಂದು ಪ್ರವಾಹ ಸಂತ್ರಸ್ತರಾಗಿ ಪರಿಹಾರ ಕೇಂದ್ರದಲ್ಲಿ ಊಟ ಮಾಡುವಂತಾಗಿದೆ. ಸರಕಾರ ಮತ್ತು ದಾನಿಗಳೇ ಸಹಾಯ ಸಹಕಾರ ನೀಡಿದರೂ ಅವರ ಬದುಕು, ಸಹಜ ಸ್ಥಿತಿಗೆ ಬರಲು ಕೆಲ ತಿಂಗಳುಗಳ ಸಮಯ ಬೇಕು.

ಪ್ರವಾಹ ಪೀಡಿತ ಗ್ರಾಮಗಳಾದ ನಂದಗಾಂವ, ಢವಳೇಶ್ವರ, ಮಾರಾಪುರ ಗ್ರಾಮಗಳಲ್ಲಿ 24×7 ಆರೋಗ್ಯ ಕೇಂದ್ರ ತೆರೆದು, ಜನರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಜಲಾವೃತಗೊಂಡ ಮನೆಗಳಲ್ಲಿ ನೀರು ಕಡಿಮೆಯಾಗಿದೆ ಎಂದು ಮನೆಗೆ ತೆರಳುವ ಮುನ್ನ ಮನೆಗಳನ್ನು ಸ್ವಚ್ಛಗೊಳಿಸಿ. ಕೆಲ ದಿನಗಳು ಕಳೆದ ನಂತರ ಅಲ್ಲಿಗೆ ಮರಳುವುದು ಉತ್ತಮ. ಸಂತ್ರಸ್ತರು ಕೆಲ ತಿಂಗಳುಗಳವರೆಗೆ ಆರೋಗ್ಯ ಜಾಗೃತಿ ವಹಿಸುವುದು ಮುಖ್ಯ.•ಸಿ.ಎಂ. ವಜ್ಜರಮಟ್ಟಿ, ಸಮುದಾಯ ಆರೋಗ್ಯ ಕೇಂದ್ರದ ಮುಖ್ಯ ವೈದ್ಯಾಧಿಕಾರಿ

ಜಲಾವೃತವಾಗಿರುವ ಢವಳೇಶ್ವರ ಗ್ರಾಮದಲ್ಲಿ ಪ್ರವಾಹದ ನೀರು ಎರಡು ದಿನಗಳಿಂದ ಇಳಿಮುಖವಾಗುತ್ತಿದೆ. ಇದರಿಂದಾಗಿ ಗ್ರಾಪಂನಿಂದ ರಸ್ತೆ ಮತ್ತು ಚರಂಡಿಗಳ ಸ್ವಚ್ಛತೆ, ಕ್ರಿಮಿನಾಶಕಗಳ ಸಿಂಪರಣೆ ಮತ್ತು ಪ್ರತಿನಿತ್ಯ ರಾತ್ರಿ ಪಾಗಿಂಗ್‌ ಮಶೀನ್‌ಗಳ ಮೂಲಕ ಕ್ರಿಮಿ ಕೀಟ ನಾಶ ಮಾಡಲು ಶ್ರಮಿಸುತ್ತಿದ್ದೇವೆ. ರಾತ್ರಿ ವೇಳೆ ಸಾರ್ವಜನಿಕರಿಗೆ ಅಲ್ಲಿ ಇರಲು ಅವಕಾಶ ನೀಡದೇ, ಗ್ರಾಮದ ಜನರ ಆರೋಗ್ಯ ರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳುತ್ತಿದ್ದೇವೆ.•ಬನಪ್ಪಗೌಡ ಪಾಟೀಲ, ಅಧ್ಯಕ್ಷರು ಢವಳೇಶ್ವರ ಗ್ರಾಪಂ.

 

•ಚಂದ್ರಶೇಖರ ಮೋರೆ

Advertisement

Udayavani is now on Telegram. Click here to join our channel and stay updated with the latest news.

Next