Advertisement

ಪ್ರಶ್ನೆಗಳನ್ನು ಓದಿಕೊಳ್ಳುವ 15 ನಿಮಿಷವೇ ನಿರ್ಣಾಯಕ

07:30 AM Feb 28, 2018 | |

ಬೆಂಗಳೂರು: ಪರೀಕ್ಷೆಗೆ ಎಲ್ಲಾ ಸಿದ್ಧತೆ ನಡೆಸಿದರೂ ಪ್ರಶ್ನೆಪತ್ರಿಕೆ ಕೈಗೆ ಸಿಕ್ಕಿದ ಕೂಡಲೇ ಆತಂಕ ಕಾಣಿಸಿಕೊಳ್ಳುತ್ತದೆ. ಯಾವ ಪ್ರಶ್ನೆಗೆ ಮೊದಲು ಉತ್ತರಿಸಬೇಕು ಎಂದು ಯೋಚಿಸಿ ಗೊಂದಲಕ್ಕೊಳಗಾಗಿ ಉತ್ತರ ಗೊತ್ತಿದ್ದರೂ ಬರೆಯಲು ಪರದಾಡುತ್ತಾರೆ. ಇದು ಅಂತಿಮವಾಗಿ ಅಂಕದ ಮೇಲೆ ಪ್ರಭಾವ ಬೀರುತ್ತದೆ.

Advertisement

ದ್ವಿತೀಯ ಪಿಯುಸಿ ಪರೀಕ್ಷೆ ಬರೆಯುವ ಪ್ರತಿ ವಿದ್ಯಾರ್ಥಿಯೂ ಇದನ್ನು ಗಮನದಲ್ಲಿಟ್ಟುಕೊಂಡು, ಪರೀಕ್ಷಾ ಕೇಂದ್ರದೊಳಗೆ ಒತ್ತಡ,
ಗೊಂದಲಕ್ಕೊಳಗಾಗದೇ ಮೊದಲ 15 ನಿಮಿಷ ತಾಳ್ಮೆಯಿಂದ ಎಲ್ಲಾ ಪ್ರಶ್ನೆಗಳನ್ನು ಓದಿ, ಅರ್ಥೈಸಿಕೊಂಡ ನಂತರ ಉತ್ತರಿಸಬೇಕು. ಹೀಗೆ ಮಾಡುವುದರಿಂದ ನಿರ್ದಿಷ್ಟ ಸಮಯದಲ್ಲಿ ಬಹುತೇಕ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಲು ಸಾಧ್ಯವಿದೆ ಎಂದು ಪಿಯು ಇಲಾಖೆ
ನಿರ್ದೇಶಕಿ ಸಿ.ಶಿಖಾ ದ್ವಿತೀಯ ಪಿಯುಸಿ ಪರೀಕ್ಷೆ ಬರೆಯಲಿರುವ ವಿದ್ಯಾರ್ಥಿಗಳಿಗೆ ಸಲಹೆ ನೀಡಿದ್ದಾರೆ. ಮಾ.1ರಿಂದ ನಡೆಯಲಿರುವ ದ್ವಿತೀಯ ಪಿಯು ಪರೀಕ್ಷೆ ಹಿನ್ನೆಲೆಯಲ್ಲಿ “ಉದಯವಾಣಿ’ಯೊಂದಿಗೆ ಮಾತನಾಡಿದ ಅವರು, ವಿದ್ಯಾರ್ಥಿಗಳ ಮೇಲೆ ಯಾವುದೇ ರೀತಿಯಲ್ಲೂ ಒತ್ತಡ ಹೇರದೇ  ನಿರ್ಭಯದಿಂದ ಪರೀಕ್ಷೆ ಬರೆಯಲು ಪೋಷಕರು ಪ್ರೇರೇಪಿಸಬೇಕು ಎಂದೂ ಪಾಲಕ, ಪೋಷಕರಿಗೆ ಕಿವಿ ಮಾತು ಹೇಳಿದರು.

ಮೊಬೈಲ್‌ನಿಂದ ದೂರವಿರಿ: ಪರೀಕ್ಷಾ ಸಂದರ್ಭದಲ್ಲಿ ಮಕ್ಕಳು ಮೊಬೈಲ್‌ ಬಳಕೆ ಮಾಡದಂತೆ ಎಚ್ಚರ ವಹಿಸಬೇಕು. ಇಲಾಖೆ ಮತ್ತು ಕಾಲೇಜುಗಳಿಂದ ನೀಡಿದ ಸೂಚನೆ ಹೊರತುಪಡಿಸಿ, ವಾಟ್ಸ್‌ಆ್ಯಪ್‌, ಫೇಸ್‌ಬುಕ್‌ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುವ ಸುಳ್ಳು ಸುದ್ದಿಗೆ ಗಮನ ನೀಡಬಾರದು. ಪ್ರಶ್ನೆ ಪತ್ರಿಕೆ ನಕಲು ಅಥವಾ ಪರೀಕ್ಷಾ ವಿಚಾರವಾಗಿ ತಪ್ಪು ಮಾಹಿತಿ ನೀಡುವ ಸಂದೇಶಗಳು ಮೊಬೈಲ್‌ನಲ್ಲಿ ಕಂಡಬಂದ ತಕ್ಷಣವೇ ಸಮೀಪದ ಪೊಲೀಸ್‌ ಠಾಣೆಗೆ ಅಥವಾ ಇಲಾಖೆಗೆ ದೂರು ನೀಡಬೇಕು ಎಂದು ಹೇಳಿದರು.

ಪರೀಕ್ಷಾ ಕೇಂದ್ರದ ಒಳಗೆ ಪ್ರವೇಶಿಸಿದ ಎಲ್ಲಾ ವಿದ್ಯಾರ್ಥಿಗಳಿಗೂ ಪ್ರಶ್ನೆ ಪತ್ರಿಕೆ ನೀಡಿ, ಅದನ್ನು ಓದಿ ಅರ್ಥೈಸಿಕೊಳ್ಳಲು 15 ನಿಮಿಷದ ಕಾಲಾವಕಾಶ ಇರುತ್ತದೆ. ಈ ವೇಳೆಯನ್ನು ಸದುಪಯೋಗ ಮಾಡಿಕೊಳ್ಳಬೇಕು. 15 ನಿಮಿಷದಲ್ಲಿ ಎಲ್ಲಾ ಪ್ರಶ್ನೆಯನ್ನು ಚೆನ್ನಾಗಿ ಓದಿ, ಅರ್ಥಮಾಡಿಕೊಂಡು, ಯಾವ ಪ್ರಶ್ನೆಗೆ ಮೊದಲು ಉತ್ತರ ಬರೆಯಬೇಕು ಎಂಬುದನ್ನು ನಿರ್ಧರಿಸಿಕೊಂಡರೆ ಗೊಂದಲ, ಒತ್ತಡ
ಇರುವುದಿಲ್ಲ.

1004 ಕೇಂದ್ರದಲ್ಲಿ ಪರೀಕ್ಷೆ ನಡೆಯಲಿದೆ. ನಿರ್ಭಯದಿಂದ ಪರೀಕ್ಷೆ ಬರೆಯಲು ಬೇಕಾದ ಎಲ್ಲಾ ರೀತಿಯ ಕ್ರಮ ತೆಗೆದುಕೊಂಡಿದ್ದೇವೆ.  ಪ್ರಶ್ನೆ ಪತ್ರಿಕೆ ಸರಬರಾಜು ಮಾಡುವ ವಾಹನಗಳ ಮೇಲೆ ನಿಗಾ, ಪರೀಕ್ಷಾ ಕೇಂದ್ರದಲ್ಲಿ ಸಿಸಿಟಿವಿ, ಕೊಠಡಿ ಮೇಲ್ವಿಚಾರಕರ ಮೊಬೈಲ್‌ ನಿಷೇಧ ಸೇರಿದಂತೆ ಕರ್ನಾಟಕ ಸೆಕ್ಯೂರ್‌ ಎಕ್ಸಾಮಿನೇಷನ್‌ ವ್ಯವಸ್ಥೆಯನ್ನು ಇನ್ನಷ್ಟು ಬಲಿಷ್ಠಗೊಳಿಸಿದ್ದೇವೆ. ವಿದ್ಯಾರ್ಥಿಗಳು  ಪರೀಕ್ಷೆಯ ಮೊದಲ ದಿನ ತಮ್ಮ ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿ, ತಮ್ಮ ಸ್ಥಳ ಎಲ್ಲಿದೆ ಎಂಬುದನ್ನು
ಖಚಿತಪಡಿಸಿಕೊಳ್ಳುವುದು ಉತ್ತಮ. ಪರೀಕ್ಷೆಯ ದಿನ ಕನಿಷ್ಠ 30 ನಿಮಿಷ ಮುಂಚಿತವಾಗಿಯೇ ಕೇಂದ್ರದಲ್ಲಿ ಹಾಜರಿರಬೇಕು ಎಂದು ಸೂಚನೆ ನೀಡಿದ್ದಾರೆ.

Advertisement

ಪಿಯು ವಿದ್ಯಾರ್ಥಿಗಳಿಗೆ ಸಹಾಯವಾಣಿ
ಬೆಂಗಳೂರು: ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಪದವಿಪೂರ್ವ ಇಲಾಖೆಯ ಕೇಂದ್ರ ಕಚೇರಿಯಲ್ಲಿ ಸಹಾಯವಾಣಿ ಕೇಂದ್ರ ತೆರೆಯಲಾಗಿದೆ. ಸಹಾಯವಾಣಿಯು ಬೆಳಗ್ಗೆ 8ರಿಂದ ರಾತ್ರಿ 8ರ ತನಕ ಕಾರ್ಯ ನಿರ್ವಹಿಸಲಿದೆ. 080-23083900ಗೆ ಕರೆ ಮಾಡಿ ಪರೀಕ್ಷೆ ಸಂಬಂಧಿಸಿದ ಮಾಹಿತಿ ಪಡೆಯಬಹುದಾಗಿದೆ. ದ್ವಿತೀಯ ಪಿಯುಸಿ ಪರೀಕ್ಷೆಯು  ಮಾ.1ರಿಂದ 17ರ ತನಕ ನಡೆಯಲಿದೆ. ಪರೀಕ್ಷಾ ಕೇಂದ್ರಕ್ಕೆ ವಿದ್ಯಾರ್ಥಿಗಳನ್ನು ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಉಚಿತವಾಗಿ ಕರೆದೊಯ್ಯಲಾಗುತ್ತದೆ. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಪರೀಕ್ಷಾ ಪ್ರವೇಶ ಪತ್ರವನ್ನು ಕಂಡಕ್ಟರ್‌ಗೆ ತೋರಿಸಬೇಕಾಗುತ್ತದೆ. ಕಲಾ ವಿಭಾಗದ 2,01,278, ವಾಣಿಜ್ಯ ವಿಭಾಗದ 2,56,479, ವಿಜ್ಞಾನ ವಿಭಾಗದ 2,32,393 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಲಿದ್ದಾರೆ. ಇದರಲ್ಲಿ 5,39,430 ಹೊಸ ವಿದ್ಯಾರ್ಥಿಗಳು, 1,22,346 ಪುನರಾವರ್ತಿತ ವಿದ್ಯಾರ್ಥಿಗಳು, 28,374 ಖಾಸಗಿ ವಿದ್ಯಾರ್ಥಿಗಳು
ಸೇರಿಕೊಂಡಿದ್ದಾರೆ. ಪರೀಕ್ಷೆಗಳನ್ನು ವ್ಯವಸ್ಥಿತವಾಗಿ ನಡೆಸಲು 286 ತಾಲೂಕು ಮಟ್ಟದ ಮತ್ತು 32 ಜಿಲ್ಲಾ ಮಟ್ಟದ ಜಾಗೃತ ದಳ ರಚನೆ ಮಾಡಲಾಗಿದೆ. ಅವಶ್ಯ ಪರೀಕ್ಷಾ ಕೇಂದ್ರಗಳಿಗೆ 300 ಗೃಹರಕ್ಷಕ ದಳದ ಸೇವೆ ಪಡೆಯಲಾಗುತ್ತಿದೆ ಎಂದು ಇಲಾಖೆಯ ನಿರ್ದೇಶಕಿ ಸಿ.ಶಿಖಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿದ್ಯಾರ್ಥಿಗಳು ತಾವು ಅಭ್ಯಾಸ ಮಾಡಿರುವ ಕಾಲೇಜಿನಲ್ಲಿ ಪರೀಕ್ಷೆ ಕೇಂದ್ರ ಇರುವುದಿಲ್ಲ. ತಾಲೂಕಿಗೆ ಏಕೈಕ ಪರೀಕ್ಷಾ ಕೇಂದ್ರ
ಇದ್ದಲ್ಲಿ ಅಥವಾ ಭೌಗೋಳಿಕ ಕಾರಣಗಳಿಂದಾಗಿ ಅಳವಡಿಕೆ ಸಾಧ್ಯವಾಗದ 243 ಪರೀಕ್ಷಾ ಕೇಂದ್ರಗಳಿಗೆ ಬಾಹ್ಯ ಪರೀಕ್ಷಕರನ್ನು ನೇಮಿಸಿ ಪರೀಕ್ಷೆ ನಡೆಸಲಾಗುತ್ತದೆ. ಎಲ್ಲಾ ಪರೀಕ್ಷಾ ಕೇಂದ್ರಗಳಿಗೆ ಸಿಸಿಟಿವಿ ಅಳವಡಿಸಲಾಗಿದೆ ಮತ್ತು ಪ್ರಶ್ನೆ ಪತ್ರಿಕೆಯನ್ನು
ಪರೀಕ್ಷಾ ಕೇಂದ್ರಕ್ಕೆ ಕೊಂಡೊಯ್ಯುವ ವಾಹನಕ್ಕೆ ಜಿಪಿಎಸ್‌ ಅಳವಡಿಸಲಾಗಿದೆ. ಈ ವಾಹನಗಳ ವಿತರಣಾ ಮಾರ್ಗದ ನೈಜ ಸ್ಥಿತಿಯ ನೇರ ಪ್ರಸಾರವನ್ನು ಜಿಲ್ಲಾ ಮಟ್ಟದಲ್ಲಿ ವಿಶ್ಲೇಷಿಸಲಾಗುತ್ತದೆ.

ರಾಜು ಖಾರ್ವಿ ಕೊಡೇರಿ

Advertisement

Udayavani is now on Telegram. Click here to join our channel and stay updated with the latest news.

Next