Advertisement

ಬೊಮ್ಮಾಯಿ ನಾಯಕತ್ವದ ಮೇಲೆ ನಂಬಿಕೆ ಇಲ್ಲವಾಗಿದೆ ಎಂಬುದು ಸ್ಪಷ್ಟವಾಗಿದೆ : ಡಿಕೆಶಿ

10:55 PM Mar 22, 2023 | Team Udayavani |

ಬೆಂಗಳೂರು : ಬಿಜೆಪಿಗೆ ಬೊಮ್ಮಾಯಿ ನಾಯಕತ್ವದ ಮೇಲೆ ನಂಬಿಕೆ ಇಲ್ಲವಾಗಿದೆ ಎಂಬುದು ಸ್ಪಷ್ಟವಾಗಿದೆ ಎಂದು ಬುಧವಾರ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

Advertisement

ಸದಾಶಿವನಗರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೊಮ್ಮಾಯಿ ಅವರು ಮತ್ತೆ ತಾವೇ ಸಿಎಂ ಆಗುತ್ತೇನೆ ಎಂದಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿ‘ಅಮಿತ್ ಶಾ ಆರಂಭದಲ್ಲಿ ಬೊಮ್ಮಾಯಿ ಅವರ ನಾಯಕತ್ವದಲ್ಲಿ ಚುನಾವಣೆ ಎದುರಿಸಲಾಗುವುದು ಎಂದು ಹೇಳಿದ್ದರು. ನಂತರ ಮೋದಿ ಮುಖ ನೋಡಿ ಮತ ನೀಡಿ ಎಂದಿದ್ದಾರೆ. ಅಲ್ಲಿಗೆ ಬೊಮ್ಮಾಯಿ ನಾಯಕತ್ವದ ಮೇಲೆ ನಂಬಿಕೆ ಇಲ್ಲವಾಗಿದೆ ಎಂಬುದು ಸ್ಪಷ್ಟವಾಗಿದೆ ಎಂದರು.

ಬೊಮ್ಮಾಯಿ ಅವರು ಅವರು ನಮ್ಮ ಗ್ಯಾರಂಟಿ ಕಾರ್ಡನ್ನು ಬೋಗಸ್ ಕಾರ್ಡ್ ಎಂದಿದ್ದಾರೆ. ನಾನು ಕೆಲ ದಿನಗಳಲ್ಲಿ ಅವರ ಪ್ರಣಾಳಿಕೆ ಮುಂದಿಟ್ಟು ಯಾರದ್ದು ಬೋಗಸ್ ಎಂದು ಹೇಳುತ್ತೇನೆ. ನಾನು ಅವರ ಜತೆ ಚರ್ಚೆ ಮಾಡಲು ಸಿದ್ಧ. ನಮ್ಮ ಸ್ಥಾನಮಾನಕ್ಕೆ ತಕ್ಕಂತ ಯಾವುದೇ ನಾಯಕರು ಮುಂದೆ ಬಂದರೆ ಯಾವುದೇ ವೇದಿಕೆಯಲ್ಲಿ ಚರ್ಚೆ ಮಾಡಲು ಸಿದ್ಧ. ನಾವು ಬಸವಣ್ಣ, ಶಿಶುನಾಳ ಶರೀಫರ ನಾಡಿನಿಂದ ಬಂದಿದ್ದು, ಕೊಟ್ಟ ಮಾತಿನಂತೆ ನಡೆಯುತ್ತೇವೆ. ನಾವು ಘೋಷಿಸಿರುವ ಕಾರ್ಯಕ್ರಮಗಳನ್ನು ಜಾರಿ ಮಾಡಿಯೇ ತೀರುತ್ತೇವೆ ಎಂದರು.

ನಾವು ಮುಂದಿನ ದಿನಗಳಲ್ಲಿ ಸಂಸತ್ ಚುನಾವಣೆ ಎದುರಿಸಲಿದ್ದು, ಈ ಯೋಜನೆಗಳನ್ನು ಹೇಗೆ ಜಾರಿ ಮಾಡಬಹುದು ಎಂದು ತಿಂಗಳು ಗಟ್ಟಲೆ ಚರ್ಚೆ ಮಾಡಿದ್ದೇವೆ. ನಾವು ಬಿಜೆಪಿಯವರಂತೆ ಜನರ ಖಾತೆಗೆ 15 ಲಕ್ಷ ಹಾಕುತ್ತೇವೆ ಎಂದು ಹೇಳಿ ಮತ ಪಡೆದು ಮೋಸ ಮಾಡುವುದಿಲ್ಲ. ನಾವು ಮಾತು ಕೊಟ್ಟರೆ ಅದನ್ನು ಉಳಿಸಿಕೊಳ್ಳುತ್ತೇವೆ’ ಎಂದರು.

ಸಿದ್ದರಾಮಯ್ಯ ಅವರನ್ನು ಸೋಲಿಸಲು ಷಡ್ಯಂತ್ರ ನಡೆಯುತ್ತಿದೆ ಎಂಬ ಕುಮಾರಸ್ವಾಮಿ ಹೇಳಿಕೆ ಬಗ್ಗೆ ಕೇಳಿದಾಗ, ‘ಸಿದ್ದರಾಮಯ್ಯ ಅವರ ಬಗ್ಗೆ ಕುಮಾರಸ್ವಾಮಿ ಅವರು ಪ್ರೀತಿ ತೋರುವ ಅಗತ್ಯವಿಲ್ಲ. ಸಿದ್ದರಾಮಯ್ಯ ಅವರು ಕೋಲಾರದಲ್ಲಿ ಸ್ಪರ್ಧಿಸುವುದಾಗಿ ಹೇಳಿದಾಗ ಕುಮಾರಸ್ವಾಮಿ ಏನೆಲ್ಲಾ ಮಾತನಾಡಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿದೆ. ಸಿದ್ದರಾಮಯ್ಯ ಅವರು ನಮ್ಮ ಶಾಸಕಾಂಗ ಪಕ್ಷದ ನಾಯಕರು. ಅವರು ತಮ್ಮನ್ನು ಗೆಲ್ಲಿಸಿದ ಜನರ ಋಣ ತೀರಿಸಬೇಕು ಎಂದು ಬಾದಾಮಿ ಕ್ಷೇತ್ರದಲ್ಲಿ ಹೆಚ್ಚಿನ ಅಬಿವೃದ್ಧಿ ಮಾಡಿ ಕ್ಷೇತ್ರದ ಚಿತ್ರಣ ಬದಲಿಸಿದ್ದಾರೆ. ಮೈಸೂರಿನಲ್ಲಿ ಅವರದೇ ಆದ ಕೊಡುಗೆ ಇದೆ. ಅವರು ಹೈಕಮಾಂಡ್ ಒಪ್ಪಿದರೆ ಕೋಲಾರದಿಂದ ಸ್ಪರ್ಧಿಸುವುದಾಗಿ ಹೇಳಿದ್ದಾರೆ. ಹೈಕಮಾಂಡ್ ಕೂಡ ನನಗೆ ಮತ್ತು ಅವರಿಗೆ ರಾಜ್ಯ ಪ್ರವಾಸದ ಜವಾಬ್ದಾರಿ ನೀಡಿದ್ದು, ಹೆಚ್ಚು ಸಮಯ ವ್ಯರ್ಥ ಮಾಡುವುದು ಬೇಡ ಎಂದು ಹೇಳಿದ್ದಾರೆ. ನನಗೂ ಕೆಲವು ಕ್ಷೇತ್ರಗಳಲ್ಲಿ ಆಹ್ವಾನ ಇದೆ. ಆದರೆ ನಾನು ನನ್ನ ಕ್ಷೇತ್ರದಲ್ಲೇ ಸ್ಪರ್ಧಿಸುತ್ತೇನೆ. ಸಿದ್ದರಾಮಯ್ಯ ಅವರು ಎಲ್ಲಿ ಸ್ಪರ್ಧಿಸಬೇಕು ಎಂಬ ತೀರ್ಮಾನವನ್ನು ಅವರಿಗೆ ಬಿಡಲಾಗಿದೆ. ಹೈಕಮಾಂಡ್ ಕೂಡ ಅವರ ಮೇಲೆ ಯಾವುದೇ ಒತ್ತಡ ಹೇರುವುದಿಲ್ಲ, ನಾನು ಕೂಡ ಹೇರುವುದಿಲ್ಲ. ಅವರು ಎಲ್ಲಿ ಸ್ಪರ್ಧಿಸುತ್ತಾರೋ ನಾನು ಅಲ್ಲಿ ಅವರ ಬೆಂಬಲವಾಗಿ ನಿಲ್ಲುತ್ತೇನೆ’ ಎಂದು ಸ್ಪಷ್ಟಪಡಿಸಿದರು.

Advertisement

ಕಾಂಗ್ರೆಸ್ ಗ್ಯಾರಂಟಿ ಯೋಜನೆ ರಾಜ್ಯವನ್ನು ಸಾಲದ ಕೂಪಕ್ಕೆ ಕೊಂಡೊಯ್ಯುತ್ತಿದೆ ಎಂಬ ಬಿಜೆಪಿ ಟೀಕೆ ಬಗ್ಗೆ ಕೇಳಿದಾಗ, ‘ನೀವು ಬಿಜೆಪಿಯ ಪ್ರಣಾಳಿಕೆ ತೆಗೆದು ನೋಡಿ. ಜ.16ರಂದು ಅವರು ಸರ್ಕಾರದ ವತಿಯಿಂದ ಜಾಹೀರಾತು ನೀಡಿ ಏನು ಹೇಳಿದ್ದಾರೆ. ಪ್ರಣಾಳಿಕೆಯಲ್ಲಿ ರೈತರಿಗೆ 10 ಗಂಟೆ ವಿದ್ಯುತ್ ನೀಡುವುದಾಗಿ ಯಾಕೆ ಹೇಳಿದ್ದಾರೆ? ಇನ್ನು ಸಾಲ ಮನ್ನಾ ವಿಚಾರವಾಗಿ ಹೇಗೆ ಭರವಸೆ ನೀಡಿದ್ದರು? ಈ ಬಗ್ಗೆ ಅವರು ಮೊದಲು ಉತ್ತರ ನೀಡಲಿ’ ಎಂದರು.

ವೈಎಸ್ ವಿ ದತ್ತಾ ಅವರ ಆಡಿಯೋ ಕುರಿತು ಕೇಳಿದಾಗ, ‘ರಾಜಕೀಯದಲ್ಲಿ ಹೂವಿನ ಹಾರ ಹಾಕುವವರೂ ಇರುತ್ತಾರೆ. ಕಲ್ಲು ಹೊಡೆಯುವವರೂ ಇರುತ್ತಾರೆ. ನಾವು ಎಲ್ಲರ ಸಲಹೆ, ಅಭಿಪ್ರಾಯವನ್ನು ಸ್ವೀಕಾರ ಮಾಡುತ್ತೇವೆ. ಅವರು ಹಿರಿಯರಿದ್ದಾರೆ. ಅವರನ್ನು ಮೇಸ್ಟ್ರು ಎಂದು ಸ್ವೀಕಾರ ಮಾಡಿದ್ದೇವೆ. ಅವರ ಮಾತನ್ನು ನಾವು ಆಶೀರ್ವಾದ ಎಂದು ಸ್ವೀಕರಿಸಿ ಅವರ ಜತೆ ಕೆಲಸ ಮಾಡುತ್ತೇವೆ’ ಎಂದರು.

ಪಕ್ಷದಲ್ಲಿ ಟಿಕೆಟ್ ವಿಚಾರವಾಗಿ ಮೂಲ ಕಾಂಗ್ರೆಸಿಗರು ಹಾಗೂ ವಲಸಿಗರ ನಡುವಣ ಸಂಘರ್ಷದ ಬಗ್ಗೆ ಕೇಳಿದಾಗ, ‘ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂಬ ಭಾವನೆ ಎಲ್ಲರಿಗೂ ಬಂದಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ಕಾಂಗ್ರೆಸ್ ಹಾಗೂ ದಳದವರಿಗೂ ಗೊತ್ತಿದೆ. ಹೀಗಾಗಿ ಟಿಕೆಟ್ ಆಕಾಂಕ್ಷಿಗಳು ಹೆಚ್ಚಾಗಿದ್ದಾರೆ. ಇನ್ನು ಅರ್ಜಿ ಹಾಕುವವರು ಇದ್ದಾರೆ. ಚಿಂಚನಸೂರು ಅವರು ಕೂಡ ಅರ್ಜಿ ಹಾಕಬೇಕಿದೆ. ಯಾರು ಕ್ಷೇತ್ರದಲ್ಲಿ ಸಮರ್ಪಕವಾಗಿ ಕೆಲಸ ಮಾಡುತ್ತಾರೆ ಅವರಿಗೆ ಅನೇಕ ಅವಕಾಶಗಳಿವೆ. 75 ಪರಿಷತ್, 12 ರಾಜ್ಯಸಭಾ, ಲೋಕಸಭಾ ಹಾಗೂ ನಿಗಮ ಮಂಡಳಿಗಳಿವೆ. ಎಲ್ಲರಿಗೂ ಅಧಿಕಾರವನ್ನು ಹಂಚುತ್ತೇವೆ’ ಎಂದರು.

ಟಿಕೆಟ್ ಯಾವಾಗ ಎಂದು ಕೇಳಿದಾಗ, ‘ಇಂದು ಪ್ರಕಟಿಸುವ ಉದ್ದೇಶವಿತ್ತು. ಆದರೆ ಹಬ್ಬದ ಆಚರಣೆ ಹಿನ್ನೆಲೆಯಿಂದ ನಾಳೆ ನಾಡಿದ್ದು ಪ್ರಕಟಿಸುತ್ತೇವೆ’ ಎಂದು ತಿಳಿಸಿದರು.

ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ಡಿ.ಕೆ.ಶಿವಕುಮಾರ್ ಅವರು ನಿವಾಸದಲ್ಲಿ ಗೋ ಪೂಜೆ ನೆರವೇರಿಸಿದರು. ಹಿಂದೂ ಧರ್ಮದಲ್ಲಿ ಗೋ ಪೂಜೆ ಸರ್ವ ಶ್ರೇಷ್ಠವಾಗಿದ್ದು, ನಾಡಿಗೆ ಸಕಲ‌ ಸನ್ಮಂಗಳವಾಗಲಿ ಎಂದು ಗೋಮಾತೆಯನ್ನು ಪ್ರಾರ್ಥಿಸಿದೆ. ನವ ಸಂವತ್ಸರವು ಪ್ರತಿಯೊಬ್ಬರ ಬದುಕಿನಲ್ಲಿ ಖುಷಿ ಹಾಗೂ ಬೆಳಕನ್ನು ತರಲಿ ಎಂದು ಟ್ವೀಟ್ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next