ಯಲಬುರ್ಗಾ: ಕ್ಷೇತ್ರದ ಜನರ ಆಶೀರ್ವಾದದಿಂದ ಶಾಸಕನಾಗಿ, ಸಚಿವನಾಗಿ ತಾಲೂಕಿನ ಜೊತೆಗೆ ರಾಜ್ಯದ ಜನರ ಸೇವೆ ಮಾಡುವ ಅವಕಾಶ ಸಿಕ್ಕಿದೆ ಅದನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದೇನೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವ ಹಾಲಪ್ಪ ಆಚಾರ್ ಹೇಳಿದರು.
ಪಟ್ಟಣದ ತಾಪಂ ಕಚೇರಿ ಆವರಣದಲ್ಲಿ ಸೋಮವಾರ ತಾಪಂ ಹಾಗೂ ವಿವಿಧ ಇಲಾಖೆಗಳ ಅನುದಾನದಲ್ಲಿ ಸೌಲಭ್ಯಗಳ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕೋವಿಡ್ ಸಂದರ್ಭದಲ್ಲಿ ಪುರುಷರು ಮನೆ ಬಿಟ್ಟು ಬರಲು ಹೆದರಿದರು ಆದರೆ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು, ಆಶಾ ಕಾರ್ಯಕರ್ತೆಯರು ಜೀವದ ಹಂಗು ತೊರೆದು ಕೆಲಸ ಮಾಡಿರುವುದು ಶ್ಲಾಘನೀಯವಾಗಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಾಯಂದಿರ ಬಗ್ಗೆ ಅಪಾರ ಕಾಳಜಿ ಹೊಂದಿ ರಾಜ್ಯದ 7500 ಸ್ವಸಹಾಯ ಸಂಘಗಳಿಗೆ ಅನುದಾನ ನೀಡಿದ್ದಾರೆ. ಬರಪೀಡಿತ ಯಲಬುರ್ಗಾ ತಾಲೂಕಿಗೆ ನೀರಾವರಿ ಮಾಡುವ ಸಂಕಲ್ಪ ತೊಟ್ಟು ಈ ನಿಟ್ಟಿನಲ್ಲಿ ಕಾರ್ಯ ಮಾಡುತ್ತಿದ್ದೇನೆ. ಶೀಘ್ರದಲ್ಲಿ ಏತ ನೀರಾವರಿ ಯೋಜನೆಯಡಿ ತಾಲೂಕಿನ ಕೆರೆಗಳಿಗೆ ನೀರು ತುಂಬಿಸುವ ಕೆಲಸ ಮಾಡಲಿದ್ದೇನೆ. ಈ ಹಿಂದೆ ಕಾಂಗ್ರೆಸ್ ನಡಿಗೆ ಕೃಷ್ಣೆ ಕಡೆಗೆ ಪಾದಯಾತ್ರೆ ಮಾಡಿ ನೀರಾವರಿ ಯೋಜನೆ ಪೂರ್ಣಗೊಳಿಸುವುದಾಗಿ ಕಾಂಗ್ರೆಸ್ ಪಕ್ಷದವರು ಆಣೆ ಮಾಡಿದರು. ತದನಂತರ ಯೋಜನೆಗೆ ನಯಾಪೈಸೆ ಅನುದಾನ ನೀಡಲಿಲ್ಲ ಎಂದರು.
ಜಿಪಂ ಸಿಇಒ ಬಿ. ಫೌಜಿಯ ತರುನ್ನುಮ ಮಾತನಾಡಿ, ಮಹಿಳೆಯರು ಮನಸ್ಸು ಮಾಡಿದರೇ ಏನು ಬೇಕಾದರೂ ಸಾಧಿಸಬಹುದು. ಸ್ವತ್ಛತೆ ಬಗ್ಗೆ ಒತ್ತು ನೀಡಬೇಕು. ಪ್ಲಾಸ್ಟಿಕ್ ಮುಕ್ತ ಸಮಾಜ ನಿರ್ಮಿಸಬೇಕಿದೆ. ಪ್ರತಿಯೊಬ್ಬ ಪಾಲಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ, ಸರಕಾರಿ ಯೋಜನೆಗಳ ಬಗ್ಗೆ ತಿಳಿವಳಿಕೆ ಹೊಂದುವಂತೆ ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಕಿಶೋರ ವಿಕಾಸ್ ಸುರಳ್ಕರ್ ಮಾತನಾಡಿ, ಮಹಿಳೆಯರು ಸರಕಾರದ ಯೋಜನೆಗಳ ನೆರವು ಪಡೆದು ಸ್ವಯಂ ಉದ್ಯೋಗದಲ್ಲಿ ಯಶಸ್ಸು ಸಾಧಿ ಸಬೇಕಿದೆ. ಸಮಾಜದಲ್ಲಿ ಆರ್ಥಿಕವಾಗಿ ಅಭಿವೃದ್ಧಿ ಹೊಂದಬೇಕು ಎಂದರು.
ಪಪಂ ಅಧ್ಯಕ್ಷ ಅಮರೇಶ ಹುಬ್ಬಳ್ಳಿ, ಉಪಾಧ್ಯಕ್ಷೆ ಶಾಂತಾ ಮಾಟೂರು, ಭೂ ನ್ಯಾಯ ಮಂಡಳಿ ಸದಸ್ಯ ವೀರಣ್ಣ ಹುಬ್ಬಳ್ಳಿ, ತಾಪಂ ಇಒಗಳಾದ ಸಂತೋಷ ಪಾಟೀಲ ಬಿರಾದಾರ, ರಾಮಣ್ಣ ದೊಡ್ಡಮನಿ, ಮಹೇಶ ಎಚ್., ತಹಶೀಲ್ದಾರ್ ಶ್ರೀಶೈಲ ತಳವಾರ, ಅಕ್ಷರ ದಾಸೋಹ ಅಧಿಕಾರಿ ಎಫ್.ಎಂ. ಕಳ್ಳಿ, ನಿಂಗನಗೌಡ, ಚನ್ನಬಸಯ್ಯ ಸರಗಣಚಾರ, ಕಳಕಪ್ಪ ತಳವಾರ ಇತರರಿದ್ದರು.