ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಅನಧಿಕೃತ ಹಣ ವೆಚ್ಚ ಹಾಗೂ ಅಕ್ರಮ ಹಣ ವರ್ಗಾವಣೆ ಮೇಲೆ ಹದ್ದಿನ ಕಣ್ಣಿಟ್ಟಿರುವ ಕರ್ನಾಟಕ ಹಾಗೂ ಗೋವಾ ಆದಾಯ ತೆರಿಗೆ ಇಲಾಖೆ ವಿಭಾಗ, ಗೋವಾ ಸೇರಿ ರಾಜ್ಯದ ವಿವಿಧ ಭಾಗಗಳಲ್ಲಿ ಗುತ್ತಿಗೆದಾರರು, ಉದ್ಯಮಿಗಳ ನಿವಾಸಗಳ ಮೇಲೆ ಶೋಧ ಕಾರ್ಯಾಚರಣೆ ನಡೆಸಿ 3.19 ಕೋಟಿ ರೂ.ನಗದು ಹಾಗೂ 3.9 ಕೋಟಿ ರೂ. ಮೌಲ್ಯದ 12.5 ಕೆ.ಜಿ. ಚಿನ್ನಾಭರಣ ಜಪ್ತಿ ಮಾಡಿಕೊಂಡಿದೆ.
ಗುರುವಾರ (ಏ.11ರಂದು) ರಿಯಲ್ ಎಸ್ಟೇಟ್, ಪೌಲಿ, ಇವೆಂಟ್ ಮ್ಯಾನೆಜ್‌ಮೆಂಟ್ ವ್ಯವಹಾರ ನಡೆಸುವ ಬೆಂಗಳೂರಿನ ಮೂವರು ಉದ್ಯಮಿಗಳಿಗೆ ಸಂಬಂಧಿಸಿದಂತೆ ಬೆಂಗಳೂರು, ಚಿತ್ರದುರ್ಗ, ಕೊಲ್ಕತ್ತದಲ್ಲಿ ಒಟ್ಟು 23 ಸ್ಥಳಗಳಲ್ಲಿ ಏಕಕಾಲದಲ್ಲಿ ಶೋಧ ಕಾರ್ಯಚರಣೆ ನಡೆಸಿದ್ದು, 85 ಲಕ್ಷ ರೂ. ನಗದು ಜಪ್ತಿ ಮಾಡಿಕೊಂಡಿದ್ದು, 13. 5 ಕೆ.ಜಿ. ಚಿನ್ನಾಭರಣ ಪತ್ತೆಯಾಗಿದ್ದು ಪರಿಶೀಲನೆ ನಡೆಸಲಾಗುತ್ತಿದೆ ಎಂದು ಐಟಿ ಅಧಿಕಾರಿಗಳು ತಿಳಿಸಿದ್ದಾರೆ.
ಏ.10ರಂದು ಹುಬ್ಬಳ್ಳಿ, ಗದಗ, ಬಳ್ಳಾರಿಯ ಆರು ಮಂದಿ ಲೋಕೋಪಯೋಗಿ ಇಲಾಖೆ ಗುತ್ತಿಗೆದಾರರ ನಿವಾಸಗಳು, ಕಚೇರಿಗಳ ಮೇಲೆ ದಾಳಿ ನಡೆಸಲಾಗಿದ್ದು, ಅನಧಿಕೃತ ನಗದು, ತೆರಿಗೆ ವಂಚನೆ ಜತೆಗೆ ಸಾರಿಗೆ ವ್ಯವಸ್ಥೆಗೆ ಸಂಬಂಧಿಸಿದ ಗುತ್ತಿಗೆಯನ್ನು ಕುಟುಂಬದವರಿಗೆ ನೀಡಿರುವುದು ಕಂಡು ಬಂದಿದೆ. ಕಾರ್ಯಚರಣೆಯಲ್ಲಿ 40.50 ಕೋಟಿ ರೂ. ಹೆಚ್ಚುವರಿ ಆದಾಯ ಪತ್ತೆಯಾಗಿದೆ.
ಜತೆಗೆ, 1.29 ಕೋಟಿ ರೂ. ಹಾಗೂ 10.30 ಕೆ.ಜಿ ಚಿನ್ನಾಭರಣ, 2.22 ಕೆ.ಜಿ ಚಿನ್ನದ ಗಟ್ಟಿಗಳು 12.5 ಕೆ.ಜಿ. ಚಿನ್ನ ವಶಪಡಿಸಿಕೊಂಡಿದೆ. ಚಿಕ್ಕೋಡಿ, ಬೆಳಗಾವಿ, ಗೋಕಾಕ್, ನಿಪ್ಪಾಣಿಯಲ್ಲಿ ಹಲವು ಮಂದಿ ಸಿವಿಲ್ ಗುತ್ತಿಗೆದಾರರು ಮದ್ಯ ಮಾರಾಟ ವ್ಯವಹಾರದಲ್ಲೂ ತೊಡಗಿಸಿಕೊಂಡಿದ್ದರ ಬಗೆಗಿನ ಮಾಹಿತಿ ಮೇರೆಗೆ ಶೋಧ ಕಾರ್ಯಾಚರಣೆ ನಡೆದಿದೆ.
ಹಲವು ಮಂದಿ ಲೋಕೋಪಯೋಗಿ ಇಲಾಖೆ ಇಂಜಿನಿಯರ್‌ಗಳು ಈ ಅಕ್ರಮದಲ್ಲಿ ಭಾಗಿಯಾಗಿರುವುದು ಕಂಡು ಬಂದಿದ್ದು, 62 ಲಕ್ಷ ರೂ. ಜಪ್ತಿ ಮಾಡಲಾಗಿದೆ. ಅದೇ ರೀತಿ ಸಾರಿಗೆ ವ್ಯವಹಾರ ನಡೆಸುವ ಉಡುಪಿಯ ವ್ಯಕ್ತಿಯೊಬ್ಬರ ನಿವಾಸ ಹಾಗೂ ಕಚೇರಿಗಳಲ್ಲಿ ನಡೆಸಿದ ಶೋಧ ಕಾರ್ಯಾಚರಣೆ ವೇಳೆ ಲೆಕ್ಕವಿಲ್ಲದ 10 ಲಕ್ಷ ರೂ. ಜಪ್ತಿ ಮಾಡಲಾಗಿದೆ ಎಂದು ಐಟಿ ಇಲಾಖೆ ತಿಳಿಸಿದೆ.
ನಗದು ವರ್ಗಾವಣೆ ಹಾಗೂ ಮಟ್ಕಾ ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದ ವ್ಯಕ್ತಿಯೊಬ್ಬರಿಗೆ ಸಂಬಂಧಿಸಿದಂತೆ ಗೋವಾದಲ್ಲಿ ಶೋಧ ಕಾರ್ಯಾಚರಣೆ ನಡೆಸಿದ್ದು ಅನಧಿಕೃತವಾಗಿದ್ದ 33 ಲಕ್ಷ ರೂ. ಜಪ್ತಿ ಮಾಡಿಕೊಳ್ಳಲಾಗಿದೆ. ಗುತ್ತಿಗೆದಾರರು, ಅಡಿಕೆ ವ್ಯಾಪಾರಿಗಳು, ಉಪ ಗುತ್ತಿಗೆದಾರರ ನಿವಾಸಗಳು ಹಾಗೂ ಕಚೇರಿಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಗಿದೆ.
ದಾಳಿಗೊಳಗಾದ ವ್ಯಕ್ತಿಗಳು ಯಾವುದೇ ರಾಜಕೀಯ ಪಕ್ಷಗಳ ಮುಖಂಡರಲ್ಲ, ಸಂಸದರು ಶಾಸಕರ ಕಚೇರಿ ಸಿಬ್ಬಂದಿಯೂ ಆಗಿಲ್ಲ. ಉದ್ಯಮಿಗಳು ಹೊಂದಿದ್ದ ಅಕ್ರಮ ಆದಾಯಕ್ಕೆ ಸಂಬಂಧಿಸಿದ ನಿಖರ ಮಾಹಿತಿ ಆಧಾರದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ ಎಂದು ಐಟಿ ಇಲಾಖೆ ತಿಳಿಸಿದೆ.