Advertisement

ಐಟಿ ದಾಳಿ ರಾಜಕೀಯ ಪ್ರತೀಕಾರದ ಕ್ರಮ

11:01 PM Oct 13, 2019 | Lakshmi GovindaRaju |

ಬೆಂಗಳೂರು: ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಹಾಗೂ ಮಾಜಿ ಸಚಿವ ಡಿ.ಕೆ.ಶಿವಕುಮಾರ್‌ ಅವರ ಮೇಲಿನ ಆದಾಯ ತೆರಿಗೆ ದಾಳಿ ಬಗ್ಗೆ ಸಾಕಷ್ಟು ಅನುಮಾನ ಮೂಡಿದೆ ಎಂದು ಮಾಜಿ ಪ್ರಧಾನಿ, ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಹೇಳಿದ್ದಾರೆ.

Advertisement

ಪಕ್ಷದ ಕಚೇರಿ ಜೆಪಿ ಭವನದಲ್ಲಿ ಭಾನುವಾರ ನಡೆದ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ವಾಲ್ಮೀಕಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ನಂತರ ಸುದ್ದಿಗಾರರ ಜತೆ ಮಾತನಾಡಿ, ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಎಚ್‌.ಡಿ.ಕುಮಾರಸ್ವಾಮಿ ಯವರ ಜತೆ ಡಾ.ಜಿ.ಪರಮೇಶ್ವರ್‌ ಹಾಗೂ ಡಿ.ಕೆ.ಶಿವಕುಮಾರ್‌ ಹೆಚ್ಚು ಸಂಪರ್ಕದಲ್ಲಿ ದ್ದರು. ಇದೇ ಕಾರಣಕ್ಕೆ ಪ್ರತಿಕಾರವಾಗಿ ಈ ರೀತಿ ದಾಳಿ ಮಾಡಲಾಗುತ್ತಿದೆಯಾ ಎಂಬ ಅನುಮಾನವಿದೆ ಎಂದರು.

ಪರಮೇಶ್ವರ್‌ ಅವರ ತಂದೆಯ ಕಾಲದಿಂದಲೂ ಶಿಕ್ಷಣ ಸಂಸ್ಥೆಗಳು ಇವೆ. ಅವರ ಅಣ್ಣ ನೋಡಿಕೊಳ್ಳುತ್ತಿದ್ದರು. ಅವರು ತೀರಿ ಹೋದ ನಂತರ ಪರಮೇಶ್ವರ್‌ ನೋಡಿಕೊಳ್ಳುತ್ತಿದ್ದಾರೆ. ದೇಶದಲ್ಲಿ 300 ವೈದ್ಯಕೀಯ ಕಾಲೇಜುಗಳಿವೆ. 100ಕ್ಕೆ 80ರಷ್ಟು ವೈದ್ಯಕೀಯ ಕಾಲೇಜುಗಳನ್ನು ನಿಯಮಾವಳಿಗಳ ಪ್ರಕಾರ ನಡೆಸಲು ಅಸಾಧ್ಯ ಎಂದು ಹೇಳಿದರು.

ಮಾಧ್ಯಮ ನಿರ್ಬಂಧ ಸರಿಯಲ್ಲ: ವಿಧಾನಸಭೆ ಅಧಿವೇಶನಕ್ಕೆ ಮಾಧ್ಯಮ ನಿರ್ಬಂಧದ ನಂತರ ಇದೀಗ ಸರ್ಕಾರಿ ಕಾರ್ಯಕ್ರಮಕ್ಕೂ ನಿರ್ಬಂಧ ವಿಧಿಸಲಾಗಿದೆ. ಇದನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ ಎಂದು ದೇವೇಗೌಡರು ಹೇಳಿದರು. ಮುಖ್ಯಮಂತ್ರಿಯವರಿಗೂ ಈ ಕುರಿತು ಪತ್ರ ಬರೆಯುತ್ತೇನೆ. ಇದೇ ರೀತಿ ಮುಂದುವರಿದರೆ ನಾನೂ ಮಾಧ್ಯಮಗಳ ಜತೆ ಪ್ರತಿಭಟನೆ ಮಾಡುತ್ತೇನೆ ಎಂದು ತಿಳಿಸಿದರು. ವಿಧಾನಸಭೆ ಅಧಿವೇಶನಕ್ಕೆ ಸ್ಪೀಕರ್‌ ನಿರ್ಬಂಧ ಹೇರಿ ದ್ದಾರೆ ಅಂತಾರೆ. ಈಗ ನೋಡಿದರೆ ಸರ್ಕಾರದ ಕಾರ್ಯಕ್ರಮಗಳಿಗೂ ನಿರ್ಬಂಧ ಹೇರಲಾ ಗಿದೆ. ಇದನ್ನು ನೋಡಿದರೆ ಉದ್ದೇಶ ಬೇರೆ ಇದ್ದಂತೆ ಕಾಣುತ್ತದೆ ಎಂದು ಹೇಳಿದರು.

ಐಟಿ ದಾಳಿಯ ದಾರಿ ತಪ್ಪಿಸುವ ಕೆಲಸ: ಶೆಟ್ಟರ್‌
ಹುಬ್ಬಳ್ಳಿ: ಐಟಿ ದಾಳಿ ನಡೆದಾಗೊಮ್ಮೆ ಕಾಂಗ್ರೆಸ್‌ನವರು ರಾಜಕಾರಣ ಮಾಡುತ್ತಿದ್ದಾರೆ. ಆದರೆ, ಪರಮೇಶ್ವರ್‌ ಅವರು ಇದರಲ್ಲಿ ಯಾವುದೇ ರಾಜಕಾರಣ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಹೀಗಾಗಿ, ಅವರ ಆಪ್ತ ಸಹಾಯಕ ರಮೇಶ್‌ ಆತ್ಮಹತ್ಯೆ ಡೈವರ್ಟ್‌ ಮಾಡುವಂತಹ ಪ್ರಯತ್ನ ಇರಬಹುದು. ಈ ಕುರಿತು ತನಿಖೆಯಾಗಲಿ ಎಂದು ಸಚಿವ ಜಗದೀಶ ಶೆಟ್ಟರ್‌ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯ-ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ಅಥವಾ ಮಾತನಾಡಲು ಯಾವುದೇ ವಿಷಯಗಳಿಲ್ಲ.

Advertisement

ಹೀಗಾಗಿ ಐಟಿ, ಸಿಬಿಐ ಸೇರಿ ಇತರ ಸಂಸ್ಥೆಗಳು ಕಾನೂನಾತ್ಮಕ ಕೆಲಸಗಳನ್ನು ಮಾಡುತ್ತಿರುವಾಗ ರಾಜಕಾರಣಗೊಳಿಸುವ ಕೆಲಸ ಕಾಂಗ್ರೆಸ್‌ ನಾಯಕರಿಂದ ಆಗುತ್ತಿದೆ. ಸ್ವಾಯತ್ತ ಸಂಸ್ಥೆಗಳು ಕಾನೂನಾತ್ಮಕವಾಗಿ ಕಾರ್ಯ ನಿರ್ವಸುತ್ತಿರುವ ಸಂದರ್ಭದಲ್ಲಿ ಶ್ಲಾಘಿಸುವ ಬದಲು ಅವರ ಕಾರ್ಯವನ್ನು ಟೀಕಿಸುವ ಕೆಲಸ ಕಾಂಗ್ರೆಸ್‌ನಿಂದ ಆಗುತ್ತಿದೆ. ಕಾಂಗ್ರೆಸ್‌ ನಾಯಕರು ಮೊಸರಿನಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿರುವುದು ಸರಿಯಲ್ಲ ಎಂದು ತಿರುಗೇಟು ನೀಡಿದರು.

ರಮೇಶ್‌ ಆತ್ಮಹತ್ಯೆಯ ರಾಜಕೀಕರಣ ಸಲ್ಲ
ಹುಬ್ಬಳ್ಳಿ: ಮಾಜಿ ಡಿಸಿಎಂ ಡಾ| ಜಿ.ಪರಮೇಶ್ವರ್‌ ಅವರ ಆಪ್ತ ಸಹಾಯಕ ರಮೇಶ್‌ ಆತ್ಮಹತ್ಯೆ ಪ್ರಕರಣವನ್ನು ರಾಜಕೀಕರಣ ಮಾಡಲು ಸಾಧ್ಯವಿಲ್ಲ. ಪರಮೇಶ್ವರ್‌ ಕೂಡ ಎಲ್ಲವನ್ನೂ ಹೇಳಿದ್ದಾರೆ. ಹೀಗಾಗಿ, ಇದರಲ್ಲಿ ರಾಜಕಾರಣವಿಲ್ಲ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿ, ರಮೇಶ್‌ ಆತ್ಮಹತ್ಯೆ ಮಾಡಿಕೊಂಡ ಹಿನ್ನೆಲೆಯಲ್ಲಿ ಪೊಲೀಸರು ಅವರ ಫೋನ್‌ ಕರೆಗಳು, ಮರಣೋತ್ತರ ಪರೀಕ್ಷೆ ವರದಿ ಆಧಾರದ ಮೇಲೆ ಅಸ್ವಾಭಾವಿಕ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆತ್ಮಹತ್ಯೆ ಮಾಡಿಕೊಂಡ ಘಟನಾ ಸ್ಥಳದ ವಿಡಿಯೋಗ್ರಫಿ ಸಹ ಮಾಡಿದ್ದಾರೆ. ಡಿಸಿಪಿ ಮುಂದಿನ ಸೂಕ್ತ ಕ್ರಮ ಕೈಗೊಳ್ಳಲಿದ್ದಾರೆ. ಆದಾಯ ತೆರಿಗೆ ಇಲಾಖೆ ದಾಳಿ ಮಾಡಿದ್ದರ ಕುರಿತು ನಾನು ಹೇಳಿಕೆ ಕೊಡುವ ಅವಶ್ಯಕತೆಯಿಲ್ಲ ಎಂದರು.

ಪರಮೇಶ್ವರ್‌ ಆಪ್ತ ಸಹಾಯಕ ರಮೇಶ್‌ ಆತ್ಮಹತ್ಯೆಗೂ, ಐಟಿ ದಾಳಿಗೂ ಯಾವುದೇ ಸಂಬಂಧ ಇಲ್ಲ. ಇದಕ್ಕೆ ರಾಜ ಕೀಯ ತಳುಕು ಹಾಕಬಾರದು. ಈ ಹಿಂದೆ ಬಿಜೆಪಿ ನಾಯಕರ ಮೇಲೂ ಐಟಿ ದಾಳಿ ನಡೆದಿವೆ. ಸಂಶಯ ಬರುವವರ ಮೇಲೆ ತನಿಖಾ ಸಂಸ್ಥೆಗಳು ದಾಳಿ ನಡೆಸುತ್ತವೆ. ರಮೇಶ್‌ ಸಾವಿನ ಬಗ್ಗೆ ಸಮಗ್ರ ತನಿಖೆಯಾದ ನಂತರ ಸತ್ಯ ಹೊರಬೀಳಲಿದೆ. ಈ ಪ್ರಕರಣಕ್ಕೆ ರಾಜಕೀಯ ಬೆರೆಸದಂತೆ ಸ್ವತ: ಪರಮೇಶ್ವರ್‌ ಅವರೇ ಹೇಳಿದ್ದಾರೆ.
-ಲಕ್ಷ್ಮಣ ಸವದಿ, ಡಿಸಿಎಂ

ಐಟಿ ದಾಳಿಗೂ, ರಾಜಕೀಯಕ್ಕೂ ಸಂಬಂಧವೇ ಇಲ್ಲ ಎಂದು ಪರಮೇಶ್ವರ್‌ ಅವರೇ ಕೊಟ್ಟಿರುವ ಹೇಳಿಕೆಯನ್ನು ಎಸ್‌.ಆರ್‌. ಪಾಟೀಲರು ಗಮನಿಸಬೇಕು. ಬಡವರಿಗೆ ಸಿಗಬೇಕಾದ ಮೆಡಿಕಲ್‌ ಸೀಟ್‌ ಬೇರೆ, ಬೇರೆಯವರಿಗೆ ದೊರೆತಿದ್ದು, ಅದನ್ನು ಬಯಲಿಗೆ ಎಳೆಯುವ ನಿಟ್ಟಿನಲ್ಲಿ ಐಟಿ ದಾಳಿ ಮಾಡಿದ್ದಾರೆ.
-ಪ್ರಹ್ಲಾದ ಜೋಶಿ, ಕೇಂದ್ರ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next