ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮುಖಂಡ ಡಿಕೆ ಶಿವಕುಮಾರ್ ಗೆ ದೆಹಲಿ ಹೈಕೋರ್ಟ್ ಜಾಮೀನು ನೀಡಿರುವ ಹಿನ್ನೆಲೆಯಲ್ಲಿ ವಿಶೇಷ ಕೋರ್ಟ್ ನ್ಯಾಯಾಧೀಶರಾದ ಅಜಯ್ ಕುಮಾರ್ ಕುಹರ್ ಅವರು ಡಿಕೆ ಶಿವಕುಮಾರ್ ಅವರನ್ನು ಬಿಡುಗಡೆ ಮಾಡುವಂತೆ ತಿಹಾರ್ ಜೈಲಿಗೆ ಅನುಮತಿ ಪತ್ರ ನೀಡಿದ್ದಾರೆ.
ಜಾರಿ ನಿರ್ದೇಶನಾಲಯದ ಕೋರ್ಟ್ ನಲ್ಲಿ 25 ಲಕ್ಷ ರೂ. ಬಾಂಡ್, ಇಬ್ಬರು ಶ್ಯೂರಿಟಿ ಹಾಕುವವರಿಗಾಗಿ ಜಡ್ಜ್ ಕಾಯುತ್ತಿದ್ದರು. ಈ ವೇಳೆ ಟ್ರಾಫಿಕ್ ಜಾಮ್ ನಲ್ಲಿ ಸಿಕ್ಕಿಹಾಕಿಕೊಂಡಿದ್ದ ಡಿಕೆ ಸುರೇಶ್ ನ್ಯಾಯಾಲಯದತ್ತ ಓಡೋಡಿ ಬಂದ ಪ್ರಸಂಗ ನಡೆಯಿತು.
ಡಿಕೆಶಿ ಬಿಡುಗಡೆ ಆದೇಶದ ಪ್ರತಿಯನ್ನು ತಿಹಾರ್ ಜೈಲು ಅಧಿಕಾರಿಗಳಿಗೆ ಡಿಕೆಶಿ ಪರ ವಕೀಲರು ಹಸ್ತಾಂತರಿಸಿದ್ದರು. ಆದೇಶದ ಪ್ರತಿ ತಲುಪಿದ ಬಳಿಕ ಡಿಕೆಶಿ ಬಿಡುಗಡೆ ಪ್ರಕ್ರಿಯೆ ಆರಂಭವಾಗುತ್ತದೆ ಎಂದು ವರದಿ ತಿಳಿಸಿದೆ.
ರೋಸ್ ಅವೆನ್ಯೂ ಕೋರ್ಟ್ ನಿಂದ ತಿಹಾರ್ ಜೈಲಿಗೆ ಅರ್ಧಗಂಟೆಯ ಪ್ರಯಾಣ. ಹೀಗಾಗಿ ಬಿಡುಗಡೆ ಆದೇಶದ ಪ್ರತಿ ತಿಹಾರ್ ಜೈಲು ಅಧಿಕಾರಿಗಳಿಗೆ ನೀಡಿದ ನಂತರವೇ ಬಿಡುಗಡೆ ಪ್ರಕ್ರಿಯೆ ಆರಂಭವಾಗಲಿದೆ ಎಂದು ವರದಿ ಹೇಳಿದೆ.
ರಾತ್ರಿ 8ಗಂಟೆ ವೇಳೆಗೆ ಡಿಕೆ ಶಿವಕುಮಾರ್ ತಿಹಾರ್ ಜೈಲಿನಿಂದ ಬಿಡುಗಡೆಯಾಗುವ ಸಾಧ್ಯತೆ ಇದೆ ಎಂದು ಖಾಸಗಿ ವಾಹಿನಿಗಳ ವರದಿ ತಿಳಿಸಿದೆ. ಒಂದು ವೇಳೆ ಇಂದು ಪ್ರಕ್ರಿಯೆ ಪೂರ್ಣಗೊಳ್ಳದಿದ್ದರೆ ಗುರುವಾರ ಬೆಳಗ್ಗೆ ಡಿಕೆಶಿ ಜೈಲಿನಿಂದ ಬಿಡುಗಡೆಯಾಗಲಿದ್ದಾರೆ ಎಂದು ವರದಿ ವಿವರಿಸಿದೆ.