ಮಂಗಳೂರು: ಕುವೈಟ್‌ನ ಕರಾಫಿ ನ್ಯಾಶನಲ್ ಕಂಪೆನಿಯ ಭಾರತೀಯ ಉದ್ಯೋಗಿಗಳು ವೇತನ ಸಿಗದೆ ಪರದಾಡುತ್ತಿರುವ ಹಿನ್ನೆಲೆಯಲ್ಲಿ ಭಾರತದ ವಿದೇಶಾಂಗ ಖಾತೆಯ ರಾಜ್ಯ ಸಚಿವ ಜ| ವಿ.ಕೆ. ಸಿಂಗ್ ಅವರು ಗುರುವಾರ ಕುವೈಟ್‌ಗೆ ಭೇಟಿ ನೀಡಿ ಅಲ್ಲಿನ ಸರಕಾರದೊಂದಿಗೆ ಮಾತುಕತೆ ನಡೆಸಿದರು.
ಭಾರತೀಯ ಉದ್ಯೋಗಿಗಳಿಗೆ ಎದುರಾಗಿರುವ ಸಮಸ್ಯೆಗಳ ಬಗ್ಗೆ ಕುವೈಟ್ ಸರಕಾರದೊಂದಿಗೆ ಮಾತ ನಾಡಿದ ಜ| ಸಿಂಗ್, ಸಮಸ್ಯೆ ಪರಿ ಹರಿಸಲು ಮನವಿ ಮಾಡಿದರು. ಈ ಬಗ್ಗೆ ಸಂಸತ್ತಿನಲ್ಲಿ ವಿಷಯ ಪ್ರಸ್ತಾ ಪಿಸಲಾಗುವುದು ಮತ್ತು ಸಮಸ್ಯೆ ಪರಿ ಹರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳ ಲಾಗುವುದು ಎಂದು ಕುವೈಟ್ ಸರಕಾರ ಭರವಸೆ ನೀಡಿದೆ. ಅಲ್ಲದೆ ಸಂಬಳ ಪಾವತಿಗೂ ಕ್ರಮ ನಡೆಸಲಾಗುವುದು ಎಂದು ಹೇಳಿದೆ.
ಆ ಬಳಿಕ ಕುವೈಟ್‌ನಲ್ಲಿರುವ ಭಾರತೀಯ ದೂತಾವಾಸ ಕಚೇರಿಯ ಹೊರ ಭಾಗದಲ್ಲಿ ಭಾರತೀಯ ಉದ್ಯೋಗಿಗಳನ್ನು ಭೇಟಿ ಮಾಡಿದ ಜ| ಸಿಂಗ್, ಅವರನ್ನು ತಾಯ್ನಾಡಿಗೆ ಕರೆತರುವ ನಿಟ್ಟಿನಲ್ಲಿ ಸರ್ವಪ್ರಯತ್ನ ಮಾಡಲಾಗುವುದು ಎಂದು ಭರವಸೆ ನೀಡಿದರು.
ಕಳೆದ ಒಂದು ವರ್ಷದಿಂದ ಈ ಕಂಪೆನಿಯು ತನ್ನ ಉದ್ಯೋಗಿಗಳಿಗೆ ವೇತನ ನೀಡುತ್ತಿಲ್ಲ. ಅಲ್ಲದೆ ತಾಯ್ನಾಡಿಗೆ ಮರಳಲು ವೀಸಾವನ್ನೂ ಕೊಡುತ್ತಿಲ್ಲ ಎಂದು ಆರೋಪಿಸಿ ಬುಧವಾರದಿಂದ ಉದ್ಯೋಗಿಗಳು ಕಂಪೆನಿಯಲ್ಲೇ ಆಮರಣಾಂತ ಉಪವಾಸ ಸತ್ಯಾಗ್ರಹ ಹಮ್ಮಿಕೊಂಡಿದ್ದರು. ಇಲ್ಲಿ ಕೆಲಸ ಮಾಡುವ ಉದ್ಯೋಗಿಗಳ ಪೈಕಿ 2,084 ಮಂದಿ ಭಾರತೀಯರಿದ್ದು, ಅವರ ಸಮಸ್ಯೆ ಆಲಿಸಿ ಪರಿಹರಿಸುವುದಕ್ಕಾಗಿ ಮಾತುಕತೆ ನಡೆಸಲು ಜ| ಸಿಂಗ್ ಕುವೈಟ್‌ಗೆ ತೆರಳಿದ್ದರು.
ಕಂಪೆನಿಯು ಸಂಬಳ ನೀಡದ ಹಿನ್ನೆಲೆಯಲ್ಲಿ ಉದ್ಯೋಗಿಗಳು ಸಮಸ್ಯೆ ಎದುರಿಸುತ್ತಿರುವ ಬಗ್ಗೆ
“ಕುವೈಟ್: ವೇತನವಿಲ್ಲದೆ 2,084 ಭಾರತೀಯರ ಪರದಾಟ’ ಎಂಬ ವಿಶೇಷ ವರದಿ ಯನ್ನು “ಉದಯವಾಣಿ’ ಜ. 11ರಂದು ಪ್ರಕಟಿಸಿತ್ತು.