Advertisement

ಇಳವೆನಿಲ್‌ ಬಂಗಾರದ ಕಮಾಲ್‌

11:58 PM Aug 29, 2019 | Sriram |

ರಿಯೋ ಡಿ ಜನೈರೋ: ಇಲ್ಲಿ ನಡೆಯುತ್ತಿರುವ ವಿಶ್ವಕಪ್‌ ಶೂಟಿಂಗ್‌ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಇಳವೆನಿಲ್‌ ವಲರಿವನ್‌ ಮಹಾನ್‌ ಸಾಧನೆಗೈದಿದ್ದಾರೆ. ಅವರು ಸೀನಿಯರ್‌ ವಿಭಾಗದಲ್ಲಿ ತಮ್ಮ ಮೊದಲ ಚಿನ್ನದ ಪದಕ ಜಯಿಸುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ಇಳವೆನಿಲ್‌ 10 ಮೀ. ಏರ್‌ ರೈಫ‌ಲ್‌ನಲ್ಲಿ ಬಂಗಾರಕ್ಕೆ ಗುರಿ ಇರಿಸಿದರು.ಆದರೆ ಭಾರತದ ಭರವಸೆಯ ಶೂಟರ್‌ಗಳಾದ ಅಪೂರ್ವಿ ಚಂದೇಲ ಮತ್ತು ಅಂಜುಮ್‌ ಮೌದ್ಗಿಲ್‌ ಗುರಿ ತಪ್ಪುವ ಮೂಲಕ ನಿರಾಸೆ ಮೂಡಿಸಿದರು.

Advertisement

ಇದೇ ಮೊದಲ ಬಾರಿ ಸೀನಿಯರ್‌ ವಿಭಾಗದಲ್ಲಿ ಸ್ಪರ್ಧಿಸಿದ 20 ವರ್ಷದ ಇಳವೆನಿಲ್‌ ಫೈನಲ್‌ನಲ್ಲಿ 251.7 ಅಂಕ ಗಳಿಸಿ ಅಗ್ರಸ್ಥಾನಿಯಾದರು. ಬ್ರಿಟನ್‌ನ ಸಿಯೋನೇಟ್‌ ಮೆಕಿಂತೋಷ್‌ 250.6 ಅಂಕಗಳೊಂದಿಗೆ ಬೆಳ್ಳಿ ಪದಕ ತಮ್ಮದಾಗಿಸಿಕೊಂಡರು. ಚೈನೀಸ್‌ ತೈಪೆಯ ಯಿಂಗ್‌ ಶಿನ್‌ ಲೀ ಕಂಚು ಗೆದ್ದರು.

ಇಳವೆನಿಲ್‌ ಸಾಧನೆಯೊಂದಿಗೆ ಭಾರತ ಒಂದೇ ವರ್ಷದಲ್ಲಿ 10 ಮೀ. ಶೂಟಿಂಗ್‌ ವಿಭಾಗದ 4 ಚಿನ್ನದ ಪದಕಗಳಲ್ಲಿ ಮೂರನ್ನು ಜಯಿಸಿದ ಸಾಧನೆ ಮಾಡಿತು. ಇಳವೆನಿಲ್‌ ಏಶ್ಯನ್‌ ಚಾಂಪಿಯನ್‌ನ ಜೂ. ವಿಭಾಗದಲ್ಲಿಯೂ ಚಿನ್ನದ ಪದಕ ಜಯಿಸಿದ ದಾಖಲೆ ಹೊಂದಿದ್ದಾರೆ.

ಅಪೂರ್ವಿ, ಅಂಜುಮ್‌ ನಿರಾಸೆ
ಅರ್ಹತಾ ಸುತ್ತಿನಲ್ಲಿ ಇಳವೆನಿಲ್‌ ಹಿರಿಯ ಶೂಟರ್‌ ಅಂಜುಮ್‌ ಮೌದ್ಗಿಲ್‌ ಅವರನ್ನೇ ಹಿಂದಿಕ್ಕಿದರು. ಇಬ್ಬರೂ ಕ್ರಮವಾಗಿ 4ನೇ ಹಾಗೂ 5ನೇ ಸ್ಥಾನದೊಂದಿಗೆ 8 ಸ್ಪರ್ಧಿಗಳ ಫೈನಲ್‌ ತಲುಪಿದರು. ಇಲ್ಲಿ ಅಂಜುಮ್‌ 6ನೇ ಸ್ಥಾನ ಪಡೆದರು. ಆದರೆ ವಿಶ್ವದ ನಂಬರ್‌ ವನ್‌ ಹಾಗೂ ಫೈನಲ್ಸ್‌ ವಿಶ್ವದಾಖಲೆ ಹೊಂದಿರುವ ಅಪೂರ್ವಿ ಚಂದೇಲ 11ನೇ ಸ್ಥಾನಕ್ಕೆ ಕುಸಿದು (627.7 ಅಂಕ) ಫೈನಲ್‌ ಪ್ರವೇಶಿಸುವಲ್ಲಿ ವಿಫ‌ಲರಾದರು.

Advertisement

Udayavani is now on Telegram. Click here to join our channel and stay updated with the latest news.

Next