ಹೈದರಬಾದ್: ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರ(ಇಸ್ರೋ)ದ ನ್ಯಾಶನಲ್ ರಿಮೋಟ್ ಸೆನ್ಸಿಂಗ್ ಸೆಂಟರ್(ಎನ್ ಆರ್ ಎಸ್ ಸಿ) ನ ವಿಜ್ಞಾನಿಯೊಬ್ಬರನ್ನು ಕೊಲೆಗೈದಿರುವ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿಜ್ಞಾನಿ ಎಸ್.ಸುರೇಶ್(56ವರ್ಷ) ಅವರನ್ನು ನಗರದ ಹೃದಯಭಾಗದಲ್ಲಿ ಇರುವ ಅಮೀರ್ ಪೇಟ್ ಪ್ರದೇಶದಲ್ಲಿರುವ ಅನ್ನಪೂರ್ಣ ಅಪಾರ್ಟ್ ಮೆಂಟ್ ನಲ್ಲಿನ ಫ್ಲ್ಯಾಟ್ ನಲ್ಲಿ ಅಪರಿಚಿತ ವ್ಯಕ್ತಿಗಳು ಹತ್ಯೆಗೈದಿರುವುದಾಗಿ ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
ಸುರೇಶ್ ಅವರು ಕೇರಳ ಮೂಲದವರಾಗಿದ್ದು, ಫ್ಲ್ಯಾಟ್ ನಲ್ಲಿ ಒಬ್ಬರೇ ವಾಸವಾಗಿದ್ದರು. ಮಂಗಳವಾರ ಕಚೇರಿಗೆ ಆಗಮಿಸದಿರುವುದನ್ನು ಗಮನಿಸಿ ಸಹೋದ್ಯೋಗಿಯೊಬ್ಬರು ಅವರ ಮೊಬೈಲ್ ಗೆ ಕರೆ ಮಾಡಿದ್ದರು. ಆದರೆ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲವಾಗಿತ್ತು. ಕೂಡಲೇ ಚೆನ್ನೈನ ಬ್ಯಾಂಕ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪತ್ನಿ ಇಂದಿರಾಗೆ ಮಾಹಿತಿ ನೀಡಿರುವುದಾಗಿ ವರದಿ ವಿವರಿಸಿದೆ.
ನಂತರ ಸುರೇಶ್ ಅವರ ಪತ್ನಿ ಹಾಗೂ ಕುಟುಂಬದ ಕೆಲವು ಸದಸ್ಯರು ಹೈದರಬಾದ್ ಗೆ ಆಗಮಿಸಿ, ಪೊಲೀಸರಿಗೆ ಮಾಹಿತಿ ನೀಡಿದ್ದರು. ಕೂಡಲೇ ಪೊಲೀಸರು ಫ್ಯ್ಲಾಟ್ ಗೆ ತೆರಳಿ ಬಾಗಿಲು ಮುರಿದು ಒಳ ಹೋದಾಗ ಸುರೇಶ್ ಕೊಲೆಯಾಗಿರುವುದು ಪತ್ತೆಯಾಗಿತ್ತು.
ಯಾವುದೇ ಭಾರವಾದ ವಸ್ತುವಿನಿಂದ ವಿಜ್ಞಾನಿ ಸುರೇಶ್ ಅವರ ತಲೆ ಒಡೆದ ಪರಿಣಾಮ ಅವರ ಸಾವು ಸಂಭವಿಸಿದೆ ಎಂದು ಪೊಲೀಸರು ಶಂಕಿಸಿದ್ದು, ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ವರದಿ ತಿಳಿಸಿದೆ.
ವಿಜ್ಞಾನಿ ಸುರೇಶ್ ಅವರನ್ನು ಯಾವ ಕಾರಣಕ್ಕೆ ಹತ್ಯೆಗೈಯಲಾಗಿದೆ, ಯಾರು ಎಂಬ ಬಗ್ಗೆ ಸಿಸಿಟಿವಿ ಫೂಟೇಜ್ ಸೇರಿದಂತೆ ಎಲ್ಲಾ ವಿಧದಿಂದಲೂ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ವಿವರಿಸಿದ್ದಾರೆ.
ಕಳೆದ 20 ವರ್ಷಗಳಿಂದ ವಿಜ್ಞಾನಿ ಸುರೇಶ್ ಅವರು ಹೈದರಾಬಾದ್ ನಲ್ಲಿ ವಾಸವಾಗಿದ್ದು, ಪತ್ನಿ ಕೂಡ ಜತೆಗಿದ್ದರು. 2005ರಲ್ಲಿ ಪತ್ನಿ ಇಂದಿರಾ ಅವರನ್ನು ಚೆನ್ನೈಗೆ ವರ್ಗಾಯಿಸಲಾಗಿತ್ತು. ಮಗ ಅಮೆರಿಕದಲ್ಲಿ ವಾಸವಾಗಿದ್ದು, ಮಗಳು ದೆಹಲಿಯಲ್ಲಿರುವುದಾಗಿ ವರದಿ ತಿಳಿಸಿದೆ.