ಹೊಸದಿಲ್ಲಿ: ಇತ್ತೀಚೆಗೆ ನಡೆದಿದ್ದ ಬಾಲಕೋಟ್ ಮೇಲಿನ ವಾಯುದಾಳಿಯಂಥ ದಾಳಿ ಗಳನ್ನು ಇನ್ನು ಮುಂದೆ ಭಾರತ ಮತ್ತಷ್ಟು ನಿಖರವಾಗಿ ಸಂಘಟಿಸಲು ಸಾಧ್ಯವಾಗಿಸಲು ಸಹಾಯ ಮಾಡುವ ಗೂಢಚಾರಿ ಉಪಗ್ರಹವೊಂದನ್ನು ಇಸ್ರೋ ಬುಧವಾರ ಮುಂಜಾನೆ 5.30ರ ಸುಮಾರಿಗೆ ಬಾಹ್ಯಾಕಾಶಕ್ಕೆ ಹಾರಿಬಿಡಲಿದೆ.
615 ಕೆಜಿ ತೂಕವಿರುವ “ರಿಸ್ಯಾಟ್-2ಬಿ’ ಹೆಸರಿನ ಈ ಉಪಗ್ರಹ ರೇಡಾರ್ ಸೌಲಭ್ಯವನ್ನು ಹೊಂದಿದ್ದು, ಇದನ್ನು ಗೂಢಚರ್ಯೆಗಾಗಿಯೂ ಬಳಸಲಾಗುತ್ತದೆ ಎಂದು ಇಸ್ರೋ ಹೇಳಿದೆ. ಭೂಮಿಯಿಂದ 557 ಕಿ.ಮೀ. ಎತ್ತರದ ಕಕ್ಷೆಯಲ್ಲಿ ಇದು ಕಾರ್ಯಾಚರಣೆ ನಡೆಸಲಿದೆ.
ಈ ಹಿಂದೆ, ರಿಸ್ಯಾಟ್-1, ರಿಸ್ಯಾಟ್-2 ಎಂಬ ಎರಡು ಗೂಢಚರ್ಯೆ ಉಪಗ್ರಹಗಳನ್ನು ಇಸ್ರೋ ಹಾರಿಬಿಟ್ಟಿತ್ತು. ಇತ್ತೀಚೆಗೆ, ಬಾಲಕೋಟ್ ದಾಳಿ ನಡೆದಾಗ ಅಲ್ಲಿ ಹಾನಿಗೀಡಾದ ಕಟ್ಟಡಗಳ ಚಿತ್ರಗಳನ್ನು ತೆಗೆಯುವಲ್ಲಿ ರಿಸ್ಯಾಟ್-1ರಲ್ಲಿನ ರೇಡಾರ್‌ಗಳು ಯಶಸ್ವಿಯಾಗಿರಲಿಲ್ಲ. ಇನ್ನು, ರಿಸ್ಯಾಟ್-2 ಉಪಗ್ರಹದ ಸೇವೆಯನ್ನು ಇಸ್ರೇಲ್ ಪಡೆಯುತ್ತಿರುವುದರಿಂದ ಅದರಿಂದಲೂ ಬಾಲಕೋಟ್ ದಾಳಿಯ ಅನಂತರದ ಫೋಟೋಗಳನ್ನು ಪಡೆಯಲು ಸಾಧ್ಯವಾಗಿರಲಿಲ್ಲ. ಇದಲ್ಲದೆ, ಭೂಮಿಯ ಚಿತ್ರಗಳನ್ನು ಚಿತ್ರಗಳನ್ನು ಪಡೆಯಲೆಂದೇ ಹಾರಿಬಿಡಲಾಗಿರುವ ಕಾಟೋìಸ್ಯಾಟ್ ಉಪಗ್ರಹಗಳು ಮೋಡ ಮುಚ್ಚಿದಾಗ ಸಮರ್ಪಕ ಚಿತ್ರಗಳನ್ನು ಕಳಿಸುವುದಿಲ್ಲ. ಹಾಗಾಗಿ, ಇದೂ ಸಹ ಬಾಲಕೋಟ್‌ನಲ್ಲಿ ಆಗಿರುವ ನಷ್ಟದ ಪ್ರಮಾಣ ಅಂದಾಜಿಸುವಲ್ಲಿ ಹಿನ್ನಡೆ ಉಂಟಾಗಿತ್ತು.
ಹಾಗಾಗಿ, ಈ ತಾಂತ್ರಿಕ ಹಿನ್ನಡೆಯಿಂದ ಹೊರಬರಲು ತೀರ್ಮಾನಿ ಸಿರುವ ಇಸ್ರೋ, ರಿಸ್ಯಾಟ್-2ಬಿ ಉಡಾವಣೆ ಮಾಡುತ್ತಿದೆ.
ಭಾರತದ ಇನ್ನಿತರ ಗೂಢಚಾರಿ ಉಪಗ್ರಹಗಳಿಗಿಂತ ಹೆಚ್ಚು ಶಕ್ತಿಶಾಲಿ
ಮೋಡಗಳು ಕವಿದಿದ್ದರೂ, ಶತ್ರು ಪಾಳಯ ಮೇಲೆ ನಿಗಾ, ಫೋಟೋ ರವಾನೆ ಸಾಧ್ಯ.