Advertisement

“ಇಸ್ರೇಲ್‌ ಮಾದರಿಯ ನೀರಾವರಿ ಯೋಜನೆ; ಅಧ್ಯಯನ ಅಗತ್ಯ’​​​​​​​

12:30 AM Mar 02, 2019 | Team Udayavani |

ಅಜೆಕಾರು: ಇಸ್ರೇಲ್‌ ಮಾದರಿಯ ಹನಿ ನೀರಾವರಿ ಯೋಜನೆಯಿಂದ ನಮ್ಮೂರಿನ ಕೃಷಿಕರಿಗೆ ಅನುಕೂಲ ವಾಗುವುದಾದರೆ ಕಾರ್ಕಳ ಕ್ಷೇತ್ರದಾದ್ಯಂತ ಇಸ್ರೇಲ್‌ ಮಾದರಿ ತಂತ್ರಜ್ಞಾನ ಅಳವಡಿಕೆಗೆ ಸರಕಾರಕ್ಕೆ ಒತ್ತಡ ತರುವುದಾಗಿ ಶಾಸಕ ಸುನಿಲ್‌ ಕುಮಾರ್‌ ಹೇಳಿದರು.

Advertisement

ಮರ್ಣೆ ಗ್ರಾ.ಪಂ. ಸಭಾಭವನದಲ್ಲಿ ಮರ್ಣೆ, ವರಂಗ, ಕಡ್ತಲ ಪಂ. ವ್ಯಾಪ್ತಿಯ ರೈತರೊಡನೆ ಸಂವಾದ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಶಾಸಕ ಸುನಿಲ್‌ ಕುಮಾರ್‌ ಸ್ಥಳೀಯ ಕೃಷಿ ಪದ್ಧತಿ, ನೀರಾವರಿ ಯೋಜನೆ ಹಾಗೂ ಇಸ್ರೇಲ್‌ ತಂತ್ರಜ್ಞಾನ ಅಳವಡಿಸುವ ಬಗ್ಗೆ ಹೆಚ್ಚಿನ ಅಧ್ಯಯನ ಅಗತ್ಯ ಎಂದರು.

ಕಾರ್ಕಳ ತಾ|ನಲ್ಲಿ 29,000 ಹೆಕ್ಟೇರ್‌ ಕೃಷಿ ಭೂಮಿ ಲಭ್ಯವಿದ್ದರೂ ಇತ್ತೀಚಿನ ದಿನಗಳಲ್ಲಿ ಯುವ ಸಮುದಾಯ ಕೃಷಿಯಿಂದ ದೂರವಾಗಿ ಕೃಷಿ ಭೂಮಿ ಹಡಿಲು ಬೀಳುವಂತಾಗಿದೆ. ಕೇವಲ 9,000 ಹೆಕ್ಟೇರ್‌ ಕೃಷಿ ಭೂಮಿಯಲ್ಲಿ ಮಾತ್ರ ಕೃಷಿ ನಡೆಯುತ್ತಿದೆ. ಆಧುನಿಕ ತಂತ್ರಜ್ಞಾನ ದೊಂದಿಗೆ ಪಾಳು  ಭೂಮಿಯಲ್ಲೂ ಲಾಭ ದಾಯಕವಾಗಿ ಕೃಷಿಯ ಬಗ್ಗೆ ಚಿಂತನೆ ನಡೆಸಬೇಕಿದೆ ಎಂದರು.
ಕಾರ್ಕಳ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿ ಯಲ್ಲಿ ಕೃಷಿಗೆ ಹೆಚ್ಚಿನ ಒತ್ತು ನೀಡುವ ಉದ್ದೇಶದೊಂದಿಗೆ ಕಳೆದ ವರ್ಷ 57 ಕಿಂಡಿ ಅಣೆಕಟ್ಟುಗಳನ್ನು ನಿರ್ಮಿಸಲಾಗಿದೆ ಎಂದರು.

ಎಣ್ಣೇಹೊಳೆ ನೀರಾವರಿ ಯೋಜನೆ
ಮರ್ಣೆ, ಎರ್ಲಪಾಡಿ, ಹಿರ್ಗಾನ ಗ್ರಾಮಗಳ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸುವರ್ಣಾ ನದಿಗೆ ಅಣೆಕಟ್ಟು ನಿರ್ಮಿಸುವಂತೆ ಕಳೆದ 3 ವರ್ಷಗಳಿಂದ ನಿರಂತರ ಸರಕಾರಕ್ಕೆ ಒತ್ತಾಯ ಮಾಡುತ್ತಾ ಬಂದಿದ್ದು ಇದೀಗ ಬಜೆಟ್‌ನಲ್ಲಿ ರಾಜ್ಯ ಸರಕಾರ 40 ಕೋಟಿ ರೂ. ಅನುದಾನ ನೀಡಿರುವುದರಿಂದ ಈ ಭಾಗದ ಕೃಷಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದರು.

ಸೀಮಿತ ನೀರನ್ನು ರೈತರು ಸಮರ್ಪಕವಾಗಿ ಸದ್ಬಳಕೆ ಮಾಡಬೇಕಾದ ಅನಿವಾರ್ಯ ಎದುರಾಗಿದ್ದು ಈ ನಿಟ್ಟಿನಲ್ಲಿ ಇಸ್ರೇಲ್‌ ಮಾದರಿಯ ಹನಿ ನೀರಾವರಿ ಅತ್ಯಂತ ಸಹಕಾರಿ.  ಈ ಯೋಜನೆಯ ಬಗ್ಗೆ ಅಧಿಕಾರಿಗಳು ಸಮಗ್ರ ಮಾಹಿತಿ ನೀಡಲಿದ್ದು, ಸೀಮಿತ ನೀರಿನ ಮೂಲವಿರುವ ರೈತರು ಈ ಯೋಜನೆಯ ಪ್ರಯೋಜನ ಪಡೆಯಬಹುದು. ಈ ಯೋಜನೆಗೆ ಕನಿಷ್ಠ 100 ಎಕರೆಗಿಂತ ಹೆಚ್ಚಿನ ಜಮೀನಿನ ಅವಶ್ಯಕತೆಯಿದ್ದು ರೈತರು ತಮ್ಮೊಳಗೆ ಚರ್ಚಿಸಿ ಕ್ರಮಕೈಗೊಂಡರೆ ಈ ಯೋಜನೆ ಯಶಸ್ವಿಯಾಗುವುದು ಖಂಡಿತ ಎಂದರು.

Advertisement

ಜಿ.ಪಂ. ಸದಸ್ಯೆ ಜ್ಯೋತಿ ಹರೀಶ್‌, ತಾ.ಪಂ. ಸದಸ್ಯ ಹರೀಶ್‌ ನಾಯಕ್‌, ಮರ್ಣೆ ಪಂ. ಅಧ್ಯಕ್ಷ ದಿನೇಶ್‌ ಕುಮಾರ್‌, ವರಂಗ ಪಂ. ಅಧ್ಯಕ್ಷ ಸುರೇಂದ್ರ ಶೆಟ್ಟಿ, ತೋಟಗಾರಿಕಾ ಹಿರಿಯ ನಿರ್ದೇಶಕ ಶ್ರೀನಿವಾಸ ರಾವ್‌, ಪಿಡಿ ಒ ತಿಲಕರಾಜ್‌, ಕಾರ್ಯದರ್ಶಿ ಶ್ರೀನಿವಾಸ ಉಪಸ್ಥಿತರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next