Advertisement
ಇಸ್ರೇಲ್ ಮತ್ತು ಹಮಾಸ್ ಉಗ್ರರ ನಡುವೆ ಕದನ ಆರಂಭಗೊಂಡಾಗಿನಿಂದ ಇಂತಹ ಆತಂಕವೊಂದು ಜಾಗತಿಕ ಸಮುದಾಯವನ್ನು ಕಾಡಲಾರಂಭಿಸಿತ್ತು. ಯುದ್ಧ ಸಾಗುತ್ತಿರುವ ರೀತಿ ಮತ್ತು ಇತ್ತೀಚಿನ ಬೆಳವಣಿಗೆಗಳನ್ನು ಅವಲೋಕಿಸಿದರೆ ಯುದ್ಧ ಕೇವಲ ಇಸ್ರೇಲ್-ಹಮಾಸ್ ಉಗ್ರರಿಗೆ ಸೀಮಿತವಾಗಿರದೆ ಪಾಶ್ಚಾತ್ಯ ಮತ್ತು ಅರಬ್ ರಾಷ್ಟ್ರಗಳ ನಡುವಣ ಕದನ ವಾಗಿ ಮಾರ್ಪಟ್ಟರೆ ಅಚ್ಚರಿ ಏನಿಲ್ಲ. ವಿಶ್ವದ ಅತ್ಯಂತ ಪ್ರಬಲ ರಾಷ್ಟ್ರಗಳು ಇಸ್ರೇಲ್‌ನ ಜತೆಗಿದ್ದರೂ ಅರಬ್ ರಾಷ್ಟ್ರಗಳು ಈಗ ಬಹಿರಂಗವಾಗಿಯೇ ಇಸ್ರೇಲ್ ಪಡೆಗಳ ದಾಳಿಗಳನ್ನು ಕಟು ಮಾತುಗಳಲ್ಲಿ ಖಂಡಿಸಲಾರಂ ಭಿಸಿರುವುದು ಹಾಗೂ ನೇರವಾಗಿ ಹಮಾಸ್ ಉಗ್ರರಿಗೆ ಶಸ್ತ್ರಾಸ್ತ್ರ ಮತ್ತು ಆರ್ಥಿಕ ನೆರವು ನೀಡತೊಡಗಿರುವುದು ಸಹಜವಾಗಿಯೇ ಆತಂಕವನ್ನು ಹೆಚ್ಚಿಸಿದೆ.
Related Articles
Advertisement
ಅತ್ತ ಪ್ಯಾಲೆಸ್ತೀನ್‌ನ ಹಮಾಸ್ ಉಗ್ರರಿಗೆ ಪ್ರಾದೇಶಿಕ ಬೆಂಬಲ ವ್ಯಕ್ತವಾಗಿರುವುದು ಉದ್ವಿಗ್ನತೆಯನ್ನು ಹೆಚ್ಚಿ ಸಿದೆ. ಮಧ್ಯಪ್ರಾಚ್ಯ ರಾಷ್ಟ್ರಗಳು ಹಮಾಸ್ ಉಗ್ರರಿಗೆ ರಾಜಕೀ ಯ ಮತ್ತು ಆರ್ಥಿಕ ಬೆಂಬಲವನ್ನು ನೀಡುವ ಮೂಲಕ ಪಾಶ್ಚಾತ್ಯ ರಾಷ್ಟ್ರಗಳ ವಿರುದ್ಧ ಸೆಟೆದು ನಿಂತಿವೆ. ಇಷ್ಟು ಮಾತ್ರವಲ್ಲದೆ ಈ ದೇಶಗಳ ನಾಗರಿಕರು ಕೂಡ ಬೀದಿಗೆ ಬಂದು ಪಾಶ್ಚಾತ್ಯ ರಾಷ್ಟ್ರಗಳ ಯುದ್ಧದಾಹ ಮತ್ತು ಅಮಾನವೀಯ ನಡೆಯ ವಿರುದ್ಧ ಘೋಷಣೆಗಳನ್ನು ಕೂಗುವ ಮೂಲಕ ನಮ್ಮನ್ನಾಳುವವರ ಬೆಂಬಲಕ್ಕೆ ನಿಂತಿ ರುವುದು ಸಹಜವಾಗಿಯೇ ಕುತೂಹಲ ಕೆರಳಿಸಿದೆ.
ಮತ್ತೂಂದೆಡೆ ಇಸ್ರೇಲ್-ಹಮಾಸ್ ಉಗ್ರರ ನಡುವಣ ಕಾದಾಟದ ವಿಷಯದಲ್ಲಿ ರಷ್ಯಾ ಮತ್ತು ಚೀನ ಇರಿಸಿರುವ ಹೆಜ್ಜೆಗಳು ಕೂಡ ಅಂತಾರಾಷ್ಟ್ರೀಯ ಮಟ್ಟದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಇಸ್ರೇಲ್‌ನೊಂದಿಗೆ ಉಭಯ ರಾಷ್ಟ್ರಗಳು ಸಾಧಾರಣ ಸಂಬಂಧ ಹೊಂದಿವೆಯಾದರೂ ಪಾಶ್ಚಾತ್ಯ ರಾಷ್ಟ್ರಗಳು ಇಸ್ರೇಲ್‌ನೊಂದಿಗೆ ಕೈಜೋಡಿಸಿರುವುದರಿಂದ ಈ ಎರಡೂ ರಾಷ್ಟ್ರಗಳು ಪರೋಕ್ಷವಾಗಿ ಪ್ಯಾಲೆಸ್ತೀನ್ ಅಂದರೆ ಹಮಾಸ್ ಉಗ್ರರನ್ನು ಬೆಂಬಲಿಸುತ್ತಿವೆ. ಸದ್ಯ ರಷ್ಯಾ, ಉಕ್ರೇನ್ ವಿರುದ್ಧ ನಡೆಸುತ್ತಿರುವ ಯುದ್ಧ 606ನೇ ದಿನವೂ ಮುಂದುವರಿದಿದೆ. ಅಮೆರಿಕ, ಬ್ರಿಟನ್ ಸಹಿತ ಪಾಶ್ಚಾತ್ಯ ರಾಷ್ಟ್ರಗಳು ಉಕ್ರೇನ್‌ನ ಬೆಂಬಲಕ್ಕೆ ನಿಂತಿರುವುದರಿಂದ ಈ ದೇಶಗಳೊಂದಿಗಿನ ರಷ್ಯಾದ ಸಂಬಂಧ ಬಿಗಡಾಯಿಸಿದೆ. ಅಷ್ಟು ಮಾತ್ರವಲ್ಲದೆ ಪಾಶ್ಚಾತ್ಯ ದೇಶಗಳು ರಷ್ಯಾದ ವಿರುದ್ಧ ಹಲವಾರು ಆರ್ಥಿಕ ಮತ್ತು ವಾಣಿಜ್ಯ ನಿರ್ಬಂಧಗಳನ್ನು ಹೇರಿವೆ. ಇವೆಲ್ಲದರ ಪರಿಣಾಮ ರಷ್ಯಾ ಪರೋಕ್ಷವಾಗಿ ಪ್ಯಾಲೆಸ್ತೀನ್‌ನ ಬೆಂಬಲಕ್ಕೆ ನಿಂತಿದೆ.
ಇನ್ನು ಅಮೆರಿಕದೊಂದಿಗಿನ ಚೀನದ ಸಂಬಂಧ ಸಂಪೂರ್ಣ ಹದಗೆಟ್ಟಿದೆ. ತನ್ನ ವಿಸ್ತರಣವಾದದ ವಿರುದ್ಧ ಅಮೆರಿಕ ತನ್ನ ಮಿತ್ರ ರಾಷ್ಟ್ರಗಳೊಡಗೂಡಿ ಚೀನದ ವಿರುದ್ಧ ತೊಡೆತಟ್ಟಿರುವುದರಿಂದ ಸಹಜವಾಗಿಯೇ ಅಮೆರಿಕದ ವಿರುದ್ಧದ ತನ್ನ ತಂತ್ರಗಾರಿಕೆಯನ್ನು ಹೆಣೆಯಲು ಚೀನ, ಇಸ್ರೇಲ್ ಮತ್ತು ಹಮಾಸ್ ಉಗ್ರರ ನಡುವಣ ಸಮರವನ್ನು ಬಳಸಿಕೊಳ್ಳಲು ಹವಣಿಸುತ್ತಿದೆ. ಅಷ್ಟು ಮಾತ್ರವಲ್ಲದೆ ತನ್ನ ಮಹತ್ವಾಕಾಂಕ್ಷೆಯ ರೋಡ್ ಆ್ಯಂಡ್ ಬೆಲ್ಟ್ ಯೋಜನೆಯಲ್ಲೂ ಅರಬ್ ರಾಷ್ಟ್ರಗಳು ಅತ್ಯಂತ ಪ್ರಮುಖ ಪಾತ್ರ ವಹಿಸಿರುವುದರಿಂದ ಚೀನ ಅರಬ್ ರಾಷ್ಟ್ರಗಳಿಗೆ ತನ್ನ ಪರೋಕ್ಷ ಬೆಂಬಲವನ್ನು ನೀಡಿದೆ.
ಇಸ್ರೇಲ್-ಹಮಾಸ್ ಉಗ್ರರ ನಡುವಣ ಸಮರದ ಮೊದಲ ವಾರದಲ್ಲಿ ಜಾಗತಿಕ ಮಟ್ಟದಲ್ಲಿ ಇಸ್ರೇಲ್ ಪರವಾಗಿ ಭಾರೀ ಬೆಂಬಲ ವ್ಯಕ್ತವಾದರೆ ಯುದ್ಧ ಎರ ಡನೇ ವಾರಕ್ಕೆ ಕಾಲಿಡುತ್ತಿದ್ದಂತೆಯೇ ಹಮಾಸ್ ಅದ ರಲ್ಲೂ ಮುಖ್ಯವಾಗಿ ಪ್ಯಾಲೆಸ್ತೀನ್ ಪರವಾಗಿ ಒಂದಷ್ಟು ಪ್ರಬಲ ಧ್ವನಿ ಕೇಳಲಾರಂಭಿಸಿದೆ. ಎಲ್ಲದಕ್ಕಿಂತ ಮುಖ್ಯವಾಗಿ ಮಧ್ಯಪ್ರಾಚ್ಯ ರಾಷ್ಟ್ರಗಳು ಪ್ಯಾಲೆಸ್ತೀನ್‌ಗೆ ಬೆಂಬಲ ವ್ಯಕ್ತಪಡಿಸಿ, ಹಮಾಸ್ ಉಗ್ರರಿಗೆ ರಾಜಕೀಯ ಬೆಂಬಲ, ಆರ್ಥಿಕ ನೆರವು ಮತ್ತು ಶಸ್ತ್ರಾಸ್ತ್ರ ಪೂರೈಸು ತ್ತಿರುವುದರಿಂದ ಯುದ್ಧ ಮತ್ತಷ್ಟು ತೀವ್ರ ಸ್ವರೂಪ ಪಡೆಯುವ ಸಾಧ್ಯತೆ ಇದೆ.
ಇವೆಲ್ಲದರ ನಡುವೆ ಶಾಂತಿ ಮಾತುಕತೆಯ ಪ್ರಯತ್ನಗಳು ಆರಂಭಗೊಂಡಿವೆಯಾದರೂ ಯಾವೊಂದೂ ರಾಷ್ಟ್ರವೂ ಮಧ್ಯಸ್ಥಿಕೆ ವಹಿಸಲು ಆಸಕ್ತಿ ತೋರದಿರುವ ಹಿನ್ನೆಲೆಯಲ್ಲಿ ಇದು ಕೂಡ ರಷ್ಯಾ-ಉಕ್ರೇನ್ ಕದನದ ಮಾದರಿಯಲ್ಲಿ ಸುದೀರ್ಘ ಕಾಲ ಮುಂದುವರಿಯುವ ಲಕ್ಷಣಗಳು ಗೋಚರಿಸುತ್ತಿವೆ. ಇಷ್ಟೆಲ್ಲ ಆಗಿಯೂ ಎರಡನೇ ವಿಶ್ವ ಯುದ್ಧದ ಬಳಿಕ ಇಡೀ ವಿಶ್ವದಲ್ಲಿ ಶಾಂತಿಯನ್ನು ಕಾಯ್ದುಕೊಳ್ಳುವ ಮಹತ್ತರ ಉದ್ದೇ ಶದಿಂದ ಸ್ಥಾಪನೆಯಾದ ವಿಶ್ವ ಸಂಸ್ಥೆಯ ಮಾತಿಗೆ ವಿಶ್ವದ ಯಾವೊಂದೂ ರಾಷ್ಟ್ರಗಳೂ ಕಿವಿಗೊಡದಿರುವುದು ಈ ಸಂಸ್ಥೆಯ ಅಸ್ತಿತ್ವದ ಔಚಿತ್ಯವನ್ನೇ ಪ್ರಶ್ನಿಸುವಂತೆ ಮಾಡಿದೆ.
ಹರೀಶ್ ಕೆ.