ಪ್ಯಾಲೆಸ್ತೇನ್: ಹಮಾಸ್ ಉಗ್ರರ ನಿಯಂತ್ರಣದಲ್ಲಿರುವ ಗಾಜಾಪಟ್ಟಿಯ ಪ್ರದೇಶದಿಂದ ಇಸ್ರೇಲ್ ಮೇಲೆ ಹಲವು ರಾಕೆಟ್ ದಾಳಿ ನಡೆದಿದ್ದು, ಇದರ ಪರಿಣಾಮವಾಗಿ ಇಸ್ರೇಲ್ ಶನಿವಾರ (ಅಕ್ಟೋಬರ್ 07) ಯುದ್ಧ ಘೋಷಿಸಿರುವುದಾಗಿ ವರದಿಯಾಗಿದೆ.
ಇದನ್ನೂ ಓದಿ:Vancouver; ಕೆನಡಾದಲ್ಲಿ ಲಘು ವಿಮಾನ ಪತನ; ಇಬ್ಬರು ಭಾರತೀಯರು ಸೇರಿ ಮೂರು ಸಾವು
ಎಎಫ್ ಪಿ ವರದಿ ಪ್ರಕಾರ, ಗಾಜಾಪಟ್ಟಿಯ ವಿವಿಧ ಸ್ಥಳದಿಂದ ಇಸ್ರೇಲ್ ಮೇಲೆ ನೂರಾರು ರಾಕೆಟ್ ದಾಳಿ ನಡೆದಿದೆ. ಈ ಹಿನ್ನೆಲೆಯಲ್ಲಿ ದೇಶದ ದಕ್ಷಿಣ ಮತ್ತು ಸೆಂಟ್ರಲ್ ಪ್ರದೇಶದಲ್ಲಿ ವಾಸವಾಗಿರುವ ಜನರು ಮನೆಯಿಂದ ಹೊರಗೆ ಬಾರದಂತೆ ಇಸ್ರೇಲ್ ಸೇನಾಪಡೆ ಎಚ್ಚರಿಕೆಯ ಸಂದೇಶ ರವಾನಿಸಿರುವುದಾಗಿ ವರದಿ ತಿಳಿಸಿದೆ.
ಗಾಜಾಪಟ್ಟಿಯಿಂದ ಇಸ್ರೇಲ್ ನೊಳಗೆ ನೂರಾರು ಉಗ್ರರು ಒಳನುಸುಳಿದ್ದು, ಅವರ ಹೆಡೆಮುರಿ ಕಟ್ಟಿಹಾಕುವ ನಿಟ್ಟಿನಲ್ಲಿ ಯುದ್ಧ ಘೋಷಿಸಿರುವುದಾಗಿ ವರದಿ ಹೇಳಿದೆ. ಆದರೆ ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೀಡಿಲ್ಲ ಎಂದು ವರದಿ ತಿಳಿಸಿದೆ.
ರಾಕೆಟ್ ದಾಳಿಯಲ್ಲಿ 70 ವರ್ಷದ ಮಹಿಳೆಯೊಬ್ಬರು ಗಾಯಗೊಂಡಿದ್ದು, ಆಕೆಯ ಸ್ಥಿತಿ ಚಿಂತಾಜನಕವಾಗಿದೆ. ಸೆಂಟ್ರಲ್ ಇಸ್ರೇಲ್ ನಲ್ಲಿ ಕಟ್ಟಡವೊಂದರ ಮೇಲೆ ರಾಕೆಟ್ ದಾಳಿ ನಡೆದ ಪರಿಣಾಮ ವ್ಯಕ್ತಿಯೊಬ್ಬರು ಅವಶೇಷಗಳಡಿ ಸಿಲುಕಿರುವುದಾಗಿ ಸೇನಾ ಮೂಲಗಳು ತಿಳಿಸಿವೆ.
ಗಾಜಾಪಟ್ಟಿಯನ್ನು ಹಮಾಸ್ ಉಗ್ರರು ತಮ್ಮ ಸುಪರ್ದಿಗೆ ತೆಗೆದುಕೊಂಡ ನಂತರ 2007ರಿಂದ ಇಸ್ರೇಲ್ ಗಾಜಾಪಟ್ಟಿಯ ಮೇಲೆ ದಿಗ್ಭಂಧನ ವಿಧಿಸಿತ್ತು. ಆ ನಂತರ ಪ್ಯಾಲೆಸ್ತೇನ್ ಉಗ್ರರು ಮತ್ತು ಇಸ್ರೇಲ್ ನಡುವೆ ಹಲವು ಬಾರಿ ಯುದ್ಧ ನಡೆದಿತ್ತು.