Advertisement

Hezbollah ಮುಖ್ಯಸ್ಥ ಅಡಗಿದ್ದ ಬಂಕರ್‌ನೊಳಗೆ 500 ಮಿ. ಡಾಲರ್‌ ನಗದು,ಚಿನ್ನ ಪತ್ತೆ! ಇಸ್ರೇಲ್

03:53 PM Oct 22, 2024 | Team Udayavani |

ಭಯೋತ್ಪಾದಕ ಸಂಘಟನೆ ಹೆಜ್ಬುಲ್ಲಾ(Hezbollah) ಮುಖ್ಯಸ್ಥ ಹಸ್ಸನ್‌ ನಸ್ರಲ್ಲಾ(Hassan Nasrallah) ಅಡಗಿದ್ದ ರಹಸ್ಯ ಬಂಕರ್‌ ನೊಳಗೆ 500 ಮಿಲಿಯನ್‌ ಡಾಲರ್‌ ನಗದು ಮತ್ತು ಅಪಾರ ಪ್ರಮಾಣದ ಚಿನ್ನ ಪತ್ತೆಯಾಗಿರುವುದಾಗಿ ಇಸ್ರೇಲ್‌ ತಿಳಿಸಿದೆ.

Advertisement

ಬೈರುತ್‌ ನ ಆಸ್ಪತ್ರೆಯ ಕೆಳಭಾಗದಲ್ಲಿ ರಹಸ್ಯವಾಗಿ ನಿರ್ಮಿಸಲಾಗಿದ್ದ ಬೃಹತ್‌ ಬಂಕರ್‌ ನಲ್ಲಿ ಹಸ್ಸನ್‌ ನಸ್ರಲ್ಲಾ ಅಡಗಿಕೊಳ್ಳಲು ಬಳಸುತ್ತಿದ್ದ. ಬಂಕರ್‌ ನ ಆಕಾರದ ಬಗ್ಗೆ ಗ್ರಾಫಿಕ್‌ ಫೋಟೊ ಮತ್ತು ವಿಡಿಯೊವನ್ನು ಇಸ್ರೇಲ್‌ ಡಿಫೆನ್ಸ್‌ ಫೋರ್ಸ್‌ ನ ವಕ್ತಾರ ಅಡ್ಮಿರಲ್‌ ಡೇನಿಯಲ್‌ ಹಗಾರಿ ಬಹಿರಂಗಪಡಿಸಿದ್ದಾರೆ.

ಈ ಬಂಕರ್‌ ಅನ್ನು ಉದ್ದೇಶಪೂರ್ವಕವಾಗಿ ಆಸ್ಪತ್ರೆಯ ಕೆಳಭಾಗದಲ್ಲಿ ನಿರ್ಮಿಸಲಾಗಿದ್ದು, ಅಲ್ಲಿ ಅರ್ಧ ಬಿಲಿಯನ್‌ ಡಾಲರ್‌ ಗಿಂತಲೂ ಹೆಚ್ಚು ನಗದು, ಚಿನ್ನಾಭರಣವನ್ನು ಕೂಡಿಡಲಾಗಿದೆ. ಬಹುಶಃ ಈ ಹಣ ಲೆಬನಾನ್‌ ನಿವಾಸಿಗಳ ಪುನರ್ವಸತಿಗೆ ಬಳಸಬೇಕಾಗಿತ್ತು. ಆದರೆ ಅದನ್ನು ಹೆಜ್ಬುಲ್ಲಾ ಉಗ್ರರ ಪುನರ್ವಸತಿಗೆ ಬಳಸಲಾಗುತ್ತಿತ್ತು ಎಂದು ಹಗಾರಿ ವಿವರಿಸಿದ್ದಾರೆ.

ಹೆಜ್ಬುಲ್ಲಾ ವಿರುದ್ಧ ಲೆಬನಾನ್‌ ಅಧಿಕಾರಿಗಳು ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿರುವ ಹಗಾರಿ, ಅವರಿಗೆ ನೀಡಿರುವ ಸೌಲಭ್ಯವನ್ನು ಪರಿಶೀಲಿಸುವಂತೆ ತಿಳಿಸಿದ್ದಾರೆ. ನಾನು ಲೆಬನಾನ್‌ ಸರ್ಕಾರ, ಲೆಬನಾನ್‌ ಅಧಿಕಾರಿಗಳು ಹಾಗೂ ಅಂತಾರಾಷ್ಟ್ರೀಯ ಸಂಸ್ಥೆಗಳಿಗೆ ಮನವಿ ಮಾಡುತ್ತಿದ್ದೇನೆ, ಹೆಜ್ಬುಲ್ಲಾ ಹಣವನ್ನು ಭಯೋತ್ಪಾದನೆಗೆ ಬಳಸಲು ಅವಕಾಶ ನೀಡಬೇಡಿ, ಅಷ್ಟೇ ಅಲ್ಲ ಇಸ್ರೇಲ್‌ ಮೇಲೆ ದಾಳಿ ನಡೆಸಲು ಅವಕಾಶ ನೀಡಬಾರದು ಎಂದು ತಿಳಿಸಿದ್ದಾರೆ.

Advertisement

ಹೆಜ್ಬುಲ್ಲಾ ಮತ್ತು ಹಮಾಸ್‌ ವಿರುದ್ಧ ಆರೋಪಿಸಿರುವ ಇಸ್ರೇಲ್‌ ರಕ್ಷಣಾ ಪಡೆ, ಆಸ್ಪತ್ರೆ, ಶಾಲೆ ಸೇರಿದಂತೆ ಸೂಕ್ಷ್ಮ ಪ್ರದೇಶಗಳನ್ನು ತಮ್ಮ ಶಸ್ತ್ರಾಸ್ತ್ರ ಅಡಗಿಸಿಡಲು ಮತ್ತು ಉಗ್ರರಿಗೆ ರಕ್ಷಣೆ ಒದಗಿಸಲು ಬಳಸಿಕೊಂಡಿರುವುದಾಗಿ ತಿಳಿಸಿದೆ.

ಲೆಬನಾನ್‌ ಜನರು ಮತ್ತು ಇರಾನ್‌ ಆಡಳಿತ ಎರಡೂ ಕೂಡಾ ಹೆಜ್ಬುಲ್ಲಾದ ಪ್ರಮುಖ ಆದಾಯದ ಮೂಲಗಳಾಗಿವೆ ಎಂದು ಹಗಾರಿ ಹೇಳಿದ್ದು, ಲೆಬನಾನ್‌, ಸಿರಿಯಾ, ಯೆಮೆನ್‌, ಟರ್ಕಿಯಲ್ಲಿ ಹೆಜ್ಬುಲ್ಲಾ ಫ್ಯಾಕ್ಟರಿಗಳನ್ನು ನಡೆಸುತ್ತಿದ್ದು, ಇದರ ಮೂಲಕ ಆದಾಯ ಗಳಿಸಿ ಭಯೋತ್ಪಾದಕ ಚಟುವಟಿಕೆಗಳಿಗೆ ಬೆಂಬಲ ನೀಡಲು ಹಣವನ್ನು ಬಳಸುತ್ತಿರುವುದಾಗಿ ಹಗಾರಿ ತಿಳಿಸಿದ್ದಾರೆ.

ಈ ಬಂಕರ್‌ ಎರಡು ಇತರ ಕಟ್ಟಡದ ಜೊತೆಗೆ ಸಂಪರ್ಕ ಹೊಂದಿದ್ದು, ಅದನ್ನು ಪ್ರವೇಶಿಸಲು ಮತ್ತು ಹೊರಹೋಗಲು ಬಳಸಲಾಗುತ್ತಿತ್ತು. ಬಂಕರ್‌ ಶಸ್ತ್ರಸಜ್ಜಿತ ಬೆಡ್‌ ಗಳು, ಕೋಣೆಗಳನ್ನು ಹೊಂದಿದ್ದು, ಯುದ್ಧ ಕಾರ್ಯಾಚರಣೆಗೆ ಕಮಾಂಡ್‌ ನೀಡುವ ಸೆಂಟರ್‌ ಗಳು ಕೂಡಾ ಇದ್ದಿರುವುದಾಗಿ ಇಸ್ರೇಲ್‌ ತಿಳಿಸಿದೆ.

“ ನಮ್ಮ ಯುದ್ಧ ಲೆಬನಾನ್‌ ಜನರ ವಿರುದ್ಧವಲ್ಲ, ಆದರೆ ಕೊಲೆ*ಗಡುಕ ಭಯೋತ್ಪಾದಕ ಸಂಘಟನೆ ವಿರುದ್ಧ ಮುಂದುವರಿಯಲಿದೆ. ನಾವು ಹೆಜ್ಬುಲ್ಲಾದ ಹೆಡೆಮುರಿ ಕಟ್ಟಿ ತಕ್ಕ ಪಾಠ ಕಲಿಸುವುದಾಗಿ ಇಸ್ರೇಲ್‌ ಹೇಳಿದೆ.‌

Advertisement

Udayavani is now on Telegram. Click here to join our channel and stay updated with the latest news.

Next