ಕೈರೋ/ಕ್ವೆಟ್ಟಾ : ಇಸ್ಲಾಮಿಕ್ ಉಗ್ರ ಸಂಘಟನೆ ಐಸಿಸ್ ಬಲೂಚಿಸ್ಥಾನದಲ್ಲಿ ಇಬ್ಬರು ಚೀನೀ ಶಿಕ್ಷಕರನ್ನು ಅಪಹರಿಸಿ ಕೊಂದಿರುವುದಾಗಿ ಉಗ್ರ ಸಮೂಹದ ಅಮಾಕ್ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಪಾಕಿಸ್ಥಾನದಲ್ಲಿ ನಿರ್ಮಾಣ ಕಾಮಗಾರಿಗಳಲ್ಲಿ ತೊಡಗಿಕೊಂಡಿರುವ ಚೀನದ ಕಾರ್ಮಿಕರಿಗೆ ರಕ್ಷಣೆ ನೀಡುವ ಇಸ್ಲಾಮಾಬಾದ್‌ನ ಪ್ರಯತ್ನಗಳಿಗೆ ಇದು ಭಾರೀ ದೊಡ್ಡ ಹೊಡೆತವಾಗಿ ಪರಿಣಮಿಸಿದೆ.
ಚೀನದ ಶಿಕ್ಷಕರಿಬ್ಬರ ಅಪಹರಣ ಹಾಗೂ ಕೊಲೆಯ ಬಗ್ಗೆ ಪಾಕಿಸ್ಥಾನದ ಒಳಾಡಳಿತ ಸಚಿವಾಲಯ ಈ ತನಕ ಯಾವುದೇ ಪ್ರತಿಕ್ರಿಯೆ, ಹೇಳಿಕೆ ನೀಡಿಲ್ಲ. ಕಳೆದ ಮೇ 24ರಂದು ಬಲೂಚ್ ಪ್ರಾಂತ್ಯದ ಕ್ವೆಟ್ಟಾದಲ್ಲಿ ಚೀನದ ಇಬ್ಬರು ಶಿಕ್ಷಕರನ್ನು ಇಸ್ಲಾಮಿಕ್ ಉಗ್ರರು ಅಪಹರಿಸಿ ಬಳಿಕ ಹತ್ಯೆಗೈದಿದ್ದರು.
ಈ ಘಟನೆಯ ಬಗ್ಗೆ ಚೀನದ ವಿದೇಶ ಸಚಿವಾಲಯ ಪ್ರತಿಕ್ರಿಯಿಸಿದ್ದು “ಈ ಬಗ್ಗೆ ನಮಗೆ ತೀವ್ರವಾದ ಕಳವಳವಿದೆ; ಘಟನೆಯ ಮಾಹಿತಿಯನ್ನು ಪರಾಂಬರಿಸಲು ನಾವು ಯತ್ನಿಸುತ್ತಿದ್ದೇವೆ’ ಎಂದು ಹೇಳಿದೆ.
ಪೊಲೀಸ್ ಸಮವಸ್ತ್ರ ಧರಿಸಿದ್ದ ಇಸ್ಲಾಮಿಕ್ ಉಗ್ರರು ಮೇ 24ರಂದು ಪ್ರಾಂತೀಯ ರಾಜಧಾನಿಯಾಗಿರುವ ಕ್ವೆಟ್ಟಾದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಇಬ್ಬರು ಚೀನೀ ಭಾಷಾ ಶಿಕ್ಷಕರನ್ನು ಅಪಹರಿಸಿ ಕೊಂದಿದ್ದರು. ಪಾಕಿಸ್ಥಾನದ ಆರ್ಥಿಕಾಭಿವೃದ್ದಿಗಾಗಿ ಚೀನ ಬೆಲ್ಟ್ ಆ್ಯಂಡ್ ರೋಡ್ ಯೋಜನೆಯನ್ನು ಕಾರ್ಯಗತಗೊಳಿಸುತ್ತಿದ್ದು ಅದಕ್ಕಾಗಿ 57 ಶತಕೋಟಿ ಡಾಲರ್ ಹಣವನ್ನು ವ್ಯಯಿಸುತ್ತಿದೆ.