ನವದೆಹಲಿ:ರಾಷ್ಟ್ರ ರಾಜಧಾನಿ ದೆಹಲಿಯ ರಿಂಗ್ ರೋಡ್ ಸಮೀಪ ಶುಕ್ರವಾರ (ಆಗಸ್ಟ್ 21, 2020) ತಡರಾತ್ರಿ ದೀರ್ಘ ಗುಂಡಿನ ಚಕಮಕಿ ನಂತರ ಐಸಿಸ್ ಸಂಘಟನೆಯ ಉಗ್ರ ಅಬು ಯೂಸೂಫ್ ಖಾನ್ ಎಂಬಾತನನ್ನು ಐಇಡಿ, ಗನ್ ಸಹಿತ ದೆಹಲಿ ಸ್ಪಷೆಲ್ ಸೆಲ್ ಪೊಲೀಸರು ಬಂಧಿಸಿರುವುದಾಗಿ ವರದಿ ತಿಳಿಸಿದೆ.
ಐಸಿಸ್ ಸಂಘಟನೆಯ ಉಗ್ರನನ್ನು ಅಬು ಯೂಸೂಫ್ ಖಾನ್ ಎಂದು ಗುರುತಿಸಲಾಗಿದೆ. ದೆಹಲಿಯ ರಿಂಗ್ ರಸ್ತೆ ನಡುವಿನ ಕರೋಲ್ ಬಾಗ್ ಮತ್ತು ದೌಲ ಕುಆದಲ್ಲಿ ಭಾರೀ ಗುಂಡಿನ ಚಕಮಕಿಯ ನಂತರ ಪೊಲೀಸರು ಯೂಸೂಫ್ ನನ್ನು ಬಂಧಿಸಿ ಪಿಸ್ತೂಲ್ ಮತ್ತು ಐಇಡಿಯನ್ನು ವಶಪಡಿಸಿಕೊಂಡಿರುವುದಾಗಿ ವರದಿ ಹೇಳಿದೆ.
ದೌಲಾ ಕುಆ ಪ್ರದೇಶದಲ್ಲಿ ಗುಂಡಿನ ಚಕಮಕಿ ಬಳಿ ನಮ್ಮ ವಿಶೇಷ ಪೊಲೀಸ್ ತಂಡ ಐಇಡಿ ಸಹಿತ (ಸುಧಾರಿತ ಸ್ಫೋಟಕ ಸಾಧನ) ಐಸಿಸ್ ಉಗ್ರನೊಬ್ಬನನ್ನು ಸೆರೆ ಹಿಡಿದಿದ್ದಾರೆ ಎಂದು ದೆಹಲಿ ಡೆಪ್ಯುಟಿ ಕಮಿಷನರ್ ಪ್ರಮೋದ್ ಸಿಂಗ್ ಕುಶ್ವಾಹಾ ಸುದ್ದಿಗಾರರ ಜತೆ ಮಾತನಾಡುತ್ತ ತಿಳಿಸಿದ್ದಾರೆ.
ದೆಹಲಿಯಲ್ಲಿ ಸೆರೆಸಿಕ್ಕ ಇಸ್ಲಾಮಿಕ್ ಸ್ಟೇಟ್ ಟೆರರಿಸ್ಟ್ ಯೂಸೂಫ್ ಗೆ ಪ್ರಮುಖ ಗಣ್ಯರ ಮೇಲಿನ ದಾಳಿ ಮುಖ್ಯ ಗುರಿಯಾಗಿತ್ತು ಎಂದು ಮೂಲಗಳು ತಿಳಿಸಿವೆ. ಅಬೂ ಯೂಸೂಫ್ ದೆಹಲಿಯಲ್ಲಿರುವ ಕೆಲವು ಸಹವರ್ತಿಗಳ ಜತೆ ಕಾರ್ಯನಿರ್ವಹಿಸುತ್ತಿದ್ದ. ಇದೀಗ ಪೊಲೀಸರು ಈತನ ಸಹಚರರ ಪತ್ತೆಗಾಗಿ ಜಾಲ ಬೀಸಿದ್ದಾರೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.
ಅಬು ಯೂಸೂಫ್ ಉತ್ತರಪ್ರದೇಶದ ಬಲರಾಮ್ ಪುರ್ ನಿವಾಸಿ, ಅಲ್ಲಿಯೂ ಪೊಲೀಸರು ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿರುವುದಾಗಿ ವರದಿ ತಿಳಿಸಿದೆ.
ಈತ ದೆಹಲಿಯ ಪ್ರಮುಖ ಸ್ಥಳಗಳ ಮೇಲೆ ದಾಳಿ ನಡೆಸುವ ಸಂಚನ್ನು ಯೂಸೂಫ್ ಹೊಂದಿದ್ದು, ಅದಕ್ಕಾಗಿ ಬೇಕಾದ ಸಿದ್ಧತೆ ಮಾಡಿಕೊಂಡಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ. ತನಿಖೆಯ ನಂತರ ಹೆಚ್ಚಿನ ಮಾಹಿತಿ ತಿಳಿದುಬರಲಿದೆ ಎಂದು ವಿವರಿಸಿದ್ದಾರೆ.