ನವದೆಹಲಿ: ದೇಶದಲ್ಲಿ ಆತ್ಮಾಹುತಿ ದಾಳಿಗೆ ಸಂಚು ರೂಪಿಸಿದ್ದ ಶಂಕಿತ ಐಸಿಸ್ ಉಗ್ರ ದಂಪತಿಯನ್ನು ದೆಹಲಿ ಪೊಲೀಸರ ವಿಶೇಷ ದಳದ ಅಧಿಕಾರಿಗಳು ಬಂಧಿಸಿದ್ದಾರೆ.
ರಾಷ್ಟ್ರ ರಾಜಧಾನಿಯಲ್ಲಿರುವ ಓಕ್ಲಾ ಪ್ರದೇಶದಿಂದ ಇವರಿಬ್ಬರನ್ನು ಬಂಧಿಸಲಾಗಿದ್ದು, ಬಂಧಿತರನ್ನು ಜಹನ್ ಝೆಬ್ ಸಮಿ ಮತ್ತು ಆತನ ಪತ್ನಿ ಹಿಂಡಾ ಬಶೀರ್ ಬೇಗ್ ಎಂದು ಗುರುತಿಸಲಾಗಿದೆ.
ಇಬ್ಬರೂ ಬಂಧಿತರು ಅಫ್ಘಾನಿಸ್ಥಾನದಲ್ಲಿದ್ದ ಐ.ಎಸ್.ಕೆ.ಪಿ. (ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಆ್ಯಂಡ್ ಲೆವಂಟ್-ಖೊರಾಸಮ್) ಸಂಘಟನೆಯ ಹಲವು ಪ್ರಮುಖರೊಂದಿಗೆ ಸಂಪರ್ಕದಲ್ಲಿದ್ದರು ಎಂಬ ಮಾಹಿತಿಯನ್ನು ಪೊಲೀಸರು ನೀಡಿದ್ದಾರೆ.
ಮಾತ್ರವಲ್ಲದೇ ರಾಷ್ಟ್ರ ರಾಜಧಾನಿಯ ವಿವಿಧ ಕಡೆಗಳಲ್ಲಿ ಮುಸ್ಲಿಂ ಯುವಕರನ್ನು ಪ್ರಚೋದಿಸಿ ಉಗ್ರದಾಳಿಗೆ ಸಂಚನ್ನು ರೂಪಿಸುತ್ತಿದ್ದರೆಂಬ ಆಘಾತಕಾರಿ ಮಾಹಿತಿಯನ್ನೂ ಸಹ ಪೊಲೀಸರು ಇದೇ ಸಂದರ್ಭದಲ್ಲಿ ಹೊರಗೆಡಹಿದ್ದಾರೆ. ಬಂಧಿತರಿಂದ ಉಗ್ರ ಕೃತ್ಯಕ್ಕೆ ಪ್ರೇರಣೆ ನೀಡುವ ಹಲವು ವಸ್ತುಗಳನ್ನು ಇದೇ ಸಂದರ್ಭದಲ್ಲಿ ವಶಪಡಿಸಿಕೊಳ್ಳಲಾಗಿದೆ.
ಈ ದಂಪತಿ ‘ಇಂಡಿಯನ್ ಮುಸ್ಲಿಂ ಯನೈಟ್’ ಎಂಬ ಹೆಸರಿನ ಫೇಸ್ಬುಕ್ ಪುಟವೊಂದನ್ನೂ ಸಹ ನಡೆಸುತ್ತಿದ್ದರು ಮತ್ತು ಈ ಸಾಮಾಜಿಕ ಜಾಲತಾಣ ವೇದಿಕೆ ಮೂಲಕ ಪೌರತ್ವ ತಿದ್ದುಪಡಿ ಕಾಯ್ದೆ, ಎನ್.ಆರ್.ಸಿ. ಹಾಗೂ ಎನ್.ಪಿ.ಎ. ವಿರುದ್ದ ಹೆಚ್ಚೆಚ್ಚು ಜನರನ್ನು ಒಗ್ಗೂಡಿಸುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಈ ವರದಿಯನ್ನು ದೆಹಲಿಯ ಉಪ ಪೊಲೀಸ್ ಕಮಿಷನರ್ ಪ್ರಮೋದ್ ಸಿಂಗ್ ಕುಶ್ವಾಹ ಅವರು ಖಚಿತಪಡಿಸಿದ್ದಾರೆ.