Advertisement
ಕಳೆದ ಸುಮಾರು ಒಂದು ದಶಕದಿಂದ ಲೋಕಕಂಟಕನಾಗಿ ಮೆರೆಯುತ್ತಿದ್ದ ಐಸಿಸ್ ಉಗ್ರ ಸಂಘಟನೆಯ ಸ್ಥಾಪಕ ಅಬು ಬಕ್ರ್ ಅಲ್ ಬಾಗ್ಧಾದಿಯನ್ನು ಸಾಯಿಸುವ ಮೂಲಕ ಅಮೆರಿಕ ಜಗತ್ತಿಗೆ ನೆಮ್ಮದಿ ನೀಡಿದೆ. ಪಾಕಿಸ್ಥಾನದಲ್ಲಿ ಅಡಗಿಕೊಂಡಿದ್ದ ಅಲ್-ಕಾಯಿದಾ ಸ್ಥಾಪಕ ಉಸಾಮ ಬಿನ್ ಲಾದೆನನ್ನು ಬೇಟೆಯಾಡಿದ ರೀತಿಯಲ್ಲೇ ಅಮೆರಿಕದ ಯೋಧರು ಬಾಗ್ಧಾದಿಯನ್ನು ಬೇಟೆಯಾಡಿದ್ದಾರೆ. ಈ ಮಾದರಿಯ ಕಾರ್ಯಾಚರಣೆಯಲ್ಲಿ ಅಮೆರಿಕದ ಯೋಧರಿಗೆ ಅವರೇ ಸಾಟಿ. ಮಾಹಿತಿ ಕಲೆ ಹಾಕುವುದು, ಕಾರ್ಯಾಚರಣೆಯ ರಹಸ್ಯ ಕಾಪಾಡುವುದು, ಕಾರ್ಯಾ ಚರಣೆಯ ತಯಾರಿ ನಡೆಸುವುದು ಹೀಗೆ ಎಲ್ಲ ರೀತಿಯಲ್ಲೂ ಅಮೆರಿಕದ ಯೋಧರು ಪರಿಪಕ್ವತೆಯನ್ನು ಕಾಯ್ದು ಕೊಂಡಿದ್ದರು. ಸುಮಾರು ಒಂದೂವರೆ ವರ್ಷದ ಹಿಂದೆಯೇ ಬಾಗ್ಧಾದಿ ಸಿರಿ ಯಾದ ವಾಯವ್ಯ ಭಾಗದಲ್ಲಿ ಅಡಗಿ ಕೊಂಡಿರುವ ಮಾಹಿತಿ ಸಿಕ್ಕಿದ ಬಳಿಕ ಗುಪ್ತಚರ ಪಡೆ ನಿರಂತರವಾಗಿ ಅವನ ಬೆನ್ನು ಬಿದ್ದಿತ್ತು. ಕೊನೆಗೂ ಶನಿವಾರ ಈ ನರರೂಪದ ರಕ್ಕಸನ ಕತೆ ಮುಗಿದಿದ್ದು, ಜಗತ್ತನ್ನು ದೊಡ್ಡದೊಂದು ಸಂಕಟ ದಿಂದ ಪಾರು ಮಾಡಿದ ಅಮೆರಿಕ ಯೋಧರ ಶೌರ್ಯವನ್ನು ಮೆಚ್ಚಲೇ ಬೇಕು.
Related Articles
Advertisement
ಐಸಿಸ್ ಸ್ಥಾಪಕ ಹತ್ಯೆಯಾಗಿರುವುದರಿಂದ ಈ ಸಂಘಟನೆ ದುರ್ಬಲಗೊಳ್ಳುವುದು ನಿಶ್ಚಿತ. ಜಿಹಾದಿ ಸಂಘಟನೆಗಳಿಗೆ ಬಾಗ್ಧಾದಿ ಹತ್ಯೆ ದೊಡ್ಡ ಹೊಡೆತ ನೀಡಿದೆ. ಆದರೆ ಇಲ್ಲಿಗೆ ಐಸಿಸ್ ನಾಮಾವಶೇಷವಾಗುತ್ತದೆ ಎನ್ನುವಂತಿಲ್ಲ. ಏಕೆಂದರೆ ಬಾಗ್ಧಾದಿ ಬಿತ್ತಿದ ವಿಷ ಬೀಜ ಜಗತ್ತಿನೆಲ್ಲೆಡೆ ಮೊಳಕೆಯೊಡೆದಿದೆ. ಅದರ ಉಗ್ರ ಸಿದ್ಧಾಂತ ಇನ್ನೂ ಜೀವಂತವಾಗಿದೆ. ಅದು ಇನ್ನೊಂದು ರೂಪದಲ್ಲಿ ಮೊಳಕೆಯೊಡೆಯಬಹುದು. ಈಗಲೂ ಸುಮಾರು 18,000 ಐಸಿಸ್ ಉಗ್ರರು ಜೀವಂತವಾಗಿದ್ದಾರೆ ಎಂಬ ಮಾಹಿತಿ ಕಳೆದ ತಿಂಗಳಷ್ಟೇ ಬಹಿರಂಗವಾಗಿತ್ತು. ಅಲ್ಲದೆ ಐಸಿಸ್‌ನ ನೂರಾರು ಸುಪ್ತ ಘಟಕಗಳು ಈಗಲೂ ಸಕ್ರಿಯವಾಗಿವೆ. ಕೆಲ ಸಮಯದ ಹಿಂದೆ ಶ್ರೀಲಂಕದಲ್ಲಿ ನಡೆದ ಸರಣಿ ಬಾಂಬ್ ಸ್ಫೋಟವೇ ಈ ಸಂಘಟನೆ ಎಷ್ಟು ಅಪಾಯಕಾರಿ ಎನ್ನುವುದಕ್ಕೊಂದು ಉದಾಹರಣೆ. ಬಾಗ್ಧಾದಿ ಸತ್ತರೂ ಐಸಿಸ್‌ನ ಅಪಾಯ ಇನ್ನೂ ದೂರವಾಗಿಲ್ಲ. ಉಗ್ರ ಸಂಘಟನೆಗಳ ಸೈದ್ಧಾಂತಿಕ ನೆಲೆಗಟ್ಟನ್ನು ಸೋಲಿಸಿದಾಗಲೇ ಅವುಗಳಿಗೆ ಅಂತ್ಯ.