Advertisement

ರಿಶಾನ್‌, ಹುಜೈರ್‌ಗೆ ಕ್ರಿಪ್ಟೋ ವ್ಯಾಲೆಟ್‌ನಲ್ಲಿ ಐಸಿಸ್‌ ದೇಣಿಗೆ ನೀಡಿಕೆ

01:33 AM Jan 07, 2023 | Team Udayavani |

ಮಂಗಳೂರು/ಶಿವಮೊಗ್ಗ: ಐಸಿಸ್‌ ಉಗ್ರ ಸಂಘಟನೆಯ ಚಟುವಟಿಕೆಗಳಲ್ಲಿ ತೊಡಗಿದ್ದ ಆರೋಪ ದಲ್ಲಿ ಎನ್‌ಐಎಯಿಂದ ಬಂಧಿಸಲಾದ ಎಂಜಿನಿಯರಿಂಗ್‌ ವಿದ್ಯಾರ್ಥಿ ರಿಶಾನ್‌ ತಾಜುದ್ದೀನ್‌ ಶೇಖ್‌ ಮತ್ತು ಹುಜೈರ್‌ ಫ‌ರ್ಹಾನ್‌ ಬೇಗ್‌ ಐಸಿಸ್‌ನಿಂದ ಕ್ರಿಪ್ಟೋ ವ್ಯಾಲೆಟ್‌ಗಳ ಮೂಲಕ ದೇಣಿಗೆ ಪಡೆಯುತ್ತಿದ್ದುದು ಬೆಳಕಿಗೆ ಬಂದಿದೆ.

Advertisement

ಆರೋಪಿಗಳು ನಿಷೇಧಿತ ಐಸಿಸ್‌ನ ನಿರ್ವಾಹಕನಿಂದ ದೇಣಿಗೆಯಾಗಿ ಹಣ ಪಡೆದು ದೇಶದಲ್ಲಿ ಐಸಿಸ್‌ ಚಟುವಟಿಕೆ ವಿಸ್ತರಿಸಲು ಸಂಚು ರೂಪಿಸಿದ್ದರು. ವಾಹನ, ಸಂಸ್ಥೆಗಳು, ಮದ್ಯದ ಅಂಗಡಿ, ಗೋದಾಮು, ಟ್ರಾನ್ಸ್‌ ಫಾರ್ಮರ್‌ ಮೊದಲಾದವುಗಳನ್ನು ಗುರಿಯಾಗಿಸಿ ವಿಧ್ವಂಸಕ ಕೃತ್ಯ ನಡೆಸಲು ಯೋಜಿಸಿದ್ದರು ಎಂದು ಎನ್‌ಐಎ ತಿಳಿಸಿದೆ.

ವಿವಿಧೆಡೆ ಶೋಧ; ಮುಂದುವರಿದ ತನಿಖೆ
ಎನ್‌ಐಎ ಗುರುವಾರ ಮಂಗಳೂರು, ಶಿವಮೊಗ್ಗ, ಉಡುಪಿ, ದಾವಣಗೆರೆ ಹಾಗೂ ಬೆಂಗಳೂರಿನಲ್ಲಿ ದಾಳಿ ನಡೆಸಿತ್ತು. ರಿಶಾನ್‌ ತಾಜುದ್ದೀನ್‌ ಶೇಖ್‌ ಬ್ರಹ್ಮಾವರ ವಾರಂಬಳ್ಳಿ ನಿವಾಸಿಯಾಗಿದ್ದು, ಮಂಗಳೂರು ಕೊಣಾಜೆ ಸಮೀಪದ ಖಾಸಗಿ ಎಂಜಿನಿಯರಿಂಗ್‌ ಕಾಲೇಜಿನ ವಿದ್ಯಾರ್ಥಿ. ಈತ ಈಗಾಗಲೇ ಎನ್‌ಐಎ ವಶದಲ್ಲಿರುವ ಮಾಝ್ ಮುನೀರ್‌ನ ಸಹವರ್ತಿ. ಮಾಝ್ ಮುನೀರ್‌ ಕೂಡ ಇದೇ ಕಾಲೇಜಿನ ವಿದ್ಯಾರ್ಥಿಯಾಗಿದ್ದ. ರಿಶಾನ್‌ ಮೇಲೆ ಮುನೀರ್‌ ಮೂಲಭೂತವಾದಿತ್ವ ವಿಚಾರಗಳ ಬಗ್ಗೆ ಬಹುವಾಗಿ ಪ್ರಭಾವ ಬೀರಿ ಪ್ರೇರೇಪಿಸಿದ್ದ ಎಂದು ಎನ್‌ಐಎ ಮೂಲಗಳು ತಿಳಿಸಿವೆ. ಹುಜೈರ್‌ ಫ‌ರ್ಹಾನ್‌ ಶಿವಮೊಗ್ಗ ಜಿಲ್ಲೆಯ ಟಿಪ್ಪು ಸುಲ್ತಾನ್‌ ನಗರದ ನಿವಾಸಿ. ಎನ್‌ಐಎಯು ಆರೋಪಿಗಳ ಮನೆಯಿಂದ ಡಿಜಿಟಲ್‌ ಉಪಕರಣಗಳು, ಚಟುವಟಿಕೆಗಳನ್ನು ಸಾಕ್ಷೀಕರಿಸುವ ಪೂರಕ ದಾಖಲೆಗಳನ್ನು ಜಪ್ತಿ ಮಾಡಿದೆ.

ಫ್ಲ್ಯಾಟ್‌ನಲ್ಲೇ ಇರುತ್ತಿದ್ದ
ರಜಾದಿನಗಳಲ್ಲಿ ಮತ್ತು ವಾರಾಂತ್ಯ ವಾದ ಶನಿವಾರ-ರವಿವಾರ ವಾರಂಬಳ್ಳಿಯ ಫ್ಲ್ಯಾಟ್‌ಗೆ ಬರುತ್ತಿದ್ದ ರಿಶಾನ್‌ ಹೆಚ್ಚಾಗಿ ಒಳಗೆಯೇ ಇರುತ್ತಿದ್ದ, ಹೊರಗೆ ಹೆಚ್ಚು ಕಾಣಿಸಿಕೊಳ್ಳುತ್ತಿರಲಿಲ್ಲ, ಫ್ಲ್ಯಾಟ್‌ನ ಯುವಕರೊಂದಿಗೆ ಮಾತ್ರ ಕಾಲ ಕಳೆಯುತ್ತಿದ್ದ ರಿಶಾನ್‌ ಸ್ಥಳೀಯರ ಜತೆ ಹೆಚ್ಚು ಬೆರೆಯುತ್ತಿರಲಿಲ್ಲ ಎಂದು ಸ್ಥಳೀಯ ಮೂಲಗಳು ತಿಳಿಸಿವೆ.

ಮಾಝ್-ಶಾರೀಕ್‌ ನಿಕಟವರ್ತಿಗಳು
ಮಂಗಳೂರಿನ ಕಂಕನಾಡಿ ಬಳಿ 2022ರ ನ. 19ರಂದು ಸಂಭವಿಸಿದ ಕುಕ್ಕರ್‌ ಬಾಂಬ್‌ ಸ್ಫೋಟದಲ್ಲಿ ಗಂಭೀರವಾಗಿ ಗಾಯಗೊಂಡು ಸದ್ಯ ಎನ್‌ಐಎ ವಶದಲ್ಲಿರುವ ಮಹಮ್ಮದ್‌ ಶಾರೀಕ್‌ ಮತ್ತು ಮಾಝ್ ಮುನೀರ್‌ ಸಹವರ್ತಿಗಳು. 2022 ಸೆಪ್ಟಂಬರ್‌ನಲ್ಲಿ ಶಿವಮೊಗ್ಗದ ತುಂಗಾ ತೀರದಲ್ಲಿ ನಡೆದಿದ್ದ “ಪ್ರಾಯೋಗಿಕ ಬಾಂಬ್‌ ಸ್ಫೋಟ’ ಪ್ರಕರಣದಲ್ಲಿ ಮಾಝ್ ಮುನೀರ್‌ ಮತ್ತು ಮಹಮ್ಮದ್‌ ಶಾರೀಕ್‌ ಆರೋಪಿಗಳಾಗಿದ್ದರು. ಸಯ್ಯದ್‌ ಯಾಸೀನ್‌ ಮತ್ತೋರ್ವ ಆರೋಪಿಯಾಗಿದ್ದ. ಮಹಮ್ಮದ್‌ ಶಾರೀಕ್‌ ತಲೆಮರೆಸಿಕೊಂಡಿದ್ದ. ಅಲ್ಲದೇ 2020ರ ನವೆಂಬರ್‌ನಲ್ಲಿ ಮಂಗಳೂರು ನಗರದ ವಿವಿಧೆಡೆ ಗೋಡೆಗಳಲ್ಲಿ ಉಗ್ರ ಸಂಘಟನೆಗಳ ಪರವಾಗಿ ಪ್ರಚೋದನಕಾರಿ ಬರಹ ಬರೆದ ಪ್ರಕರಣದಲ್ಲಿಯೂ ಮಾಝ್ ಮುನೀರ್‌ ಮತ್ತು ಶಾರೀಕ್‌ ಆರೋಪಿಗಳಾಗಿದ್ದರು.

Advertisement

ಹೊನ್ನಾಳಿಯ ನದೀಮ್‌ ಎನ್‌ಐಎ ವಶಕ್ಕೆ
ಶಿವಮೊಗ್ಗದ ತುಂಗಾ ನದಿ ತೀರದಲ್ಲಿ ನಡೆಸಲಾಗಿದ್ದ ಪ್ರಾಯೋಗಿಕ ಬಾಂಬ್‌ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಅದರ ರೂವಾರಿ ಜತೆ ಸಂಪರ್ಕದಲ್ಲಿದ್ದ ಎನ್ನಲಾದ ಹೊನ್ನಾಳಿ ಪಟ್ಟಣದ ನದೀಮ್‌ ಎಂಬಾತನನ್ನು ಎನ್‌ಐಎ ತಂಡ ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದೆ.

ಹೊನ್ನಾಳಿ ಠಾಣೆ ಕೂಗಳತೆ ದೂರದಲ್ಲಿರುವ ವಸತಿ ಪ್ರದೇಶದಲ್ಲಿನ ಮನೆಯಿಂದ 22 ವರ್ಷದ ಎಂಜಿನಿಯರಿಂಗ್‌ ವಿದ್ಯಾರ್ಥಿ ನದೀಮ್‌ನನ್ನು ವಶಕ್ಕೆ ಪಡೆದಿದ್ದಾರೆ. ಅಲ್ಲದೇ ಆತನ ಲ್ಯಾಪ್‌ಟಾಪ್‌, ಮೊಬೈಲ್‌ ಸೇರಿದಂತೆ ಇನ್ನಿತರ ಕೆಲವು ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ ಎನ್ನಲಾಗಿದೆ. ಪ್ರಾಯೋಗಿಕ ಬಾಂಬ್‌ ಸೊ #àಟ ಪ್ರಕರಣದ ಶಂಕಿತ ಉಗ್ರನ ಜತೆ ಹೊನ್ನಾಳಿ ಯುವಕನ ಸಂಪರ್ಕ ಇದೆ ಎಂಬ ಮಾಹಿತಿ ಆಧರಿಸಿ ಈ ದಾಳಿ ನಡೆದಿದೆ.

ಮಂಗಳೂರಿನ ಕುಕ್ಕರ್‌ಪ್ರಕರಣದ ಆರೋಪಿ ಯನ್ನು ಬಂಧಿಸಲಾಗಿದೆ. ಆರೋಪಿ ರಿಶಾನ್‌ ಶೇಖ್‌, ಬ್ರಹ್ಮಾವರದ ಬ್ಲಾಕ್‌ ಕಾಂಗ್ರೆ ಸ್‌ನ ಕಾರ್ಯ ದರ್ಶಿ ತಾಜುದ್ದೀನ್‌ ಇಬ್ರಾಹಿಂರವರ ಪುತ್ರ. ಈ ಕಾರಣಕ್ಕಾಗಿಯೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಈ ಪ್ರಕರಣದಲ್ಲಿ ತನಿಖೆಯ ದಿಕ್ಕು ತಪ್ಪಿಸುವ ಹೇಳಿಕೆ ನೀಡುತ್ತಿದ್ದರು ಎಂಬ ಅನುಮಾನ ಬಲವಾಗುತ್ತಿದೆ.
ಸುನಿಲ್‌ ಕುಮಾರ್‌, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next