Advertisement

ಕಾಲಿಗೆ ರೋಗ ಬೀಗ : ಇದೇ ಕಾಲುಬಾಯಿ ರೋಗ

11:38 PM May 01, 2017 | Karthik A |

ಡಿಸೆಂಬರ್‌ ಮುಗಿಯಿತು, ಜನವರಿ ಆಯಿತು, ಏಪ್ರಿಲ್‌ ಬಂತೆಂದರೆ ರೈತರಿಗೆ ಭಯ. ಏಕೆಂದರೆ ಕಾಲುಬಾಯಿ ರೋಗ ಹರಡುವ ಮಾಸವಿದು. ಅತಿಯಾದ ಚಳಿ ಅಥವಾ ಉಷ್ಣತೆಯಿಂದಾಗಿ ಈ ರೋಗದ ಲಕ್ಷಣಗಳು ಕಂಡುಬರುತ್ತದೆ. 

Advertisement

ಖಾಯಿಲೆ ಲಕ್ಷಣ 
ಪ್ರಾಣಿಗಳು ಮೊದಲು ಆಹಾರವನ್ನು ತ್ಯಜಿಸುತ್ತವೆ. ಬಾಯಿಯಲ್ಲಿ ವಿಪರೀತ ಜೊಲ್ಲು.  ಚಟುವಟಿಕೆ ಮಂದ. ಕಾಲುಗಳು ಸಂಪೂರ್ಣವಾಗಿ ನಿತ್ರಾಣಗೊಳ್ಳುತ್ತದೆ. ಬಾಯಿಯ ಮೇಲಿನ ಪದರ ಸಂಪೂರ್ಣವಾಗಿ ಕರಗುತ್ತದೆ. ಬಾಯಿಯಲ್ಲಿ ಹುಣ್ಣುಗಳಾಗುತ್ತದೆ. ಒಸಡಿನ ಭಾಗದಲ್ಲಿ ಚರ್ಮವು ಕರಗುತ್ತದೆ. ತೀವ್ರತರವಾದ ನೋವು – ಉರಿಯು ಕಾಣಿಸಿಕೊಂಡು, ಪ್ರಾಣಿಗಳು ಅದರಲ್ಲೂ ಹಸುಗಳು ನಿತ್ರಾಣಗೊಳ್ಳುತ್ತವೆ. ಜ್ವರ ಬರಬಹುದು. ಕಾಲಿನ ಗೊರಸಿನ ಮಧ್ಯೆಯಿರುವ ಚರ್ಮ ಸಂಪೂರ್ಣವಾಗಿ ಕರಗುತ್ತದೆ. ಇದರ ಮಧ್ಯೆ ನೊಣಗಳು ಕುಳಿತು, ಮೊಟ್ಟೆಯಿಟ್ಟು ರೋಗವನ್ನು ಎಲ್ಲೆಡೆ ಹರಡುತ್ತವೆ.

ಹಸು, ಎಮ್ಮೆ, ಕುರಿ, ಹಂದಿ ಬೇಗು ಹರಡುತ್ತವೆ. ದೇಸಿ ಹಸುಗಳಿಗೆ ಈ ರೋಗ ಬಂದರೂ ಕೂಡ ಬಹಳ ಬೇಗ ಚೇತರಿಸಿಕೊಳ್ಳುತ್ತದೆ. ಅದರಲ್ಲೂ ಗಿಡ್ಡ ತಳಿಯ ಹಸುಗಳಿಗೆ ಈ ರೋಗ ಹೆಚ್ಚು ತೀವ್ರ ತರವಾಗಿರುವುದಿಲ್ಲ. ದೇಸಿ ಹಸುಗಳಿಗೆ ಈ ರೋಗ ಬಂದರೂ ಕೂಡ ಬಹಳ ಬೇಗ ಚೇತರಿಸಿಕೊಳ್ಳುತ್ತದೆ. ಅದೇ ರೀತಿಯಾಗಿ ಹಂದಿ, ಕುರಿಗಳೂ ಕೂಡ ಬೇಗ ಗುಣಮುಖ ಹೊಂದುತ್ತದೆ. ಎಮ್ಮೆಗಳಿಗೆ ಈ ರೋಗ ಕಂಡು ಬರುವ ಲಕ್ಷಣಗಳು ಬಹಳ ಕಡಿಮೆ. ಇವುಗಳಲ್ಲಿ ರೋಗ ನಿರೋಧಕ ಶಕ್ತಿ ಹೇರಳವಾಗಿರುವುದರಿಂದ ಖಾಯಿಲೆಯ ತೀವ್ರತೆ ಅಷ್ಟಾಗಿರುವುದಿಲ್ಲ. ಆದರೆ ಜರ್ಸಿ ತಳಿಗಳಲ್ಲಿ ರೋಗ ಕಂಡುಬಂದರೆ ಅತೀ ಹೆಚ್ಚಿನ ಕಾಳಜಿ ಅತ್ಯಗತ್ಯ. ಇದರಿಂದ ಗರ್ಭಕೋಶದ ಮೇಲೆ ನೇರ ಪರಿಣಾಮ ಉಂಟಾಗುತ್ತದೆ. ಹಾಲಿನ ಇಳುವರಿ ಶೇ 50 ಕ್ಕಿಂತಲೂ ಕಡಿಮೆಯಾಗುತ್ತದೆ. 10 ರಿಂದ 12 ಲೀ ಹಾಲು ನೀಡುವಂತಹ ಹಸುಗಳು ಕೇವಲ 2 ರಿಂದ 3 ಲೀ ಹಾಲನ್ನು ನೀಡುವ ಹಂತಕ್ಕೆ ತಲುಪುತ್ತವೆ. ಈ ರೋಗಕ್ಕೆ ತುತ್ತಾದ ಪ್ರಾಣಿಗಳಲ್ಲಿ ವಿಶೇಷವಾಗಿ ಕೂದಲಿನ ಮೇಲೆ ಪರಿಣಾಮ ಜಾಸ್ತಿಯಿರುತ್ತದೆ.

ಚಿಕಿತ್ಸಾ ಕ್ರಮ
ಇವುಗಳಿಗೆ ಮೇವು ತಿನ್ನಲು ಆಗುವುದಿಲ್ಲ. ರಾಗಿ ಅಂಬಲಿ, ಹಸಿಹುಲ್ಲು, ಗಂಜಿ, ತೆಂಗಿನಕಾಯಿಯನ್ನು ತಿರುವಿ ಅದರೊಂದಿಗೆ ರಾಗಿ ಅಂಬಲಿ ಸೇರಿಸಿ, ಅಡುಗೆ ಸೋಡ ಬೆರೆಸಿ ನೀಡಬಹುದು. ನೋವು ನಿವಾರಕ ಚುಚ್ಚುಮದ್ದು, ಜೀವರಕ್ಷಕ  ಬಿ. ಕಾಂಪ್ಲೆಕ್ಸ್‌ ಲಸಿಕೆ, ರೋಗ ಹರಡದಂತೆ ಮುಲಾಮುಗಳು, ಜ್ವರ ನಿವಾರಕ ಚುಚ್ಚುಮದುಗಳು, ಆ್ಯಂಟಿಬಯಾಟಿಕ್ಸ್‌, ಹಾಗೂ ಗುಳಿಗೆಗಳಿಂದ ಈ ರೋಗವನ್ನು ಹತೋಟಿಗೆ ತರಬಹುದು.

ಮುನ್ನೆಚ್ಚರಿಕೆ ಕ್ರಮಗಳು 
– ರೋಗ ಬರದಂತೆ ವರ್ಷಕ್ಕೆರಡು ಬಾರಿ ಲಸಿಕೆ ಹಾಕಿಸಬೇಕು.

Advertisement

– ರೋಗಕ್ಕೆ ಬಂದ ಪ್ರಾಣಿಗಳನ್ನು ಇತರೆ ಪ್ರಾಣಿಗಳಿಂದ ದೂರವಿರಿಸಿ.

– ಕೊಟ್ಟಿಗೆ ಸ್ವಚ್ಛವಾಗಿಡಿ. ವಾರಕ್ಕೊಮ್ಮೆ ಕೊಟ್ಟಿಗೆಯನ್ನು ವಾಷಿಂಗ್‌ ಸೋಡಾ ಅಥವಾ ಪೊಟಾಷಿಯಂ ಪರಮಾಂಗನೇಟ್‌ ಬಳಸಿ ಸ್ವಚ್ಛಗೊಳಿಸಬೇಕು.

– ಹಸುಗಳನ್ನು ಕಾಲ ಕಾಲಕ್ಕೆ ವೈದ್ಯರ ಬಳಿ ತಪಾಸಣೆಗೆ ಒಳಪಡಿಸಬೇಕು. ನೊಣ ಮತ್ತು ಹುಳುಗಳು ಜಾನುವಾರುಗಳನ್ನು ಕಾಡದಂತೆ ಎಚ್ಚರಿಕೆ ವಹಿಸಬೇಕು.

– ಚಿಕಿತ್ಸೆಯ ನಂತರ ಪ್ರಾಣಿಗಳ ಕೈಕಾಲುಗಳನ್ನು ಡೆಟಾಲ್‌ನಿಂದ ಸ್ವಚ್ಛಗೊಳಿಸಬೇಕು.

– ಗೊರಸಿಗೆ ಗ್ಲಿಸರಿನ್‌ ಅಥವಾ ಬೇವಿನ ಎಣ್ಣೆ ಹಚ್ಚಿ. ಬಾಯಿ, ಕಾಲುಗಳನ್ನು ವಾಷಿಂಗ್‌ ಸೋಡಾದ ನೀರಿನಿಂದ ಒರೆಸಿದರೆ ರೋಗ ಬೇಗ ಹರಡುವುದಿಲ್ಲ.

– ಭಾಗ್ಯ ನಂಜುಂಡಸ್ವಾಮಿ

Advertisement

Udayavani is now on Telegram. Click here to join our channel and stay updated with the latest news.

Next