ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಯುವಕರನ್ನು ಅಧಿಕೃತ ಪಾಸ್‌ಪೋರ್ಟ್ ಮೂಲಕ ಪಾಕಿಸ್ತಾನಕ್ಕೆ ಕರೆಸಿ ಕೊಳ್ಳುತ್ತಿದ್ದ ಐಎಸ್‌ಐ, ಅಲ್ಲಿ ಅವರಿಗೆ ತರಬೇತಿ ನೀಡು ತ್ತಿತ್ತು. ನಂತರ ಆ ಯುವಕರು ಕೂಲಿ ಕಾರ್ಮಿಕರೊಂದಿಗೆ ಕಣಿವೆ ರಾಜ್ಯದೊಳಗೆ ಒಳನುಸುಳುತ್ತಿದ್ದರು. ಆದರೆ ಇದರ ವಿರುದ್ಧ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಕಠಿಣ ಕ್ರಮ ಕೈಗೊಂಡಿದ್ದು, ಇದಕ್ಕೆ ಬ್ರೇಕ್ ಹಾಕಿದ್ದಾರೆ.
ಕಾಶ್ಮೀರದೊಳಗೆ ಅಕ್ರಮವಾಗಿ ನುಸುಳಿದ ಕೆಲವು ಯುವಕರನ್ನು ಬಂಧಿಸಿದ ನಂತರ ಈ ವಿಷಯ ಬೆಳಕಿಗೆ ಬಂದಿತ್ತು. ಈ ಕುರಿತು ಮಾಹಿತಿ ನೀಡಿದ ಅಧಿಕಾರಿಗಳು, “ಶೈಕ್ಷಣಿಕ, ಧಾರ್ಮಿಕ ಅಥವಾ ಸಾಮಾಜಿಕ ಕಾರ್ಯಕ್ರಮ ಗಳ ನೆಪದಲ್ಲಿ ಪಾಸ್‌ಪೋರ್ಟ್ ಮೂಲಕ ಕಾಶ್ಮೀರಿ ಯುವಕರನ್ನು ಪಾಕಿಸ್ತಾನಕ್ಕೆ ಕರೆಸಿಕೊಳ್ಳುವಂತೆ ಉಗ್ರ ಸಂಘಟನೆಗಳ ಮೇಲೆ ಐಎಸ್‌ಐ ಒತ್ತಡ ಹೇರುತ್ತಿತ್ತು. ಸಂಬಂಧಿಕರನ್ನು ಭೇಟಿ ಮಾಡಲು ಅಧಿಕೃತ ಪಾಸ್‌ಪೋರ್ಟ್ ಮೂಲಕ ಪಾಕಿಸ್ತಾನಕ್ಕೆ ತೆರಳುತ್ತಿದ್ದ ಕಾಶ್ಮೀರಿ ಯುವಕರನ್ನು ಕೂಡ ಟಾರ್ಗೆಟ್ ಮಾಡಲಾಗುತ್ತಿತ್ತು. ಅವರಿಗೆ ಸ್ಫೋಟಕಗಳ ಬಳಕೆ ಮತ್ತು ಹತ್ತಿರದಿಂದ ಗುಂಡು ಹೊಡೆಯುವುದರ ಬಗ್ಗೆ 2 ವಾರಗಳ ಕ್ರ್ಯಾಶ್ ಕೋರ್ಸ್ ನೀಡಲಾಗುತ್ತಿತ್ತು,’ ಎಂದು ಮಾಹಿತಿ ನೀಡಿದ್ದಾರೆ.
“ಆದರೆ ಪೊಲೀಸರು ಹೊಸ ನೀತಿಯನ್ನು ಅನುಷ್ಠಾನಕ್ಕೆ ತಂದ ನಂತರ ಪಾಕಿಸ್ತಾನಕ್ಕೆ ತೆರಳುವವರ ಮಾಹಿತಿಯನ್ನು ಪಡೆದು, ಈ ಹಿಂದೆ ಕಲ್ಲು ತೂರಾಟ ಸೇರಿ ಯಾವುದಾದರೂ ಅಪರಾಧ ಚಟುವಿಕೆಗಳಲ್ಲಿ ಭಾಗವಹಿಸಿದ್ದರೇ ಎಂಬುದನ್ನು ಪರಿಶೀಲಿಸಲಾಗುತ್ತಿದೆ. ಇದರಿಂದಾಗಿ ಇಂಥ ಪ್ರಕರಣಗಳಿಗೆ ಕಡಿವಾಣ ಬಿದ್ದಿದೆ,’ ಎಂದು ಹೇಳಿದ್ದಾರೆ.
ಎಲ್‌ಒಸಿಯಲ್ಲಿ ಕಟ್ಟೆಚ್ಚರ: ಉಗ್ರ ಸಂಘಟನೆಗಳನ್ನು ಬಳಸಿಕೊಂಡು ಪಾಕಿಸ್ತಾನವು ಭಾರತದ ವಿರುದ್ಧ ಸಮರ ಸಾರುತ್ತಿದೆ ಎಂದು ಅಮೆರಿಕ ಗುಪ್ತಚರ ವರದಿ ಹೇಳಿದ ಬೆನ್ನಲ್ಲೇ ಎಲ್‌ಒಸಿ(ಗಡಿ ನಿಯಂತ್ರಣ ರೇಖೆ)ಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಬಿಎಸ್‌ಎಫ್ ಯೋಧರು ಗಸ್ತು ಹೆಚ್ಚಿಸಿದ್ದು, ಉಗ್ರ ಚಟುವಟಿಕೆಗಳನ್ನು ಹೆಚ್ಚಿಸಿದರೆ ಇಡೀ ಪಾಕಿಸ್ತಾನವನ್ನೇ ನಾಶ ಮಾಡುತ್ತೇವೆ ಎಂದು ಹೇಳಿದ್ದಾರೆ.