ಹೊಸದಿಲ್ಲಿ : ಈ ವರ್ಷ ಡಿಸೆಂಬರ್‌ನಲ್ಲಿ ಗುಜರಾತ್ ವಿಧಾನ ಸಭೆಗೆ ನಿರ್ಣಾಯಕ ಚುನಾವಣೆ ನಡೆಯುವ ಸಂದರ್ಭದಲ್ಲೇ, ಪ್ರಧಾನಿ ಮೋದಿ ಅವರ ತವರು ರಾಜ್ಯವಾಗಿರುವ ಗುಜರಾತ್ ಮೇಲೆ ಪಾಕಿಸ್ಥಾನದ ಕುಪ್ರಸಿದ್ಧ ಬೇಹು ಸಂಸ್ಥೆಯಾಗಿರುವ ಇಂಟರ್ ಸರ್ವಿಸಸ್ ಇಂಟೆಲಿಜೆನ್ಸ್ (ಐಎಸ್‌ಐ) ಬೆಂಬಲಿತ ಉಗ್ರರು ಬೃಹತ್ ದಾಳಿ ನಡೆಸುವ ಸಾಧ್ಯತೆ ಇದೆ ಎಂದು ಮಾಧ್ಯಮ ವರದಿಗಳು ಎಚ್ಚರಿಸಿವೆ.
ಪಾಕ್ ಐಎಸ್‌ಐ, ತನ್ನ ನೆಲದಲ್ಲಿ ಸಕ್ರಿಯವಾಗಿರುವ ಭಯೋತ್ಪಾದಕ ಸಂಘಟನೆಗಳಿಗೆ 26/11ರ ಮುಂಬಯಿ ದಾಳಿ ರೀತಿಯಲ್ಲಿ, ಬಿಜೆಪಿ ಆಡಳಿತೆ ಇರುವ, ಗುಜರಾತ್ ಮೇಲೆ ದಾಳಿ ನಡೆಸಲು ನೆರವು ನೀಡುವ ಸಾಧ್ಯತೆ ಇದೆ ಎಂದು ವರದಿಗಳು ಹೇಳಿವೆ.
ಈ ವರದಿಗಳನ್ನು ಅನುಸರಿಸಿ ಭದ್ರತಾ ಪಡೆ ತತ್‌ಕ್ಷಣದಿಂದಲೇ ಕಟ್ಟೆಚ್ಚರ ವಹಿಸಲು ಆರಂಭಿಸಿವೆ. ಗುಜರಾತ್ ಆದ್ಯಂತ ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ.
ಈ ತಿಂಗಳ ಆದಿಯಲ್ಲಿ ನಾಲ್ಕು ಭಾರತೀಯ ಮೀನುಗಾರಿಕೆ ದೋಣಿಗಳಿಂದ ಪಾಕ್ ಕೋಸ್ಟ್‌ಗಾರ್ಡ ಅಧಿಕಾರಿಗಳು ಬೆಸ್ತರ ಆಧಾರ್ ಕಾರ್ಡ್‌ಗಳು ಮತ್ತು ಇತರ ಗುರುತು ಪತ್ರಗಳನ್ನು ವಶಪಡಿಸಿಕೊಂಡಿದ್ದು ಅವುಗಳನ್ನು ಪಾಕ್ ಐಎಸ್‌ಐ ಉಗ್ರ ಕೃತ್ಯಗಳಿಗಾಗಿ ಬಳಸಬಹುದು ಎನ್ನುವ ಶಂಕೆ ಭಾರತೀಯ ಗುಪ್ತಚ ದಳಕ್ಕಿದೆ.
ಪಾಕ್ ಐಎಸ್‌ಐ ಬೆಂಬಲಿತ ಉಗ್ರರು ಸಮುದ್ರ ಮಾರ್ಗವಾಗಿ ಗುಜರಾತ್ ಪ್ರವೇಶಿಸಿ ಪ್ರಧಾನಿ ನರೇಂದ್ರ ಮೋದಿ, ಉ.ಪ್ರ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಇತರ ಉನ್ನತ ಬಿಜೆಪಿ ನಾಯಕರ ಚುನಾವಣಾ ರಾಲಿಗಳ ಮೇಲೆ ದಾಳಿ ನಡೆಸುವ ಸಾಧ್ಯತೆ ಎಂದು ವರದಿಗಳು ಹೇಳಿವೆ.