Advertisement

ನಿಮ್ಮ FB ಖಾತೆ ಸೇಫಾ?

03:07 PM Jan 23, 2018 | |

ನಮ್ಮ ಸ್ವಂತ ತಂದೆ ತಾಯಿಯರಿಗೆ ಗೊತ್ತಿಲ್ಲದ ಸಂಗತಿಗಳನ್ನು ನಮ್ಮ ಫೇಸ್‌ಬುಕ್‌ ಖಾತೆ ಹೇಳುತ್ತೆ. ನಮ್ಮೆಲ್ಲಾ ಬಂಡವಾಳಗಳೂ ಅದಕ್ಕೆ ಗೊತ್ತಿರುವಷ್ಟು ಜಗತ್ತಿನಲ್ಲಿ ಇನ್ಯಾರಿಗೂ ಗೊತ್ತಿಲ್ಲವೇನೋ!? ಈ ನಿಮ್ಮ ಭದ್ರಕೋಟೆಯೊಳಗೆ ಯಾರಾದರೂ ಕನ್ನ ಹಾಕಿದರೆ ಆಗುವ ಪರಿಣಾಮಗಳು ಗೊತ್ತಿಲ್ಲದೇ ಏನಿಲ್ಲ. ಕಲ್ಪಿಸಿಕೊಳ್ಳಲೂ ಭಯವಾಗುತ್ತೆ ಅಲ್ವಾ? ಇಂಥ ಪರಿಸ್ಥಿತಿ ಒದಗದಿರಲು ಇಲ್ಲಿ ನೀಡಿರುವ ಸುರಕ್ಷತಾ ಕ್ರಮಗಳನ್ನು ಕೈಗೊಂಡರೆ ಸಾಕು…

Advertisement

ಒಂದು ಬೆಳಗ್ಗೆ ನಿಮ್ಮ ಮೊಬೈಲು ಮೇಲಿಂದ ಮೇಲೆ ಸದ್ದು ಮಾಡತೊಡಗುತ್ತದೆ. ಆಮೇಲೆ ಎತ್ತಿಕೊಂಡರಾಯಿತು ಎಂದು ನೀವೂ ಸುಮ್ಮನಾಗುತ್ತೀರಿ. ಸ್ವಲ್ಪ ಹೊತ್ತಿನ ನಂತರ ಆನ್‌ ಮಾಡಿ ನೋಡಿದರೆ ನಿಮ್ಮ ಅನೇಕ ಗೆಳೆಯರ ಹದಿನೈದಿಪ್ಪತ್ತು ಮಿಸ್ಡ್ ಕಾಲ್‌ಗ‌ಳು ಕಾಣಿಸುತ್ತೆ. ನಿಮಗೆ ಗಾಬರಿಯಾಗುತ್ತೆ. ಏನೋ ಮುಖ್ಯವಾದ ವಿಷಯವೇ ಇರಬೇಕೆಂದು ಒಬ್ಬ ಸೇಹಿತ ಅಥವಾ ಸ್ನೇಹಿತೆಗೆ ಫೋನ್‌ ಮಾಡುತ್ತೀರಿ. ಅತ್ತ ಕಡೆಯಿಂದ ಬಂದ ದನಿಯ ಆಣತಿಯಂತೆ ನೀವು ಫೇಸ್‌ಬುಕ್‌ಗೆ ಲಾಗಿನ್‌ ಆಗುತ್ತೀರಿ. ನಿಮ್ಮ ವಾಲ್‌ನಲ್ಲಿ ಅಶ್ಲೀಲ ಪೋಸ್ಟ್‌ಗಳು, ನಿಮ್ಮ ಖಾತೆಯಿಂದ ಗೆಳೆಯ ಗೆಳತಿಯರಿಗೆಲ್ಲ ಕಳಿಸಿದ ಕೆಟ್ಟ ಕೆಟ್ಟ ಮೆಸೇಜುಗಳು, ಇದೆಲ್ಲಾ ನೋಡಿ ನೀವು ಹೌಹಾರುತ್ತೀರಿ. ಇವ್ಯಾವುವೂ ನೀವು ಮಾಡಿದ್ದಲ್ಲ. ನಿಮ್ಮ ಖಾತೆ ಹ್ಯಾಕ್‌ ಆಗಿರೋದು ಆವಾಗ ಕನ್‌ಫ‌ರ್ಮ್ ಆಗುತ್ತೆ. ಹಾಗಾಗದಿರಲು ಈ ಕ್ರಮಗಳನ್ನು ಕೈಗೊಳ್ಳಿ.

* ನಿಮ್ಮದಲ್ಲದ ಕಂಪ್ಯೂಟರ್‌ ಅಥವಾ ಮೊಬೈಲ್‌ನಿಂದ ಲಾಗಿನ್‌ ಆಗಿದ್ದರೆ, ನಿಮ್ಮ ಕೆಲಸವಾದ ನಂತರ ಲಾಗ್‌ಔಟ್‌ ಆಗಲು ಮರೆಯದಿರಿ. ಅದರಲ್ಲೂ ಸೈಬರ್‌ ಕೆಫೆಗಳ ಕಂಪ್ಯೂಟರ್‌ ಬಳಸುವಾಗ ಎಚ್ಚರಿಕೆ ವಹಿಸಬೇಕು. ಏಕೆಂದರೆ, ಪಾಸ್‌ವರ್ಡ್‌ ರೆಕಾರ್ಡ್‌ ಮಾಡುವ ಸಾಫ್ಟ್ವೇರುಗಳನ್ನು ಅಲ್ಲಿ ಇನ್‌ಸ್ಟಾಲ್‌ ಮಾಡಿದ್ದರೆ, ನಿಮ್ಮ ಪಾಸ್‌ವರ್ಡ್‌ ಸುಲಭವಾಗಿ ಇನ್ನೊಬ್ಬರ ಪಾಲಾಗುತ್ತೆ. ಮತ್ತು ಲಾಗಿನ್‌ ಪೇಜಿನಲ್ಲಿ “ಕೀಪ್‌ ಮಿ ಲಾಗ್ಡ್ ಇನ್‌’ ಆಯ್ಕೆ ಟಿಕ್‌ ಆಗಿರಬಾರದು.

* ಫೇಸ್‌ಬುಕ್‌ಗೆ ನಿಮ್ಮ ಮೊಬೈಲ್‌ ನಂಬರನ್ನು ಸಂಪರ್ಕಿಸಿ. ಇದರಿಂದ ನಿಮಗೆ ಪಾಸ್‌ವರ್ಡ್‌ ಮರೆತು ಹೋದಾಗ ಅಥವಾ ಖಾತೆ ಹ್ಯಾಕ್‌ ಆದಾಗ ಖಾತೆಯನ್ನು ಮರಳಿ ಹಿಂಪಡೆಯುವುದು ಬಹಳ ಸುಲಭ.

* ಜಿಮೇಲ್‌ನ 2 ಸ್ಟೆಪ್‌ ವೆರಿಫಿಕೇಷನ್‌ ಸವಲತ್ತನ್ನು ಫೇಸ್‌ಬುಕ್‌ ಕೂಡಾ ನೀಡುತ್ತೆ. ಅಂದರೆ, ನಿಮ್ಮ ಖಾತೆಗೆ ಎರಡು ಹಂತಗಳ ಸುರಕ್ಷತೆ ಒದಗಿಸಬಹುದು. ಈ ಸವಲತ್ತನ್ನು ಆರಿಸಿಕೊಂಡರೆ, ಖಾತೆಗೆ ಲಾಗಿನ್‌ ಆಗುವಾಗ ಪಾಸ್‌ವರ್ಡ್‌ ಎಂಟ್ರಿ ಮಾಡಿದ ನಂತರ ನಿಮ್ಮ ಮೊಬೈಲ್‌ಗೆ ಕೋಡ್‌ ಎಸ್ಸೆಮ್ಮೆಸ್‌ ಬರುತ್ತೆ (ಫೇಸ್‌ಬುಕ್‌ಗೆ ನಂಬರ್‌ ಸಂಪರ್ಕ ಮೊದಲೇ ನೀಡಿರಬೇಕು). ಇದನ್ನು ಲಾಗಿನ್‌ ಪೇಜಲ್ಲಿ ಟೈಪಿಸಿದರೆ ಮಾತ್ರ ನಿಮ್ಮ ಖಾತೆ ತೆರೆಯುತ್ತೆ.

Advertisement

* ಫೇಸ್‌ಬುಕ್‌ನ “ಅಕೌಂಟ್‌ ಸೆಟ್ಟಿಂಗ್ಸ್‌’ ಆಯ್ಕೆಯಲ್ಲಿ, ಸೆಕ್ಯುರಿಟಿ ಎಂಬ ಟ್ಯಾಬ್‌ ಇದೆ. ಅದರಲ್ಲಿ “ಸೆಕ್ಯೂರ್‌ ಬ್ರೌಸಿಂಗ್‌’ ಎಂಬ ಆಯ್ಕೆ ಇದೆ. ಅದಕ್ಕೆ ಟಿಕ್‌ ಮಾರ್ಕ್‌ ಹಾಕಿ. ಇದು ನಿಮ್ಮ ಫೇಸ್‌ಬುಕ್‌ ಸಂಪರ್ಕವನ್ನು ಇನ್ನಷ್ಟು ಭದ್ರಪಡಿಸುತ್ತೆ.

* ನಿಮ್ಮ ಖಾತೆಗೆ ಲಾಗಿನ್‌ ಆಗುವುದನ್ನು ಆ್ಯಕ್ಟಿವ್‌ ಸೆಷನ್‌ ಎನ್ನುತ್ತಾರೆ. ಲಾಗ್‌ಔಟ್‌ ಆದಾಗ ಸೆಷನ್‌ ತನ್ನಷ್ಟಕ್ಕೇ ಕೊನೆಯಾಗುತ್ತೆ. ಅದನ್ನು ಎಂಡ್‌ ಸೆಷನ್‌ ಎನ್ನುವರು. ಸೆಕ್ಯುರಿಟಿ ಟ್ಯಾಬ್‌ನಲ್ಲಿ ಆ್ಯಕ್ಟಿವ್‌ ಸೆಷನ್‌ಗಳನ್ನು ನೋಡಬಹುದು. ಅಂದರೆ, ನಿಮ್ಮನ್ನು ಹೊರತುಪಡಿಸಿ ಬೇರೆಯವರು ಲಾಗಿನ್‌ ಆಗಿದ್ದರೆ ಇಲ್ಲಿ ತಿಳಿದುಕೊಳ್ಳಬಹುದು. ಜೊತೆಗೆ ಆ ಸೆಷನ್‌ಗಳನ್ನು ಕೊನೆಗೊಳಿಸಬಹುದು.

Advertisement

Udayavani is now on Telegram. Click here to join our channel and stay updated with the latest news.

Next