Advertisement

ಎರಡು ಮಕ್ಕಳ ನೀತಿ ಯಾವೆಲ್ಲಾ ರಾಜ್ಯಗಳಲ್ಲಿ ಹೇಗೆ ಪಾಲನೆಯಾಗುತ್ತಿದೆ : ಇಲ್ಲಿದೆ ಮಾಹಿತಿ

09:31 AM Oct 24, 2019 | Hari Prasad |

ಅಸ್ಸಾಂನಲ್ಲಿ ಆಡಳಿತ ಪಕ್ಷವಾಗಿರುವ ಭಾರತೀಯ ಜನತಾ ಪಕ್ಷ ಸರಕಾರವು ಈ ರಾಜ್ಯದಲ್ಲಿ ಎರಡು ಮಕ್ಕಳ ನೀತಿಯನ್ನು ಅನುಷ್ಠಾನಗೊಳಿಸಲು ನಿರ್ಧರಿಸಿದೆ. ರಾಜ್ಯದಲ್ಲಿ ಎರಡು ವರ್ಷಗಳ ಹಿಂದೆಯೇ ಇಂತಹ ಒಂದು ನೀತಿಯನ್ನು ರೂಪಿಸಲಾಗಿದ್ದರೂ ವಿವಿಧ ಕಾರಣಗಳಿಗೆ ಅನುಷ್ಠಾನಗೊಂಡಿರಲಿಲ್ಲ. ಈ ನೀತಿಯ ಅನುಸಾರ ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರುವ ವ್ಯಕ್ತಿಗಳಿಗೆ ಅಸ್ಸಾಂ ರಾಜ್ಯದಲ್ಲಿ ಇನ್ನು ಮುಂದೆ ಯಾವುದೇ ಸರಕಾರಿ ಹುದ್ದೆಗಳನ್ನು ಹೊಂದಲು ಸಾಧ್ಯವಾಗುವುದಿಲ್ಲ. ಈ ಕಾನೂನು 2021ರ ಜನವರಿ ತಿಂಗಳಿನಿಂದ ಅನುಷ್ಠಾನಗೊಳ್ಳಲಿದೆ.

Advertisement

ಜನಸಂಖ್ಯೆ ಮತ್ತು ಮಹಿಳಾ ಸಶಕ್ತೀಕರಣ ನೀತಿಯನ್ನು ಅಸ್ಸಾಂ ವಿಧಾನಸಭೆಯಲ್ಲಿ 2017ರಂದು ಅಂಗೀಕರಿಸಲಾಗಿತ್ತು. ಇದರನ್ವಯ ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರುವವರು ರಾಜ್ಯ ಸರಕಾರದ ಹುದ್ದೆಗಳನ್ನು ಹೊಂದುವಂತಿಲ್ಲ ಮಾತ್ರವಲ್ಲದೇ ಈಗಾಗಲೇ ರಾಜ್ಯ ಸರಕಾರದ ಹುದ್ದೆಗಳಲ್ಲಿ ಇರುವವರು ಸಹ ಈ ಕಾನೂನಿನ ವ್ಯಾಪ್ತಿಗೊಳಪಡಲಿದ್ದಾರೆ. ಆದರೆ ಈ ನೀತಿಯನ್ನು ಜಾರಿಗೆ ತಂದಿರುವ ಮೊದಲ ರಾಜ್ಯ ಅಸ್ಸಾಂ ಅಲ್ಲ.

ಹಾಗಾದರೆ ಯಾವೆಲ್ಲಾ ರಾಜ್ಯಗಳು ಎರಡು ಮಕ್ಕಳ ನೀತಿಯನ್ನು ಯಾವ ಸ್ವರೂಪದಲ್ಲಿ ಅಳವಡಿಸಿಕೊಂಡಿವೆ ಎಂಬ ಮಾಹಿತಿ ಇಲ್ಲಿದೆ.

ಆಂಧ್ರಪ್ರದೇಶ ಮತ್ತು ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ತೆಲಂಗಾಣ ರಾಜ್ಯಗಳ 1994ರ ಪಂಚಾಯತ್ ರಾಜ್ ಕಾಯ್ದೆಯು ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರುವ ವ್ಯಕ್ತಿಯು ಸ್ಥಳೀಯ ಸಂಸ್ಥೆಯ ಚುನಾವಣೆಗಳಲ್ಲಿ ಸ್ಪರ್ಧಿಸುವುದಕ್ಕೆ ನಿರ್ಬಂಧ ವಿಧಿಸುತ್ತದೆ.
ಮಹಾರಾಷ್ಟ್ರದಲ್ಲಿ ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರುವ ವ್ಯಕ್ತಿಗಳು ಗ್ರಾಮ ಪಂಚಾಯತ್ ಹಾಗೂ ಮುನ್ಸಿಪಾಲಿಟಿ ಚುನಾವಣೆಗಳಲ್ಲಿ ಸ್ಪರ್ಧಿಸುವಂತಿಲ್ಲ. ಇಷ್ಟು ಮಾತ್ರವಲ್ಲದೇ ಮಹಾರಾಷ್ಟ್ರ ನಾಗರಿಕ ಸೇವಾ (ಸಣ್ಣ ಕುಟುಂಬದ ಘೋಷಣೆ) ಕಾಯ್ದೆ, 2005, ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರುವ ವ್ಯಕ್ತಿಗಳನ್ನು ರಾಜ್ಯಸರಕಾರದ ಹುದ್ದೆಯಿಂದ ಅನರ್ಹಗೊಳಿಸುತ್ತದೆ. ಮತ್ತು ಮಹಿಳೆಯೊಬ್ಬರು ಇಬ್ಬರಿಗಿಂತ ಹೆಚ್ಚು ಮಕ್ಕಳನ್ನು ಹೊಂದಿದ್ದಲ್ಲಿ ಅಂತವರು ಸಾರ್ವಜನಿಕ ಪಡಿತರ ವ್ಯವಸ್ಥೆಯ ಪ್ರಯೋಜನಗಳನ್ನು ಪಡೆದುಕೊಳ್ಳಲು ಅವಕಾಶವಿರುವುದಿಲ್ಲ.

ಇನ್ನು ರಾಜಸ್ಥಾನದಲ್ಲೂ ಸಹ ಅಸ್ಸಾಂನಂತೆ ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರುವ ವ್ಯಕ್ತಿಗಳಿಗೆ ರಾಜ್ಯ ಸರಕಾರದ ಹುದ್ದೆಗಳನ್ನು ಹೊಂದಲು ನಿರ್ಬಂಧವಿದೆ. ರಾಜಸ್ಥಾನ ಪಂಚಾಯತ್ ರಾಜ್ ಕಾಯ್ದೆ 1994ರ ಪ್ರಕಾರ ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರುವ ವ್ಯಕ್ತಿಯು ಪಂಚಾಯತ್ ಚುನಾವಣೆಗಳಲ್ಲಿ ಸ್ಪರ್ಧಿಸುವಂತಿಲ್ಲ. ಆದರೆ ಇಬ್ಬರು ಮಕ್ಕಳಲ್ಲಿ ಒಂದು ಮಗು ಯಾವುದೇ ರೀತಿಯ ಮಾನಸಿಕ ಅಥವಾ ದೈಹಿಕ ನ್ಯೂನತೆಗಳನ್ನು ಹೊಂದಿದ್ದರೆ ಅದಕ್ಕೆ ರಿಯಾಯಿತಿಯನ್ನು ನೀಡಲಾಗಿದೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಗುಜರಾತ್ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ 2005ನೇ ಇಸವಿಯಲ್ಲಿ ಸ್ಥಳೀಯಾಡಳಿತ ಕಾಯ್ದೆಗೆ ತಿದ್ದುಪಡಿಯೊಂದನ್ನು ಮಾಡಲಾಗಿತ್ತು. ಅದರ ಪ್ರಕಾರ ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರುವ ವ್ಯಕ್ತಿಗಳು ಪಂಚಾಯತ್, ಮುನ್ಸಿಪಾಲಿಟಿ ಮತ್ತು ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಗಳಲ್ಲಿ ಸ್ಪರ್ಧಿಸುವಂತಿಲ್ಲ.

ಮಧ್ಯಪ್ರದೇಶ ಮತ್ತು ಛತ್ತೀಸ್ ಗಢ ರಾಜ್ಯಗಳು ಸರಕಾರಿ ಉದ್ಯೋಗ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಸ್ಪರ್ಧಿಸುವ ವಿಚಾರದಲ್ಲಿ ಎರಡು ಮಕ್ಕಳ ನೀತಿಯನ್ನು 2001ರಲ್ಲೇ ಅಳವಡಿಸಿಕೊಂಡಿದ್ದವು. ಇನ್ನು ಮಧ್ಯಪ್ರದೇಶದಲ್ಲಿ ಎರಡು ಮಕ್ಕಳ ನೀತಿ ಸರಕಾರಿ ಉದ್ಯೋಗಗಳು ಮತ್ತು ನ್ಯಾಯಾಂಗ ಸೇವೆಗಳಿಗೂ ಅನ್ವಯಿಸುತ್ತದೆ.
ಒಡಿಸ್ಸಾ ರಾಜ್ಯದಲ್ಲಿ ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರುವ ವ್ಯಕ್ತಿಗಳು ಸ್ಥಳೀಯ ಸಂಸ್ಥೆಯ ಚುನಾವಣೆಗಳಲ್ಲಿ ಸ್ಪರ್ಧಿಸುವುದಕ್ಕೆ ನಿರ್ಬಂಧ ವಿಧಿಸುತ್ತದೆ. ಬಿಹಾರ ಮತ್ತು ಉತ್ತರಾಖಂಡ ರಾಜ್ಯಗಳೂ ಸಹ ಎರಡು ಮಕ್ಕಳ ನೀತಿಯನ್ನು ರಾಜ್ಯ ಸರಕಾರದ ವಿವಿಧ ಸ್ತರಗಳಲ್ಲಿ ಅಳವಡಿಸಿಕೊಂಡಿತ್ತು. ಆದರೆ ಸದ್ಯಕ್ಕೆ ಈ ಎರಡು ರಾಜ್ಯಗಳಲ್ಲಿ ಈ ನೀತಿ ಮುನ್ಸಿಪಾಲಿಟಿ ಚುನಾವಣೆಯಲ್ಲಿ ಸ್ಪರ್ಧಿಸುವ ವಿಚಾರಕ್ಕೆ ಮಾತ್ರವೇ ಸೀಮಿತವಾಗಿದೆ.

Advertisement

ಕರ್ನಾಟಕ ರಾಜ್ಯದ ವಿಚಾರಕ್ಕೆ ಬರುವುದಾದರೆ ಇಲ್ಲಿ ಎರಡು ಮಕ್ಕಳ ನೀತಿಗೆ ಬದಲಾಗಿ ವ್ಯಕ್ತಿಯೊಬ್ಬರ ಮನೆಯಲ್ಲಿ ಶೌಚಾಲಯ ವ್ಯವಸ್ಥೆ ಇಲ್ಲದೇ ಇದ್ದಲ್ಲಿ ಅಂತಹ ವ್ಯಕ್ತಿಗಳು ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಸ್ಪರ್ಧಿಸುವಂತಿಲ್ಲ ಎಂಬ ಕಾನೂನನ್ನು 1993ರಲ್ಲೇ ಗ್ರಾಮ ಸ್ವರಾಜ್ಯ ಮತ್ತು ಪಂಚಾಯತ್ ರಾಜ್ ಕಾಯ್ದೆಗಳಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿತ್ತು. ಇದು ದೇಶಾದ್ಯಂತ ಸ್ವಚ್ಛ ಭಾರತ ಪರಿಕಲ್ಪನೆ ಮೂಡುವುದಕ್ಕಿಂತಲೂ 21 ವರ್ಷಗಳಿಗೂ ಮೊದಲು ಈ ಕಲ್ಪನೆ ನಮ್ಮ ರಾಜ್ಯದಲ್ಲಿ ಸಾಕಾರಗೊಂಡಿತ್ತು ಎನ್ನುವುದು ವಿಶೇಷ ವಿಚಾರವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next