Advertisement

ವಿಧಾನ ಪರಿಷತ್ ಅವಶ್ಯಕತೆ ಇದೆಯೇ? :ಆತ್ಮಾವಲೋಕನವಾಗಬೇಕು ಎಂದ ಸಿಎಂ

02:52 PM Jan 05, 2022 | Team Udayavani |

ಬೆಂಗಳೂರು : ರಾಜ್ಯದಲ್ಲಿ ವಿಧಾನ ಪರಿಷತ್ ಅವಶ್ಯಕತೆ ಇದೆಯೇ ? ಎಂಬ ಪ್ರಶ್ನೆ ಆಗಾಗ ಉದ್ಭವವಾಗುತ್ತಿದ್ದು ಈ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಅವಶ್ಯಕತೆ ಇದೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಬುಧವಾರ  ಅಭಿಪ್ರಾಯ ಪಟ್ಟಿದ್ದಾರೆ.

Advertisement

ಸದಸ್ಯತ್ವ ಅವಧಿ ಮುಕ್ತಾಯಗೊಂಡ ಪರಿಷತ್ ಸದಸ್ಯರ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಮಾತನಾಡಿದ ಬೊಮ್ಮಾಯಿ ಎತ್ತಿರುವ ಈ ಪ್ರಶ್ನೆ ಮಹತ್ವ ಪಡೆದುಕೊಂಡಿದೆ.

ನಾನೂ ಕೂಡಾ ಪರಿಷತ್ ಸದಸ್ಯನಾಗುವ ಮೂಲಕವೇ ರಾಜಕೀಯ ಬದುಕು ಆರಂಭಿಸಿದ್ದು. ಇದಕ್ಕೆ ಘನವಾದ ಇತಿಹಾಸ, ಪರಂಪರೆ ಇದೆ ಎಂಬುದನ್ನು ಯಾರೂ ಮರೆಯುವಂತಿಲ್ಲ ಎಂದು ಹೇಳಿದರು.

ವಿಧಾನ ಪರಿಷತ್ತಿನ ಇತಿಹಾಸ, ಪರಂಪರೆಯನ್ನು ಹೇಗೆ ಉಳಿಸಿಕೊಳ್ಳಬೇಕು ಎಂಬ ಪ್ರಶ್ನೆಯ ಜತೆಗೆ ವಿಧಾನ ಪರಿಷತ್ತಿನ ಅಗತ್ಯವಿದೆಯೇ ? ಎಂಬ ಚರ್ಚೆ ಈಗ ಹುಟ್ಟಿಕೊಂಡಿದೆ. ಪರಿಸ್ಥಿತಿ, ಸಂದರ್ಭ ಆಧರಿಸಿ ಪ್ರಶ್ನೆ ಹುಟ್ಟಿಕೊಂಡಿದೆ. ಹೀಗಾಗಿ ಪರಿಷತ್ತಿನ ಮೌಲ್ಯ ಹೆಚ್ಚಿಸುವ ಜವಾಬ್ದಾರಿ ನಮ್ಮ ಮೇಲಿದೆ. ಹೀಗಾಗಿ ನಾವುಗಳು ಆತ್ಮಾವಲೋಕನ, ಸಿಂಹಾವಲೋಕನ ಮಾಡಿಕೊಳ್ಳಬೇಕು ಎಂದು ಹೇಳಿದರು.

ನಿವೃತ್ತಿ ಪ್ರಶ್ನೆ ಇಲ್ಲ
ರಾಜಕಾರಣದಲ್ಲಿ ಇರುವವರಿಗೆ ನಿವೃತ್ತಿ ಪ್ರಶ್ನೆ ಇಲ್ಲ. ಅರ್ಹತೆ ಮತ್ತು ನಿವೃತ್ತಿ ಇಲ್ಲದ ಕ್ಷೇತ್ರ ರಾಜಕೀಯ. ಆದರೆ ಇಲ್ಲಿ ಸಮಾಜ ನಿರ್ಮಿತವಾದ ಅರ್ಹತೆಗಳಿವೆ. ಅದನ್ನು ಅನುಸರಿಸಬೇಕು ಎಂದು ಅಭಿಪ್ರಾಯಪಟ್ಟರು.

Advertisement

ರಾಜಕಾರಣದಲ್ಲಿ ಪ್ರಸ್ತುತತೆ ಮುಖ್ಯ. ರಾಜಕಾರಣದಲ್ಲಿ ಕ್ರಿಯಾಶೀಲತೆ ಕಳೆದುಕೊಂಡರೆ ಸ್ಪರ್ಧೆಯಲ್ಲಿ ಉಳಿಯುವುದಕ್ಕೆ ಸಾಧ್ಯವಿಲ್ಲ. ಜನರ ಹೃದಯದಲ್ಲಿ ಸ್ಥಾನ ಪಡೆಯಬೇಕು ಎಂದರು.

ಮುಖ್ಯಮಂತ್ರಿಯವರು ಕಾರ್ಯ ಕ್ರಮದಿಂದ ತೆರಳಿದ ಮೇಲೆ ಮಾತನಾಡಿದ ಸಮಾಜಕಲ್ಯಾಣ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ, ವ್ಯವಸ್ಥೆಯನ್ನು ವಿಮರ್ಶೆ ಮಾಡುವ ಸಂದರ್ಭ ಬಂದಾಗ ವಿಧಾನ ಪರಿಷತ್ ಇಂದಿಗೂ ಬಹಳ ಎತ್ತರದಲ್ಲಿದೆ. ಕೆಲವು ಸಂದರ್ಭದಲ್ಲಿ ವಿಧಾನ ಪರಿಷತ್ ಕೆಟ್ಟಿದೆ ಎಂಬ ಭಾವನೆ ಬಂದರೂ ಶಕ್ತಿ ಕಳೆದುಕೊಂಡಿಲ್ಲ. ರಾಮಕೃಷ್ಣ ಹೆಗಡೆ, ದೇವೇಗೌಡರು, ಡಾ.ಆಚಾರ್ಯ ಮೊದಲಾದವರು ಇದನ್ನು ಪ್ರತಿನಿಧಿಸಿದ್ದಾರೆ. ಅವರು ಬಿಟ್ಟು ಹೋದ ಮೌಲ್ಯ ಇದೆ. ಆದರೆ ಈ ಬಾರಿಯ ಚುನಾವಣೆಗೆ ನಡೆದ ಖರ್ಚುಗಳ ವಿಚಾರ ಬಂದಾಗ ಶಸ್ತ್ರಚಿಕಿತ್ಸೆ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.

ಮಾಜಿ ಸಭಾಪತಿ ಬಿ.ಎಲ್.ಶಂಕರ್ ಮಾತನಾಡಿ, ವಿಧಾನ ಪರಿಷತ್ ಅಗತ್ಯವಿದೆಯೇ ಎಂಬ ಪ್ರಶ್ನೆಯನ್ನು ವಿಧಾನಸಭೆಗೆ ಬಿಟ್ಟಿರುವ ವಿಚಾರ ಮಾತ್ರ ನನಗೆ ಒಪ್ಪಿತವಾಗಿಲ್ಲ. ಆದರೆ ಮೇಲ್ಮನೆ ಬೇಡ ಎಂದು ಹೇಳುವವರು ಉತ್ತರ ಪ್ರದೇಶ, ಬಿಹಾರ್, ಮಹಾರಾಷ್ಟ್ರದ ಮುಖ್ಯಮಂತ್ರಿಗಳು ಮೇಲ್ಮನೆ ಸದಸ್ಯರು ಎಂಬುದನ್ನು ಯಾರು ಮರೆಯಬಾರದು. ಪರಿಷತ್ ಅವಶ್ಯಕತೆ ಇದೆಯೇ ಎಂಬ ಪ್ರಶ್ನೆಗೆ ಇದಕ್ಕಿಂತ ಬೇರೆ ಉತ್ತರ ಬೇಡ ಎಂದು ಅಭಿಪ್ರಾಯಪಟ್ಟರು. ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ, ಮಾಜಿ ಸಭಾಪತಿ ಡಿ.ಎಚ್.ಶಂಕರಮೂರ್ತಿ ಉಪಸ್ಥಿತರಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next