ನರಗುಂದ: ಬಾಗಲಕೋಟೆ ಲೋಕಸಭಾ ಅಭ್ಯರ್ಥಿಗಳ ಭವಿಷ್ಯ ನಿರ್ಧರಿಸಿದ ಮತದಾರರ ನಿರ್ಣಯ ಮತ ಪೆಟ್ಟಿಗೆಗಳಲ್ಲಿ ಭದ್ರವಾಗಿದೆ. ನರಗುಂದ ಮತಕ್ಷೇತ್ರದಲ್ಲಿ ಮತದಾನೋತ್ತರ ಸಾಧಕ ಬಾಧಕಗಳ ಚರ್ಚೆಗಳು ಗರಿಗೆದರಿವೆ. ಆಡಳಿತಾರೂಢ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳಲ್ಲಿ ಸೋಲು-ಗೆಲುವಿನ ಲೆಕ್ಕಾಚಾರ ಜೋರಾಗಿದೆ.
ಬಿಜೆಪಿ ಅಭ್ಯರ್ಥಿ ಪರವಾಗಿ ಬಿಜೆಪಿ ಜಿಲ್ಲಾಧ್ಯಕ್ಷರೂ ಆಗಿರುವ ಶಾಸಕ ಸಿ.ಸಿ. ಪಾಟೀಲ ಗೆಲುವಿನ ಗಟ್ಟಿ ನಿಲುವಿನೊಂದಿಗೆ ಚುನಾವಣೆ ಅಖಾಡದಲ್ಲಿ ಭರದ ಪ್ರಚಾರ ಕೈಗೊಂಡಿದ್ದು, ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ಮಾಜಿ ಶಾಸಕ ಬಿ.ಆರ್. ಯಾವಗಲ್ಲ ಹಾಗೂ ಮತ್ತವರ ಪಡೆ ಅಭ್ಯರ್ಥಿ ಗೆಲುವಿಗೆ ಹರಸಾಹಸ ಪಟ್ಟಿದೆ. ಈ ಕ್ಷೇತ್ರದಲ್ಲಿ ಜಾತಿ ಲೆಕ್ಕಾಚಾರಕ್ಕೆ ಮತದಾರ ಎಂದಿಗೂ ಓಗೊಟ್ಟಿಲ್ಲ. ಹೀಗಾಗಿ ವ್ಯಕ್ತಿ ಮತ್ತು ಪಕ್ಷದ ವರ್ಚಸ್ಸು ಇಲ್ಲಿ ಪ್ರಾಮುಖ್ಯತೆ ಪಡೆಯುತ್ತ ಬಂದಿದೆ.
ಕೇಂದ್ರ ಸರ್ಕಾರದ ಆಡಳಿತ ಕಾರ್ಯವೈಖರಿ, ಯಾವುದೇ ಕಪ್ಪು ಚುಕ್ಕೆಯಿಲ್ಲದೇ 5 ವರ್ಷ ಅಧಿಕಾರ ಪೂರೈಸಿ ವಿಶ್ವದಲ್ಲಿ ಭಾರತದ ಪ್ರಭಾವ ಮೆರೆದ ಪ್ರಧಾನಿ ನರೇಂದ್ರ ಮೋದಿ ಅಲೆ, ಉಗ್ರರ ಸಂಹಾರ ಮಾಡಿದ ಏರ್‌ಸೈóಕ್ ಕೂಡ ಮತದಾರರ ಮೇಲೆ ಪರಿಣಾಮ ಬೀರಿದೆ. ಹೀಗಾಗಿ ವ್ಯಕ್ತಿತ್ವದಲ್ಲಿ ಗುರುತಿಸಿಕೊಂಡ ಪಿ.ಸಿ. ಗದ್ದಿಗೌಡರ, ಮತ್ತೂಂದೆಡೆ ದೇಶದ ಭದ್ರತೆ ದೃಷ್ಟಿಯಿಂದ ಮೋದಿ ಮೇಲಿನ ಭರವಸೆ ನಮ್ಮ ಅಭ್ಯರ್ಥಿ ಗೆಲುವಿಗೆ ಪೂರಕವಾಗಿದೆ ಎಂಬುದು ಬಿಜೆಪಿ ವಲಯದಲ್ಲಿ ಕೇಳಿ ಬರುತ್ತಿದೆ.
ಇನ್ನೊಂದೆಡೆ ರಾಜ್ಯ ಸಮ್ಮಿಶ್ರ ಸರ್ಕಾರದ ಸಾಧನೆಗಳು, ಜನಪರ ಯೋಜನೆಗಳ ಭರವಸೆಯಿಂದ ಮತದಾರರು ನಮ್ಮ ಅಭ್ಯರ್ಥಿಗೆ ಹೆಚ್ಚು ಬೆಂಬಲಿಸಲಿದ್ದಾರೆ. ಮಹಿಳಾ ಅಭ್ಯರ್ಥಿ ಎಂಬ ಹೆಮ್ಮೆ ಗೆಲುವಿಗೆ ಪೂರಕವಾಗಿದೆ ಎಂಬ ಭರವಸೆ ಕಾಂಗ್ರೆಸ್ ವಲಯದಲ್ಲಿ ಕೇಳಿ ಬರುತ್ತಿದೆ. ಹೀಗಾಗಿ ಎರಡೂ ಪಕ್ಷಗಳಲ್ಲಿ ತಮ್ಮ ತಮ್ಮ ಅಭ್ಯರ್ಥಿಗಳ ಗೆಲುವಿನ ಲೆಕ್ಕಾಚಾರ ಜೋರಾಗಿಯೇ ಇದೆ. ಇದಕ್ಕೆ ಮೇ 23ರಂದೇ ಕೊನೆಯ ಅಂಕಿತ ಬೀಳುವುದಷ್ಟೇ ಸತ್ಯವಾಗಿದೆ.
Advertisement
ಏ.23ರಂದು ಮತದಾರರು ತಮ್ಮ ಹಕ್ಕು ಚಲಾಯಿಸಿದ್ದು, ಪಟ್ಟಣ ಸೇರಿ 92 ಹಳ್ಳಿಗಳ ಒಳಗೊಂಡ ನರಗುಂದ ಮತಕ್ಷೇತ್ರದಲ್ಲಿ ಚುನಾವಣೆ ಕಾವು ರಂಗೇರಿತ್ತು. ಬಿಜೆಪಿ ಅಭ್ಯರ್ಥಿ ಪಿ.ಸಿ. ಗದ್ದಿಗೌಡರ ಮತ್ತು ಕಾಂಗ್ರೆಸ್ ಅಭ್ಯರ್ಥಿ ವೀಣಾ ಕಾಶಪ್ಪನವರ ನಡುವೆ ನೇರ ಹಣಾಹಣಿ ನಡೆದಿದ್ದು, ಇಬ್ಬರು ಅಭ್ಯರ್ಥಿಗಳಲ್ಲಿ ಯಾರು ವಿಜಯದ ಮಾಲೆ ಧರಿಸಲಿದ್ದಾರೆ? ನರಗುಂದ ಕ್ಷೇತ್ರದಲ್ಲಿ ಯಾರು ಮುನ್ನಡೆ ಸಾಧಿಸಲಿದ್ದಾರೆ? ಎಂಬುದು ಜನರಲ್ಲಿ ಕುತೂಹಲ ಮೂಡಿಸಿದೆ.
Related Articles
Advertisement
ಅಧಿಕಾರ ಹಂಚಿಕೊಡುವ ಕ್ಷೇತ್ರ: ವಿಧಾನಸಭಾ ಚುನಾವಣೆಯಲ್ಲಿ ಈ ಕ್ಷೇತ್ರ ಕಾಂಗ್ರೆಸ್ ಮತ್ತು ಬಿಜೆಪಿಗೆ ಅಧಿಕಾರ ಹಂಚಿಕೊಳ್ಳುತ್ತಾ ಬಂದಿದೆ. 2004ರ ವರೆಗೆ ಈ ಕ್ಷೇತ್ರದ ನಿರಂತರ ಚುಕ್ಕಾಣಿ ಹಿಡಿದಿದ್ದ ಬಿ.ಆರ್. ಯಾವಗಲ್ಲ ಅವರಿಗೆ ಪ್ರತಿಸ್ಪರ್ಧೆ ಒಡ್ಡಿದ ಬಿಜೆಪಿಯ ಸಿ.ಸಿ. ಪಾಟೀಲ 2004ರಿಂದ ಎರಡು ಅವಧಿಗಳ ಕಾಲ ಕ್ಷೇತ್ರದ ಅಧಿಕಾರ ಬಾಚಿಕೊಂಡಿದ್ದು, 2013ರಲ್ಲಿ ಮತ್ತೆ ಕಾಂಗ್ರೆಸ್ ಹಿಡಿತಕ್ಕೆ ಬಂದಿದ್ದರೆ, 2018ರ ಚುನಾವಣೆಯಲ್ಲಿ ಮತ್ತೆ ಕಮಲ ಅರಳಿ ನಿಂತಿದೆ. ಇನ್ನು ಲೋಕಸಭಾ ಚುನಾವಣೆಯಲ್ಲಿ ಈ ಕ್ಷೇತ್ರ ಮೂರು ಅವಧಿಗಳ ಕಾಲ ಬಿಜೆಪಿ ಅಭ್ಯರ್ಥಿಗೆ ಹೆಚ್ಚು ಮತ ನೀಡಿದ್ದು ಗಮನಾರ್ಹ.
ಒಟ್ಟಾರೆ ನರಗುಂದ ಮತಕ್ಷೇತ್ರದಲ್ಲಿ ಚುನಾವಣಾ ಮತದಾನೋತ್ತರ ಚರ್ಚೆಗಳು ರೆಕ್ಕೆಪುಕ್ಕ ಪಡೆದಕೊಂಡಿದ್ದು, ಎರಡೂ ಪ್ರಮುಖ ಪಕ್ಷಗಳ ಅಭ್ಯರ್ಥಿಗಳ ಸೋಲು-ಗೆಲುವಿನ ಲೆಕ್ಕಾಚಾರಗಳು ಸಹಜವಾಗಿ ಕೇಳಿ ಬರುತ್ತಿದೆ.
ಬಾಗಲಕೋಟೆ ಮತಕ್ಷೇತ್ರದಲ್ಲಿ ಪ್ರಥಮ ಬಾರಿಗೆ ಮಹಿಳಾ ಅಭ್ಯರ್ಥಿಯನ್ನು ಕಾಂಗ್ರೆಸ್ ಪಕ್ಷ ಕಣಕ್ಕಿಳಿಸಿದ್ದು, ಮಹಿಳೆಯರ ಅಭಿಮಾನಕ್ಕೆ ಪೂರಕವಾಗಿದೆ. ಸಮ್ಮಿಶ್ರ ಸರ್ಕಾರದ ಅಭಿವೃದ್ಧಿ ಕಾರ್ಯಗಳು, ಮೈತ್ರಿ ಅಭ್ಯರ್ಥಿ ಆಗಿದ್ದರಿಂದ ವೀಣಾ ಕಾಶಪ್ಪನವರ ಗೆಲುವಿಗೆ ಬಹಳಷ್ಟು ಆಧಾರಗಳಿವೆ. ಕಳೆದ 15 ವರ್ಷಗಳಲ್ಲಿ ಕ್ಷೇತ್ರದಲ್ಲಿ ಅಭಿವೃದ್ಧಿ ಶೂನ್ಯ ಎಂಬ ನೋವು ಮತದಾರರಲ್ಲಿದೆ. ರಾಜಕೀಯ ಹಿನ್ನೆಲೆ, ಜಿಪಂ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ನಮ್ಮ ಅಭ್ಯರ್ಥಿ ಬಗ್ಗೆ ಮತದಾರರಿಗೆ ಹೊಸ ಭರವಸೆ ಮೂಡಿಸಿದೆ.
• ಪ್ರವೀಣ ಯಾವಗಲ್ಲ, ನರಗುಂದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ
• ಪ್ರವೀಣ ಯಾವಗಲ್ಲ, ನರಗುಂದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ
ಕಳೆದ ಮೂರು ಅವಧಿಗಳಲ್ಲಿ ಬಿಜೆಪಿ ಅಭ್ಯರ್ಥಿ ಪಿ.ಸಿ. ಗದ್ದಿಗೌಡರ ಪ್ರಾಮಾಣಿಕವಾಗಿ ಅಭಿವೃದ್ಧಿಗೆ ಒತ್ತು ನೀಡಿದ್ದಾರೆ. ಅವರ ಸರಳ ಜೀವನ ಗೆಲುವಿಗೆ ಭರವಸೆ ಹೆಜ್ಜೆಯಾಗಿದೆ. ಕ್ಷೇತ್ರದಲ್ಲಿ ಪ್ರಧಾನಿ ಮೋದಿ ಅಲೆ ಹಾಗೂ ರಾಷ್ಟ್ರದ ಒಳಿತಿಗಾಗಿ ಸಾಮಾನ್ಯ ಜನರು ನಮ್ಮ ಅಭ್ಯರ್ಥಿಗೆ ಅಭೂತಪೂರ್ವ ಬೆಂಬಲ ನೀಡಿದ್ದಾರೆ. ಅವರ ಗೆಲುವು ನಿಶ್ಚಿತ. ಶಾಸಕ ಸಿ.ಸಿ.ಪಾಟೀಲರ ನೇತೃತ್ವದಲ್ಲಿ ಗದ್ದಿಗೌಡರ ಗೆಲುವಿಗೆ ಇಡೀ ಕಮಲ ಪಡೆ ಟೊಂಕಕಟ್ಟಿ ನಿಂತಿದೆ.ಹೀಗಾಗಿ ನಾಲ್ಕನೇ ಬಾರಿಗೆ ಬಾಗಲಕೋಟೆ ಕ್ಷೇತ್ರದಲ್ಲಿ ಕಮಲ ಅರಳುವುದು ಸತ್ಯ.
• ಮಲ್ಲಪ್ಪ ಮೇಟಿ, ಬಿಜೆಪಿ ನರಗುಂದ ಮಂಡಳ ಅಧ್ಯಕ್ಷ
• ಮಲ್ಲಪ್ಪ ಮೇಟಿ, ಬಿಜೆಪಿ ನರಗುಂದ ಮಂಡಳ ಅಧ್ಯಕ್ಷ
•ಸಿದ್ಧಲಿಂಗಯ್ಯ ಮಣ್ಣೂರಮಠ