ಹುಣಸೂರು: “ಸಿಮೆಂಟ್ ಅಂಗಡಿ ಇಟ್ಟುಕೊಂಡಿದ್ದ ಶಂಕ್ರಪ್ಪರನ್ನು ಶಾಸಕ, ಸಂಸದ, ಮಂತ್ರಿ ಮಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರನ್ನು ಮರೆತಿದ್ದಾರೆ. ಅಲ್ಲದೇ ರಾಜಕೀಯ ಬದುಕು ಕಟ್ಟಿಕೊಟ್ಟ ಮಾತೃ ಪಕ್ಷವನ್ನೇ ಮರೆತವರಿಂದು ಬಿಜೆಪಿಯನ್ನು ಕೋಮುವಾದಿ ಎನ್ನುತ್ತಿರುವುದು ಎಷ್ಟರ ಮಟ್ಟಿಗೆ ಸರಿ’ ಎಂದು ಬಿಜೆಪಿ ಅಭ್ಯರ್ಥಿ ಪ್ರತಾಪ್ ಸಿಂಹ ಅವರು ಕಾಂಗ್ರೆಸ್ ಅಭ್ಯರ್ಥಿ ಸಿ.ಎಚ್.ವಿಜಯಶಂಕರ್‌ಗೆ ತಿರುಗೇಟು ನೀಡಿದರು.
ತಾಲೂಕಿನ ಹನಗೋಡಿನಲ್ಲಿ ಬುಧವಾರ ಪ್ರಮುಖ ರಸ್ತೆಯಲ್ಲಿ ರ್ಯಾಲಿ ಹಾಗೂ ಪಾದಯಾತ್ರೆ ನಡೆಸಿ ಮತಯಾಚಿಸಿ ಅವರು ಮಾತನಾಡಿದರು.
ಅದ್ಧೂರಿ ಹನುಮ ಜಯಂತಿ: ಹುಣಸೂರು ತಾಲೂಕಿನ ಸಾವಿರಾರು ಮಂದಿ ಭಾವನಾತ್ಮಕ ಸಂಬಂಧ ಹೊಂದಿರುವ ಹನುಮ ಜಯಂತಿಯನ್ನು ಅದ್ಧೂರಿಯಾಗಿ ನಡೆಸಲು ಸಾಕಷ್ಟು ಶ್ರಮವಹಿಸಿದ್ದು, ಹನುಮ ಜಯಂತಿ ಸಂದರ್ಭದಲ್ಲಿ ತಮ್ಮನ್ನು ಬಂಧಿಸಿ ಜೈಲಿಗೆ ಕಳುಹಿಸಲು ಯತ್ನಿಸಿದ ಕ್ಷೇತ್ರದ ಮಾಜಿ ಶಾಸಕ ಮಂಜುನಾಥ್ ಅವರನ್ನು ಮನೆಗೆ ಕಳುಹಿಸಿದ್ದೀರಾ, ಮತ್ತೆ ಬರದಂತೆ ನೋಡಿಕೊಳ್ಳಬೇಕು. ಮುಂದಿನ ಬಾರಿ ಹುಣಸೂರಿನಲ್ಲಿ ಹನುಮ ಜಯಂತಿಯನ್ನು ವೈಭವಯುತವಾಗಿ ಆಚರಿಸುವಂತಾಗಲು ತಮಗೆ ಮತ ನೀಡಬೇಕು ಎಂದು ಮನವಿ ಮಾಡಿದರು.
ಅನುದಾನ ಬಳಸಿದ ಏಕೈಕ ಸಂಸದ: ಕಳೆದ 5 ವರ್ಷಗಳ ಅಧಿಕಾರವಧಿಯಲ್ಲಿ ಮೈಸೂರು ಹಾಗೂ ಕೊಡುಗು ಜಿಲ್ಲೆಗೆ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಜಾರಿಗೊಳಿಸಲು ಶ್ರಮಿಸಿದ್ದೇನೆ. ಸಂಸದರ ಕ್ಷೇತ್ರಾಭಿವೃದ್ಧಿ ಯೋಜನೆಯಡಿ ಬಂದ 25 ಕೋಟಿ ರೂ. ಪೈಕಿ 5 ಲಕ್ಷ ರೂ. ಮಾತ್ರ ಬಾಕಿ ಉಳಿದಿದ್ದು, ಉಳಿದ 24.95 ಕೋಟಿ ಅನುದಾನ ಬಳಸಿದ ಏಕೈಕ ಸಂಸದನೆಂಬ ಹೆಮ್ಮೆ ಇದೆ ಜಿಲ್ಲೆಯ ತಂಬಾಕು ಬೆಳೆಗಾರ ಹಿತ ಕಾಪಾಡುವಲ್ಲಿ ಯಶಸ್ಸು ಕಂಡಿದ್ದೇನೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ಅಪ್ಪಣ್ಣ, ತಾಲೂಕು ಅಧ್ಯಕ್ಷ ಯೋಗನಂದಕುಮಾರ್, ಮಾಜಿ ಅಧ್ಯಕ್ಷ ಹನಗೋಡು ಮಂಜುನಾಥ್, ಎಸ್ಸಿ,ಎಸ್ಟಿ ಮೋರ್ಚಾದ ಅಧ್ಯಕ್ಷ ರತ್ನಪುರಿ ಅಪ್ಪಣ್ಣ, ಮುಖಂಡರಾದ ಎಚ್.ಬಿ.ಸುರೇಶ್, ರಮೇಶ್‌ಕುಮಾರ್, ನಾಗಣ್ಣ, ನಾಗರಾಜಪ್ಪ ಇತರರು ಉಪಸ್ಥಿತರಿದ್ದರು.