ಬೆಂಗಳೂರು: “ರಾಜ್ಯದಲ್ಲಿ ಆಡಳಿತ ಯಂತ್ರ ಸತ್ತುಹೋಗಿದೆ! ಹೀಗಾಗಿಯೇ ಅಧಿಕಾರಿಗಳು ಕೋರ್ಟ್ ಆದೇಶಗಳನ್ನು ಪಾಲಿಸದೆ ಬೇಕಾಬಿಟ್ಟಿ ನಡೆದುಕೊಳ್ಳುತ್ತಿದ್ದಾರೆ.’ ಸಿವಿಲ್ ನ್ಯಾಯಾಂಗ ನಿಂದನೆ ಪ್ರಕರಣವೊಂದರ ಕುರಿತ ಅರ್ಜಿ ವಿಚಾರಣೆ ವೇಳೆ ಗುರುವಾರ ಸರ್ಕಾರಿ ಅಧಿಕಾರಿಗಳ ಕಾರ್ಯವೈಖರಿಗೆ ಹೈಕೋರ್ಟ್ ಕಿಡಿಕಾರಿದ ಪರಿಯಿದು.
ಸರ್ಕಾರಿ ಭೂ ಮಾಲೀಕತ್ವಕ್ಕೆ ಸಂಬಂಧಿಸಿದಂತೆ 2013ರಲ್ಲಿ ನೀಡಿದ್ದ ಹೈಕೋರ್ಟ್ ಆದೇಶ ಪಾಲಿಸದ ಕಂದಾಯ ಇಲಾಖೆ ಕಾರ್ಯದರ್ಶಿ ಹಾಗೂ ಬೆಂಗಳೂರು ನಗರ ಜಿಲ್ಲಾಧಿಕಾರಿ ವಿರುದ್ಧ ಉಮ್ರಾ ಡೆವಲಪರ್ ಸಲ್ಲಿಸಿದ್ದ ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಎಚ್.ಜಿ.ರಮೇಶ್ ಹಾಗೂ ನ್ಯಾಯಮೂರ್ತಿ ಬಿ.ಎಂ.ಶ್ಯಾಮ್ ಪ್ರಸಾದ್ ಅವರಿದ್ದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ನ್ಯಾಯಾಲಯದ ಆದೇಶಗಳನ್ನು ಸರ್ಕಾರಿ ಅಧಿಕಾರಿಗಳು ಉಡಾಫೆಯಾಗಿ ತೆಗೆದುಕೊಂಡರೆ ಸುಮ್ಮನಿರಲು ಸಾಧ್ಯವಿಲ್ಲ. ಈ ಪ್ರಕರಣಕ್ಕೆ ಸಂಬಂಧಿಸಿದ ತೀರ್ಪು ನೀಡಿ ಐದು ವರ್ಷ ಕಳೆದರೂ, ಪಾಲಿಸದಿದ್ದರೆ ಏನರ್ಥ? ರಾಜ್ಯದ ಆಡಳಿತ ಯಂತ್ರ ಕೆಟ್ಟುಹೋಗಿದ್ದು, ಸರ್ಕಾರ ಸತ್ತು ಹೋಗಿದೆ. ಇದಕ್ಕಾಗಿಯೇ ಅಧಿಕಾರಿಗಳು ಬೇಕಾಬಿಟ್ಟಿ ವರ್ತಿಸುತ್ತಾರೆ ಎಂದು ತರಾಟೆ ತೆಗೆದುಕೊಂಡಿತು.
ಜತೆಗೆ ಪ್ರತಿವಾದಿ ಜಿಲ್ಲಾಧಿಕಾರಿಗಳನ್ನು ಮಧ್ಯಾಹ್ನದ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿತು. ನ್ಯಾಯಪೀಠದ ಸೂಚನೆಯಂತೆ ಬೆಂಗಳೂರು ನಗರ ಜಿಲ್ಲಾಧಿಕಾರಿ ವಿ.ಶಂಕರ್ ವಿಚಾರಣೆಗೆ ಖುದ್ದು ಹಾಜರಾಗಿದ್ದರು. ಪುನಃ ಅರ್ಜಿ ವಿಚಾರಣೆ ನಡೆಸಿದ ನ್ಯಾಯಪೀಠ, ಅಧಿಕಾರಿಗಳು ನ್ಯಾಯಾಲಯದ ಆದೇಶಗಳನ್ನು ಗಂಭೀರವಾಗಿ ಪರಿಗಣಿಸಿ ಪಾಲಿಸಬೇಕು.
ಯಾವಾಗ ಆದೇಶ ಪಾಲಿಸುತ್ತೀರಿ ಹೇಳಿ ಎಂದು ಡಿ.ಸಿಯವರನ್ನು ಪ್ರಶ್ನಿಸಿತು. ಈ ವೇಳೆ ಸರ್ಕಾರದ ಪರ ವಕೀಲರು, ಇನ್ನೆರಡು ದಿನಗಳಲ್ಲಿ ಆದೇಶ ಪಾಲಿಸಲಾಗುವುದು. ಕಾಲಾವಕಾಶ ನೀಡುವಂತೆ ನ್ಯಾಯಪೀಠಕ್ಕೆ ಮನವಿ ಮಾಡಿದರು. ಮನವಿ ಮನ್ನಿಸಿದ ನ್ಯಾಯಾಲಯ, ವಿಚಾರಣೆಯನ್ನು ಫೆ.17ಕ್ಕೆ ಮುಂದೂಡಿತು.