ನವದೆಹಲಿ: ಕಳೆದ 5 ತಿಂಗಳಿನಿಂದ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿ ಸಿಲುಕಿಕೊಂಡಿರುವ ಭಾರತೀಯ ಮೂಲದ ಗಗನಯಾತ್ರಿ ಸುನೀತಾ ವಿಲಿಯಮ್ಸ್ ಆರೋಗ್ಯವಾಗಿದ್ದಾರೆ ಎಂದು ನಾಸಾ ಹೇಳಿದೆ. ಸುನೀತಾ ಹಾಗೂ ಬುಚ್ ಆಲ್ಡಿ†ನ್ ಅವರ ಆರೋಗ್ಯ ಹದಗೆಟ್ಟಿರುವ ಬಗ್ಗೆ ಹಲವು ಮಾಧ್ಯಮಗಳು ಶಂಕೆ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ನಾಸಾ ಈ ಹೇಳಿಕೆ ಬಿಡುಗಡೆ ಮಾಡಿದೆ.
“ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿರುವ ಗಗನಯಾತ್ರಿಗಳಿಗೆ ನಿರಂತರವಾಗಿ ಆರೋಗ್ಯ ಪರೀಕ್ಷೆ ಮಾಡಲಾಗುತ್ತದೆ. ಗಗನಯಾತ್ರಿಗಳನ್ನು ಪರೀಕ್ಷೆ ಮಾಡುವುದಕ್ಕೆಂದೇ ನೇಮಕಗೊಂಡಿರುವ ವೈದ್ಯರು ಇದರ ಮೇಲ್ವಿಚಾರಣೆ ನಡೆಸಲಿದ್ದಾರೆ’ ಎಂದು ನಾಸಾದ ವಕ್ತಾರ ಜಿಮಿ ರಸೆಲ್ ಹೇಳಿದ್ದಾರೆ.
ಗಗನನೌಕೆಯಲ್ಲಿ ಉಂಟಾದ ತಾಂತ್ರಿಕ ಸಮಸ್ಯೆಯಿಂದಾಗಿ 8 ದಿನಗಳ ಕಾರ್ಯಾಚರಣೆಗೆಂದು ಬಾಹ್ಯಾಕಾಶಕ್ಕೆ ತೆರಳಿದ ಸುನೀತಾ ತಂಡ ಜೂನ್‌ನಿಂದಲೂ ಬಾಹ್ಯಾಕಾಶದಲ್ಲೇ ಸಿಲುಕಿಕೊಂಡಿದೆ. ಹೆಚ್ಚು ದಿನಗಳ ಕಾಲ ಬಾಹ್ಯಾಕಾಶದಲ್ಲಿರುವುದರಿಂದ ಮೂಳೆ ಸವೆತ, ಮಾಂಸಖಂಡ ಸವೆತದಂತಹ ಸಮಸ್ಯೆಗಳಿಗೆ ತುತ್ತಾಗಿದ್ದಾರೆ ಎಂದು ವರದಿಗಳು ತಿಳಿಸಿದ್ದವು.
ಭೂಮಿಗೆ ವಾಪಸ್ ಯಾವಾಗ?:
ಸುನೀತಾ ವಿಲಿಯಮ್ಸ್ ತಂಡ ಯಾವಾಗ ಭೂಮಿಗೆ ಮರಳಲಿದ್ದಾರೆ ಎಂಬುದರ ಬಗ್ಗೆ ನಾಸಾ ಇನ್ನೂ ಖಚಿತ ಮಾಹಿತಿಯನ್ನು ನೀಡಿಲ್ಲ. ಇತ್ತೀಚೆಗೆ ಬಾಹ್ಯಾಕಾಶಕ್ಕೆ ತೆರಳಿದ ಗಗನನೌಕೆಯಲ್ಲಿ ಮುಂದಿನ ವರ್ಷ ಫೆಬ್ರವರಿ ವೇಳೆಗೆ ಸುನೀತಾ ಮರಳಬಹುದು ಎಂದು ಹೇಳಲಾಗಿತ್ತು.