Advertisement

ಬೇಗ ಮುಪ್ಪು ತರಿಸುವುದೇ ಮಾನಸಿಕ ಒತ್ತಡ?

09:52 AM Feb 17, 2020 | mahesh |

ಪ್ರಯೋಗಾಲಯಗಳಲ್ಲಿ ವಿಜ್ಞಾನಿಗಳು ಕಂಡುಕೊಂಡಿರುವುದೇನೆಂದರೆ, ಹೆಚ್ಚು ಚಿಂತೆ ಮಾಡುವವರಲ್ಲಿ ಹೆಚ್ಚು ಖನ್ನತೆ ಸಂಬಂಧಿ ಸಮಸ್ಯೆಗಳು ಅಧಿಕವಾಗುತ್ತವೆ ಹಾಗು ಇದರ ಪರಿಣಾಮವು
ಟೆಲೋಮರ್‌ಗಳ ಮೇಲಾಗಿ, ಮುಪ್ಪು ಬರುವ ಪ್ರಕ್ರಿಯೆ ತ್ವರಿತಗೊಳ್ಳುತ್ತದೆ.

Advertisement

ನೀವು ಆರೋಗ್ಯವಂತ ಜೀವನ ಮತ್ತು ಯೌವನದ ರಹಸ್ಯವನ್ನು ಹುಡುಕುತ್ತಿದ್ದೀರಿ ಎಂದರೆ, ಖಂಡಿತ ಅದು ನಿಮಗೆ ಯಾವುದೋ ಔಷಧಿಗಳಲ್ಲಿ ಅಥವಾ ಕಾಸ್ಮೆಟಿಕ್‌ ಸರ್ಜರಿಗಳಲ್ಲಿ ಸಿಗುವುದಿಲ್ಲ. ಆ ರಹಸ್ಯ ನಿಮ್ಮ ಯೋಚನೆಗಳಲ್ಲಿ ಇದೆ. ನೀವು ಬದುಕಿನಲ್ಲಿ ನಿರಂತರ ಒತ್ತಡದಲ್ಲಿದ್ದೀರಿ ಎಂದರೆ, ನಿಮಗೆ
ಅವಧಿಗೂ ಮುನ್ನವೇ ಮುಪ್ಪುಬರುವ ಸಾಧ್ಯತೆ ಅಧಿಕ ಎನ್ನುತ್ತದೆ ವಿಜ್ಞಾನ. ಜೀವನದಲ್ಲಿ ನೀವು ಎಷ್ಟು ಚಿಂತೆ ಮಾಡುತ್ತಿದ್ದೀರಿ, ಎಷ್ಟು ಒತ್ತಡದಲ್ಲಿದ್ದೀರಿ ಎನ್ನುವುದು ನಿಮ್ಮ ದೇಹಾರೋಗ್ಯವನ್ನೂ
ನಿರ್ಧರಿಸುತ್ತದೆ. ಮಾನಸಿಕ ಒತ್ತಡದ ಪರಿಣಾಮ ನಮ್ಮ ದೇಹದ ಮೇಲೆ ಹೇಗಾಗುತ್ತದೆ ಎನ್ನುವುದನ್ನು ನಾವು ಕನ್ನಡಿಯ ಮುಂದೆ ನಿಂತೂ ಅರಿಯಬಹುದು. ನಮ್ಮ ಮುಖ ಕಳಾಹೀನವಾಗಿರುತ್ತದೆ, ಕಣ್ಣುಗಳು ನಿಸ್ತೇಜವಾಗಿರುತ್ತವೆ, ಚಿಂತೆಯ ರೇಖೆಗಳು ಹಣೆಯ ಮೇಲೆ ಗುರುತು ಮೂಡಿಸಿರುತ್ತವೆ. “ನಗುತ್ತಾ
ಇರು ವವನಿಗೆ ಮುಪ್ಪು ಬೇಗ ಬರುವುದಿಲ್ಲ’ ಎನ್ನುವ ಮಾತು ಎಲ್ಲಾ ಸಮಾಜಗಳಲ್ಲೂ ಇರುವುದು ಏಕೆ ಎಂದುಕೊಂಡಿರಿ? ಏಕೆಂದರೆ, ಹೇಗೆ ಒಬ್ಬ ವ್ಯಕ್ತಿಯ ಮಾನಸಿಕ ಸ್ಥಿತಿ ಆತನ ದೇಹದ ಮೇಲೂ ಪರಿಣಾಮ ಬೀರುತ್ತದೆ ಎನ್ನುವುದನ್ನು ಜನರು ನೋಡಿ ಅರಿತಿದ್ದಾರೆ.

ಹಾಗಿದ್ದರೆ, ಮಾನಸಿಕ ಒತ್ತಡಕೂ-ಮುಪ್ಪು ಬೇಗ ಬರುವುದಕ್ಕೂ ಸಂಬಂಧವಿದೆ ಎಂಬುದಕ್ಕೆ ವೈಜ್ಞಾನಿಕ ಪುರಾವೆಗಳೇನಿವೆ ಎಂಬ ಪ್ರಶ್ನೆ ಎದುರಾಗುವುದು ಸಹಜ. ಖಂಡಿತ ಸಂಬಂಧವಿದೆ. ಆದರೆ ಮುಪ್ಪು ಎನ್ನುವುದು ಹಲವು ಜಟಿಲ ಪ್ರಕ್ರಿಯೆಗಳ ಸಮ್ಮಿಲನ. ಮನಸ್ಸು ಆರೋಗ್ಯವಾಗಿದ್ದಾಕ್ಷಣ ಮನುಷ್ಯ ಯುವಕನಂತೆಯೇ ಇರುತ್ತಾನೆ ಎಂದು ನಾನಿಲ್ಲಿ ಹೇಳುತ್ತಿಲ್ಲ. ಆದರೆ ಮಾನಸಿಕ ಸ್ವಾಸ್ಥ್ಯವು ನಮ್ಮ ದೇಹಾರೋಗ್ಯವನ್ನು ಸುಧಾರಿಸಿ, ಮುಪ್ಪನ್ನು ಮುಂದೂಡಲು ತನ್ನ ಪಾಲಿನ ಪಾತ್ರ ನಿರ್ವಹಿಸುತ್ತಿದೆ ಎನ್ನುತ್ತದೆ ವೈಜ್ಞಾನಿಕ ಲೋಕ.

ನರವಿಜ್ಞಾನಿಗಳು ಏನನ್ನುತ್ತಾರೆ?: ನೋಬೆಲ್‌ ಪುರಸ್ಕೃತ ವಿಜ್ಞಾನಿ ಎಲಿಜಬೆತ್‌ ಬ್ಲ್ಯಾಕ್‌ಬರ್ನ್ ಮತ್ತು ಆರೋಗ್ಯ ಮನಶಾಸ್ತ್ರಜ್ಞೆ, ಯೂನಿವರ್ಸಿಟಿ ಆಫ್ ಕ್ಯಾಲಿಫೋರ್ನಿಯಾದ ಪ್ರೊಫೆಸರ್‌ ಎಲಿಸ್ಸಾ ಎಪೆಲ್‌ ಈ ವಿಚಾರದಲ್ಲಿ ಸಾಕಷ್ಟು ಅಧ್ಯಯನ ಕೈಗೊಂಡಿದ್ದಾರೆ. ಹೇಗೆ ನಮ್ಮ ಋಣಾತ್ಮಕ ಯೋಚನೆಗಳು ನಮ್ಮ ದೇಹಕ್ಕೆ ಹಾನಿ ಮಾಡುತ್ತವೆ ಎನ್ನುವುದರ ಕುರಿತು ಇವರಿಬ್ಬರು ಬರೆದಿರುವ The Telomere Effect: A Revolutionary Appro ach to Living Younger, Healthier and Longerಎನ್ನುವ ಪುಸ್ತಕ ಬೆಳಕು ಚೆಲ್ಲುತ್ತದೆ. ನಮ್ಮ ವರ್ಣತಂತುಗಳ ತುದಿಗೆ ಟೆಲೋಮರ್‌ಗಳೆಂಬ ರಕ್ಷಣಾತ್ಮಕ ಮುಚ್ಚಳವಿರುತ್ತದೆ. ನಾವು ಎಷ್ಟು ತಿನ್ನುತ್ತೇವೆ, ಎಷ್ಟು ಹೊತ್ತು ಮಲಗುತ್ತೇವೆ, ಎಷ್ಟು ವ್ಯಾಯಾಮ ಮಾಡುತ್ತೇವೆ ಎನ್ನುವುದೆಲ್ಲ ಈ ಟೆಲೋಮರ್‌ (Telomere)ಗಳ ಮೇಲೆ ಪ್ರಭಾವ ಬೀರುತ್ತವೆ.
ಒಂದು ಜೀವಕೋಶಕ್ಕೆ ಎಷ್ಟು ಬೇಗನೇ ಮುಪ್ಪುಬರಬೇಕು ಮತ್ತು ಅದರಿಂದ ನಿಮ್ಮ ಜೀವನ ಹಾಗೂ ಆರೋಗ್ಯದ ಮೇಲಾಗುವ ಪರಿಣಾಮವನ್ನು ಟೆಲೋಮರ್‌ಗಳು ನಿರ್ಧರಿಸುತ್ತವೆ. ಯಾವಾಗ ಟೆಲೋಮರ್‌ಗಳು ಚಿಕ್ಕದಾಗಿಬಿಡುತ್ತವೋ ಅವುಗಳ ವಿಭಜನೆಯೂ ನಿಂತುಬಿಡುತ್ತವೆ. ಅವುಗಳ ವಿಭಜನೆ ನಿಂತಿತು ಎಂದರೆ, ಜೀವಕೋಶಕ್ಕೆ ಮುಪ್ಪುಬರುತ್ತದೆ. ಆದರೆ, ವಿಜ್ಞಾನಿಗಳು ಕಂಡುಕೊಂಡ ಅಂಶವೆಂದರೆ, ಆರೋಗ್ಯಯುತ ಆಹಾರ, ಉತ್ತಮ ನಿದ್ರೆ, ವಂಶವಾಹಿ ಮತ್ತು ಧನಾತ್ಮಕ ಮನಸ್ಸು ಟೆಲೋಮರ್‌ಗಳ ಬೆಳವಣಿಗೆಗೂ ಕಾರಣವಾಗುತ್ತದೆ ಎಂಬುದು!

ಹೇಗೆ ಮಾನಸಿಕ ಒತ್ತಡವು ಟೆಲೋಮರ್‌ಗಳ ಗಾತ್ರವನ್ನು ಕಿರಿದಾಗಿಸಿ, ಅಕಾಲಿಕ ವಯಸ್ಸಿಗೆ(ಬೇಗ ಮುಪ್ಪು ಬರುವುದಕ್ಕೆ) ಕಾರಣವಾಗುತ್ತದೆ ಎನ್ನುವುದನ್ನು ನಾವೀಗ ನೋಡೋಣ…

Advertisement

5 ಯೋಚನಾ ಕ್ರಮಗಳು ಟೆಲೋಮರ್‌ಗಳಿಗೆ ಮಾರಕ ಎಂದು ಮನಶಾಸ್ತ್ರಜ್ಞರು ಮತ್ತು ವಿಜ್ಞಾನಿಗಳು ಗುರುತಿಸುತ್ತಾರೆ.

1)ಸಿನಿಕತನದ ಸಿಟ್ಟು : ಏಕಾಏಕಿ ವಿಪರೀತ ಸಿಟ್ಟು ಬರುವುದು ಅಥವಾ ಜನರ ಬಗ್ಗೆ ನಿರಂತರವಾಗಿ ಕಿರಿಕಿರಿ ಆಗುವುದು. ಈ ಗುಣವಿರುವವರು ಜನರಲ್ಲಿ ಸದಾ ಹುಳುಕನ್ನು ಹುಡುಕುತ್ತಿರುತ್ತಾರೆ, ಸಿನಿಕತನದಿಂದ ನೋಡುತ್ತಾರೆ. ಹೀಗಾಗಿ, ಎದುರಿನವರ ವರ್ತನೆಗಳೆಲ್ಲ ಇವರಿಗೆ ಕೋಪ ತರಿಸುತ್ತವೆ. ಈ ಕಾರಣಕ್ಕಾಗಿಯೇ ಈ ಗುಣ ಇರುವವರಿಗೆ ಸ್ನೇಹಿತರು ಹೆಚ್ಚಾಗಿ ಇರುವುದಿಲ್ಲ, ಇವರ ಸಾಮಾಜಿಕ ವಲಯ ತುಂಬಾ ಕಿರಿದಾಗಿರುತ್ತದೆ. ಈ ರೀತಿಯ ಸಿಟ್ಟು ಇರುವವರಲ್ಲಿ ಟೆಲೋಮರ್‌ಗಳ ಗಾತ್ರ ಕಿರಿದಾಗುತ್ತಾ ಹೋಗುತ್ತದೆ. ಅಲ್ಲದೇ ಹೃದ್ರೋಗಕ್ಕೆ, ಚಯಾಪಚಯ ಶಕ್ತಿ ಕುಂಠಿತಗೊಳ್ಳುವುದಕ್ಕೆ ಕಾರಣವಾಗುತ್ತದೆ. ಮುಖ್ಯವಾಗಿ ಇವರಿಗೆ ಬಹಳ ಬೇಗನೇ ಮುಪ್ಪು ಮತ್ತು ಸಾವು ಬರುವ ಸಾಧ್ಯತೆ ಇರುತ್ತದೆ.

2) ನಿರಾಶಾವಾದ: ಜೀವನವನ್ನು ಹೆಚ್ಚಾಗಿ ನೆಗೆಟಿವ್‌ ಆಯಾಮದಿಂದ ನೋಡುವ ಗುಣವಿದು. ನಿರಾಶಾವಾದಿಗಳಿಗೆ ಭವಿಷ್ಯದ ಬಗ್ಗೆ ಒಳ್ಳೆಯ ಭಾವನೆ ಇರುವುದೇ ಇಲ್ಲ. ಇದುವರೆಗಿನ ಅನೇಕ ವೈಜ್ಞಾನಿಕ ಅಧ್ಯಯನಗಳೂ ಕೂಡ, ಆಶಾವಾದಿಗಳಿಗೆ ಹೋಲಿಸಿದರೆ, ನಿರಾಶಾವಾದಿಗಳು ಬೇಗನೇ ಸಾಯುತ್ತಾರೆ ಎನ್ನುತ್ತದೆ. ಅಲ್ಲದೆ ನಿರಾಶಾವಾದಿಗಳಿಗಿಂತ ಆಶಾವಾದಿಗಳು ತಮ್ಮ ವೃತ್ತಿ ಜೀವನದಲ್ಲಿ, ಆರ್ಥಿಕ ಸ್ಥಿತಿಯಲ್ಲಿ ಎತ್ತರಕ್ಕೇರುತ್ತಾರೆ ಎನ್ನುವುದೂ ಪದೇ ಪದೆ ಸಾಬೀತಾಗುತ್ತಲೇ ಇದೆ.

3) ಕೊರಗುವುದು: ಹಿಂದೆ ನಡೆದ ಯಾವುದೋ ವಿಷಯ ಹಿಡಿದುಕೊಂಡು ಬರೀ ಚಿಂತೆ ಮಾಡುವುದು, ನಮ್ಮ ಜತೆಗೇ ನಾವು ವಾದ ಮಾಡುವುದು, ನಾವೇ ಸಮಸ್ಯೆಯೊಂದನ್ನು ಸೃಷ್ಟಿಸಿ, ಅದರ ಬಗ್ಗೆ ಯೋಚಿಸುತ್ತಾ ಕೂರುವುದು…ಇವೆಲ್ಲವೂ ನಿಮ್ಮ ದೇಹಾರೋಗ್ಯಕ್ಕೆ ತೀವ್ರ ಹಾನಿ ಮಾಡುತ್ತವೆ. ನೀವು ಕೊರಗಿದರೆ ಸಾಕು, ದೇಹದಲ್ಲಿ ಜೈವಿಕ ರೂಪದಲ್ಲಿ ಒತ್ತಡ ಬಹಳ ಹೊತ್ತು ಇರುತ್ತದೆ. ಉದಾಹರಣೆಗೆ, ಹೃದಯ ಬಡಿತದಲ್ಲಿ ಹೆಚ್ಚಳ ಬಹಳ ಸಮಯ ಇರುತ್ತದೆ, ಪರಿಣಾಮವಾಗಿ, ನಿಮ್ಮ ಬಿಪಿ ಅಧಿಕಸಮಯದವರೆಗೆ ಹೆಚ್ಚಾಗಿರುತ್ತದೆ ಮತ್ತು ಮುಖ್ಯವಾಗಿ, “ಕಾರ್ಟಿಸಾಲ್‌’ ಎಂಬ ಹಾರ್ಮೋನಿ ನಲ್ಲಿ ಏರಿಕೆಯಾಗುತ್ತದೆ. ಪ್ರಯೋಗಾಲಯಗಳಲ್ಲಿ ವಿಜ್ಞಾನಿಗಳು ಕಂಡುಕೊಂಡಿರುವುದೇನೆಂದರೆ, ಹೆಚ್ಚು ಚಿಂತೆ ಮಾಡುವವರಲ್ಲಿ ಹೆಚ್ಚು ಖನ್ನತೆ ಸಂಬಂಧಿ ಸಮಸ್ಯೆಗಳು ಅಧಿಕವಾಗುತ್ತವೆ ಹಾಗು ಇದರ ಪರಿಣಾಮವು ಟೆಲೋಮರ್‌ಗಳ ಮೇಲಾಗಿ, ಮುಪ್ಪು ಬೇಗ ಬರುತ್ತದೆ ಎಂಬುದು.

4) ಯೋಚನೆಗಳನ್ನು ಹತ್ತಿಕ್ಕುವುದು: ಯೋಚನೆಗಳನ್ನು, ಭಾವನೆಗಳನ್ನು ಹತ್ತಿಕ್ಕಿದರೆ, ಅವುಗಳಿಂದ ದೂರ ಓಡಿದರೆ ಸಮಸ್ಯೆಗಳು ಬಗೆಹರಿಯುವ ಬದಲು ಅಧಿಕವಾಗುತ್ತವೆ. ಇದೂ ಕೂಡ ಟೆಲೋಮರ್‌ಗಳು ಕಿರಿದಾಗುವುದಕ್ಕೆ ಕಾರಣ.

5) ದಿಕ್ಕು ತಪ್ಪುವ ಮನಸ್ಸು: ನಮ್ಮ ಮನಸ್ಸು ದಿನದ 47 ಪ್ರತಿಶತ ಸಮಯ ಎತ್ತೆತ್ತಲೋ ಅಲೆದಾಡುತ್ತಿರುತ್ತದೆ ಎನ್ನುತ್ತದೆ ಹಾರ್ವಡ್‌ ವಿವಿಯ ಒಂದು ಅಧ್ಯಯನ. ಆದರೆ ಈ ಪ್ರಮಾಣ ಅಧಿಕವಾದಷ್ಟೂ ಪರಿಣಾಮ ಕೆಟ್ಟದಾಗುತ್ತದೆ. ಸರಳವಾಗಿ ಹೇಳಬೇಕೆಂದರೆ, ಒಂದು ಸಂಗತಿಯತ್ತ ಗಮನ ಹರಿಸಲು ವಿಫ‌ಲನಾಗುವ ವ್ಯಕ್ತಿ ಎಲ್ಲಾ ಕೆಲಸಗಳನ್ನು ಅಪೂರ್ಣವಾಗಿಯೇ ಉಳಿಸುತ್ತಾನೆ. ಅಪೂರ್ಣವಾಗಿರುವ ಕೆಲಸಗಳೆಲ್ಲ ಅವನಲ್ಲಿ ಹೆಚ್ಚಿನ ಒತ್ತಡ ಮತ್ತು ಅಸಂತೋಷವನ್ನು ಉಂಟುಮಾಡುತ್ತವೆ. ಹಾರ್ವರ್ಡ್‌ ವಿಜ್ಞಾನಿ ಗಳಾದ ಮ್ಯಾಥಿವ್‌ ಕಿಲ್ಲಿಂಗ್ಸ್‌ವರ್ತ್‌ ಮತ್ತು ಡೇನಿಯಲ್‌ ಗಿಲ್ಬರ್ಟ್‌ ಆ ಸಮಸ್ಯೆಗೆ ಒಂದು ಪರಿಹಾರ ಸೂಚಿಸುತ್ತಾರೆ. ನೀವು ಮನೆಯಲ್ಲಿ ಕಸಗುಡಿಸುವುದರಿಂದ ಹಿಡಿದು, ಕಚೇರಿಯ ಕೆಲಸದವರೆಗೆ ಯಾವುದೇ ಕೆಲಸ ಮಾಡುತ್ತಿರಿ. ಆ ಕೆಲಸದ ಮೇಲೆಯೇ ನಿಮ್ಮ ಪೂರ್ಣಗಮನ ಇರುವಂತೆ ನೋಡಿಕೊಳ್ಳಿ. ಕಸಗುಡಿಸುವವನು ತಾನು ಇದರ ಬದಲು ಟಿ.ವಿ ನೋಡುತ್ತಾ ಕೂರಬೇಕಿತ್ತು ಎಂದು ಯೋಚಿಸಬಾರದು, ಒಂದು ಬಟ್ಟೆ ಧರಿಸಿ ಹೊರಬಂದ ಮೇಲೆ, ಬೇರೆ ಬಟ್ಟೆ ಹಾಕಿಕೊಳ್ಳಬೇಕಿತ್ತು ಎಂದು ಯೋಚಿಸಬಾರದು…ಯಾವಾಗ ನಿಮ್ಮ ಮನಸ್ಸು ಹೆಚ್ಚು ಅಲೆದಾಡಲಾರಂಭಿಸುತ್ತದೋ ನಿಮ್ಮಲ್ಲಿ ಒತ್ತಡ ಸೃಷ್ಟಿಯಾಗುತ್ತದೆ. ಆಗಲೇ ಹೇಳಿದಂತೆ, ಒತ್ತಡವು ಟೆಲೋಮರ್‌ಗಳ ಮೇಲೆ ಪ್ರಭಾವ ಬೀರುತ್ತದೆ, ಟೆಲೋಮರ್‌ಗಳು ನಿಮ್ಮ ದೈಹಿಕ ಆರೋಗ್ಯಕ್ಕೆ ಹೊಡೆತ ನೀಡುತ್ತವೆ. ಮುಪ್ಪಿಗೆ ನೀವೇ ಆಹ್ವಾನ ನೀಡಿದಂತಾಗುತ್ತದೆ…

ಒಟ್ಟಲ್ಲಿ ಈ ಲೇಖನದ ಆಶಯ ಇಷ್ಟೇ- ನಗುನಗುತ್ತಾ ನೂರುಕಾಲ ಬಾಳಿ!

ಲೇಖಕರ ಕುರಿತು
ಬ್ರಯಾನ್‌ ರಾಬಿನ್‌ಸನ್‌ ಅಮೆರಿಕದ ಯೂನಿವರ್ಸಿಟಿ ಆಫ್ ನಾರ್ತ್‌ ಕೆರೊಲಿನಾದಲ್ಲಿ ಪ್ರಾಧ್ಯಾಪಕರಾಗಿದ್ದಾರೆ. 40ಕ್ಕೂ ಹೆಚ್ಚು ಪುಸ್ತಕಗಳನ್ನು ರಚಿಸಿರುವ ಅವರು, ವೃತ್ತಿಪರ ಸೈಕೋಥೆರಪಿಸ್ಟ್‌ ಆಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.

ಬ್ರಯಾನ್‌ ರಾಬಿನ್‌ಸನ್‌ ಪಿಎಚ್‌ಡಿ

Advertisement

Udayavani is now on Telegram. Click here to join our channel and stay updated with the latest news.

Next