ಬೆಂಗಳೂರು: ಕೃತಕ ಮೊಟ್ಟೆ ತಯಾರಿಕೆ ಸಾಧ್ಯವಿದೆ. ಆದರೆ ಅದರ ತಯಾರಿಕೆ ವೆಚ್ಚ ಸಾಕಷ್ಟು ದುಬಾರಿಯಾಗಿದ್ದು, ಇದುವರೆಗೆ ಈ ಮಾದರಿಯ ಮೊಟ್ಟೆಗಳು ಕಂಡು ಬಂದ ಉದಾಹರಣೆಗಳಿಲ್ಲ. ಕೆಲವು ದಿನಗಳಿಂದ ಜನರಲ್ಲಿ ಆತಂಕ ಸೃಷ್ಟಿಸಿರುವ ‘ಪ್ಲಾಸ್ಟಿಕ್ ಮೊಟ್ಟೆ’ಗಳ ಬಗ್ಗೆ ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧ ನಾಲಯ (ಸಿಎಫ್ಟಿಆರ್‌ಐ) ವಿಜ್ಞಾನಿಗಳು ಮತ್ತು ಪಶುಸಂಗೋಪನಾ ಇಲಾಖೆ ಅಧಿಕಾರಿಗಳ ಸ್ಪಷ್ಟನೆ ಇದು. ಫೇಸ್‌ಬುಕ್, ಯೂಟ್ಯೂಬ್ ಸಹಿತ ಎಲ್ಲೆಡೆ ‘ಪ್ಲಾಸ್ಟಿಕ್ ಮೊಟ್ಟೆ’ ವೀಡಿಯೋ ತುಣುಕುಗಳು ಹರಿದಾಡುತ್ತಿವೆ. ಆದರೆ ಪ್ಲಾಸ್ಟಿಕ್ ಮೊಟ್ಟೆಯನ್ನು ದೃಢಪಡಿಸಬೇಕಾದ ಪಶುಸಂಗೋಪನಾ ಇಲಾಖೆಗಾಗಲಿ, ಮೈಸೂರಿನಲ್ಲಿರುವ ಪ್ರತಿಷ್ಠಿತ ಸಿಎಫ್ಟಿಆರ್‌ಐನಲ್ಲಾಗಲಿ ಪರೀಕ್ಷೆ ಗಾಗಿ ಒಂದೇ ಒಂದು ಮೊಟ್ಟೆಯ ಮಾದರಿ ಬಂದಿಲ್ಲ ಹಾಗೂ ಮಾರುಕಟ್ಟೆಯಲ್ಲಿ ಕೃತಕ ಮೊಟ್ಟೆ ಪತ್ತೆಯಾದ ಮತ್ತು ದೃಢಪಟ್ಟ ಉದಾಹರಣೆಗಳೂ ಇಲ್ಲ.
ಈ ಸಂಬಂಧ ‘ಉದಯವಾಣಿ’ಯೊಂದಿಗೆ ಸಿಎಫ್ಟಿಆರ್‌ಐ ವಿಜ್ಞಾನಿ ಪ್ರೊ| ರಾಮ ರಾಜಶೇಖರ್ ಮಾತನಾಡಿ, ‘ಸಿಂಥೆಟಿಕ್ ಪಾಲಿಮರ್, ಜಿಪ್ಸಂ ಪೌಡರ್, ಕ್ಯಾಲ್ಸಿಯಂ ಕಾರ್ಬೋನೇಟ್ ಕಾಂಪೋಸ್ಟ್ ಸೆಲ್‌ನಂತಹ ರಾಸಾಯನಿಕ ಪದಾರ್ಥಗಳಿಂದ ಕೃತಕ ಮೊಟ್ಟೆಯನ್ನು ತಯಾರಿಸಬಹುದು. ಆದರೆ ಇದು ತುಂಬಾ ದುಬಾರಿ. ಅಷ್ಟಕ್ಕೂ ಇಂಥ ಕೃತಕ ಮೊಟ್ಟೆಗಳು ಇದುವರೆಗೆ ಕಂಡುಬಂದಿಲ್ಲ ಎಂದು ಸ್ಪಷ್ಟಪಡಿಸಿದರು.
ಪ್ಲಾಸ್ಟಿಕೇ ದುಬಾರಿ : ಇನ್ನು ಮಾರುಕಟ್ಟೆಯಲ್ಲಿ ಪ್ಲಾಸ್ಟಿಕ್ ಮೊಟ್ಟೆ ಬರಲು ಸಾಧ್ಯವೇ ಇಲ್ಲ ಎನ್ನುವ ಮೊಟ್ಟೆ ವಿತರಕರು, ಪ್ಲಾಸ್ಟಿಕ್ ಮೊಟ್ಟೆ ಸಿಕ್ಕಿದೆ ಎಂಬ ವರದಿಗಳನ್ನು ಸಂಪೂರ್ಣವಾಗಿ ಅಲ್ಲಗಳೆಯುತ್ತಾರೆ. ಮೊಟ್ಟೆ ಬಣ್ಣದ ಹಾಗೂ ಆ ಗುಣಮಟ್ಟದ ಪ್ಲಾಸ್ಟಿಕ್ ಕೆ.ಜಿ.ಗೆ 150ರಿಂದ 160 ರೂ. ಇದೆ. ಆದರೆ ಮೊಟ್ಟೆ ಕೆ.ಜಿ.ಗೆ 60 ರೂ. ಆಗುತ್ತದೆ. ಹೀಗಿರುವಾಗ ದುಬಾರಿ ಮೊತ್ತ ಕೊಟ್ಟು ವ್ಯಾಪಾರಿಗಳಿಗೆ ಪ್ಲಾಸ್ಟಿಕ್ ಮೊಟ್ಟೆಯನ್ನು ತಯಾರಿಸುವ ಅಗತ್ಯ ಏನಿದೆ ಎಂದು ರಾಷ್ಟ್ರೀಯ ಮೊಟ್ಟೆ ಸಮನ್ವಯ ಸಮಿತಿ ಅಧ್ಯಕ್ಷ ಸಾಯಿನಾಥ್ ಪ್ರಶ್ನಿಸುತ್ತಾರೆ. ಪ್ಲಾಸ್ಟಿಕ್ ಮೊಟ್ಟೆ ಅಗತ್ಯವೇ ಇಲ್ಲ: ಒಂದು ಮೊಟ್ಟೆ 55 ಗ್ರಾಂ ಇರುತ್ತದೆ. ಒಳಗಿರುವ ಹಳದಿ ಬಣ್ಣದ ಶೆಲ್ ತೆಗೆದರೆ ಉಳಿಯುವುದು 50 ಗ್ರಾಂ ಬಿಳಿಪದರ. ಅದನ್ನು ಪ್ಲಾಸ್ಟಿಕ್‌ನಿಂದ ತಯಾರಿಸಿದರೆ 9 ರೂ. ಖರ್ಚಾಗುತ್ತದೆ. ಆದರೆ ಮಾರುಕಟ್ಟೆಯಲ್ಲಿ ಮೊಟ್ಟೆ ಬೆಲೆಯೇ 4ರಿಂದ 5 ರೂ. ಇರುವುದು. ದೀರ್ಘಕಾಲ ಇಡಬಹುದು ಎಂದಾದರೂ ಖರ್ಚು ಹೆಚ್ಚು. ಮಾರುಕಟ್ಟೆಯಲ್ಲಿ ಮೊಟ್ಟೆಗೆ ಬೇಡಿಕೆ ಇದ್ದೇ ಇದೆ. ಹಾಗಾಗಿ ಕೃತಕ ಮೊಟ್ಟೆ ತಯಾರಿಸುವ ಪ್ರಮೇಯವೇ ಬರುವುದಿಲ್ಲ ಎಂದು ಮೈಸೂರಿನ ಪೌಲ್ಟ್ರಿ ಫಾರಂ ಮಾಲಕ ಸುರೇಶ್‌ಬಾಬು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮಾದರಿ ತಂದು ಕೊಡಿ: ಕೃತಕ ಮೊಟ್ಟೆ ಕಂಡುಬಂದರೆ ಇಲಾಖೆಗೆ ಅದರ ಮಾದರಿ ಕಳುಹಿಸಲಿ. ಅದನ್ನು ಪ್ರಯೋಗಾಲಯಕ್ಕೆ ಕಳುಹಿಸಿ ಪರೀಕ್ಷೆಗೊಳಪಡಿಸಿ ದೃಢಪಡಿಸಲಾಗುವುದು ಎಂದು ಪಶುಸಂಗೋಪನಾ ಇಲಾಖೆಯ ಪೌಲ್ಟ್ರಿ ವಿಭಾಗದ ಉಪ ನಿರ್ದೇಶಕ ಡಾ| ಶಿವಶಂಕರಮೂರ್ತಿ ತಿಳಿಸಿದ್ದಾರೆ.
ಪ್ಲಾಸ್ಟಿಕ್ ಮೊಟ್ಟೆ ಪತ್ತೆ ಹೀಗೆ
ಖರೀದಿಸಿದ ಮೊಟ್ಟೆಯನ್ನು ಅಲ್ಲಾಡಿಸಿದಾಗ ಅದರೊಳಗಿನ ದ್ರವ ಪದಾರ್ಥದ ಶಬ್ದ ಸ್ಪಷ್ಟವಾಗಿ ಕೇಳಿಸುತ್ತದೆ. ಒಂದು ವೇಳೆ ಕೇಳಲಿಲ್ಲ ಎಂದಾದಲ್ಲಿ ಅದು ಕೆಟ್ಟಿರಬಹುದು ಅಥವಾ ಕೃತಕ ಮೊಟ್ಟೆಯಾಗಿರುತ್ತದೆ. ಮೊಟ್ಟೆಯ ಚೂರುಗಳನ್ನು ಬೆಂಕಿಗೆ ಹಿಡಿದಾಗ ಪ್ಲಾಸ್ಟಿಕ್ ಸುಟ್ಟ ವಾಸನೆ ಬಂದರೂ ಅದರ ನೈಜತೆ ಗೊತ್ತಾಗುತ್ತದೆ.
ನೀರಲ್ಲಿ ಹಾಕಿದರೆ ಪ್ಲಾಸ್ಟಿಕ್ ಅಕ್ಕಿ ತೇಲಾಡುತ್ತೆ
ಪ್ಲಾಸ್ಟಿಕ್ ಅಕ್ಕಿಯನ್ನು ಗುರುತಿಸುವುದು ಬಹುಸುಲಭ. ನೀರಲ್ಲಿ ಹಾಕಿದರೆ ಸಾಕು ಅದು ತೇಲಾಡುತ್ತೆ.
ಪ್ಲಾಸ್ಟಿಕ್ ಅಕ್ಕಿ ಮತ್ತು ಮೊಟ್ಟೆ
ಉತ್ಪಾದನೆ ಅಷ್ಟು ಸುಲಭವಲ್ಲ. ಪ್ಲಾಸ್ಟಿಕ್ ಅಕ್ಕಿ ಮತ್ತು ಮೊಟ್ಟೆಯನ್ನು ತಯಾರಿಸಿ ಮಾರುವುದು ಎಂದರೆ ವೆಚ್ಚದಾಯಕ. ಹೀಗಿರುವಾಗ ಯಾರು ಈ ಕೆಲಸ ಮಾಡೋದಕ್ಕೆ ಸಾಧ್ಯ? ಅದೇನು ಬೆಲೆ ಬಾಳುವ ವಸ್ತುವೇ?
– ರಮೇಶ್‌ಕುಮಾರ್, ಆರೋಗ್ಯ ಸಚಿವ